ಬೆಂಗಳೂರು: ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ 10 ಸಾವಿರ ಶಿಕ್ಷಕರ ಹುದ್ದೆಯ ಭರ್ತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಪ್ರಕಟಿಸಲಿದ್ದಾರೆ.
6 ಮತ್ತು 8ನೇ ತರಗತಿಯಲ್ಲಿ ಖಾಲಿ ಇರುವ ಗಣಿತ ಮತ್ತು ವಿಜ್ಞಾನದ 4,233, ಆಂಗ್ಲ ಭಾಷೆಯ 4,531 ಹಾಗೂ ಸಮಾಜ ಪಾಠದ 1,236 ಹುದ್ದೆ ಸೇರಿ 10 ಸಾವಿರ ಪದವೀಧರ ಶಿಕ್ಷಕ ಹುದ್ದೆಗಳಿಗೆ ಪದವಿ ಜತೆಗೆ ಬಿ.ಇಡಿ
ಪೂರೈಸಿದ ಅಭ್ಯರ್ಥಿಗಳಿಂದ 2017ರ ಸೆಪ್ಟೆಂಬರ್ ಅಂತ್ಯದಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.
ಕೇಂದ್ರೀಕೃತ ದಾಖಲಾತಿ ಘಟಕದ (ಸಿಎಸಿ) ಮೂಲಕ ಜಿಲ್ಲಾಮಟ್ಟದಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಜಿಲ್ಲಾ ಉಪ ನಿರ್ದೇಶಕರು ಉತ್ತರ ಪತ್ರಿಕೆಯ ಮೌಲ್ಯ ಮಾಪನ ನಡೆಸಿದ್ದಾರೆ. ಪರೀಕ್ಷೆಯ ಕೀ ಉತ್ತರ ಗಳನ್ನು ವೆಬ್‌ಸೈಟ್‌ನಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಯಿಂದಾಗಿ ಫಲಿತಾಂಶ ಪ್ರಕಟವಾಗಿರಲಿಲ್ಲ. ಮಂಗಳವಾರ ಬೆಂಗಳೂರಿನ ಸರ್ವ ಶಿಕ್ಷಾ ಅಭಿಯಾನದ ಕಚೇರಿಯಲ್ಲಿ ಬೆಳಗ್ಗೆ 11.30ಕ್ಕೆ ಶಿಕ್ಷಣ ಸಚಿವರು ಫಲಿತಾಂಶ ಘೋಷಣೆ ಮಾಡಲಿದ್ದಾರೆ. ಎಲ್ಲಾ ಹುದ್ದೆಗಳು ನೇರ ನೇಮಕಾತಿ ವಿಧಾನದಲ್ಲೇ ಭರ್ತಿಯಾಗಲಿವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
600 ಕೃಷಿ ಸಹಾಯಕರಿಗೆ ನೇಮಕಾತಿ
ಮೈಸೂರು: ಕೃಷಿ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ತುಂಬಲು ಈಗಾಗಲೇ ಆಯ್ಕೆಯಾಗಿರುವ 600 ಕೃಷಿ ಸಹಾಯಕರಿಗೆ ನೇಮಕಾತಿ ಆದೇಶ ಹೊರಡಿಸಲಾಗುವುದು. ಇಲಾಖೆಯಲ್ಲಿ ಖಾಲಿ ಇರುವ 3,000 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನು 5 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ರೈತರೊಂದಿಗೆ ಆಯೋಜಿಸಿದ್ದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರಗಳ ಅಗತ್ಯತೆಗೆ ಅನುಗುಣವಾಗಿ ದಾಸ್ತಾನು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ 1803 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ದಾವಣೆಗೆರೆ ಜಿಲ್ಲೆಯೊಂದರಲ್ಲೇ 1310 ಹೆಕ್ಟೇರ್ ಬೆಳೆ ನಷ್ಟವಾಗಿದೆ. ತುಮಕೂರು, ಚಾಮರಾಜ ನಗರ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ ಎಂದು ತಿಳಿಸಿದರು.