ಬೆಂಗಳೂರು: ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಡಾ.ಬರ್ನಾರ್ಡ್ ಮೊರಾಸ್ ಅವರ 50ನೇ ಗುರುದೀಕ್ಷೆಯ ಸುವರ್ಣ ಮಹೋತ್ಸವ ಡಿ.6ರ ಸಂಜೆ 5 ಗಂಟೆಗೆ ನಗರದ ಕೋಲ್ಸ್ ಪಾರ್ಕ್ ಬಳಿ ಇರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರಧಾನಾಲಯದಲ್ಲಿ ನಡೆಯಲಿದೆ.
ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು ಹಾಗೂ ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರಾದ ಡಾ.ಬರ್ನಾರ್ಡ್ ಮೊರಾಸ್ ತಮ್ಮ ಗುರು ದೀಕ್ಷೆಯ ಸುವರ್ಣ ಮಹೋತ್ಸವವನ್ನು ಬುಧವಾರ ಸಂಜೆ
ಆಚರಿಸಲಿರುವರು. ಕಾರ್ಯಕ್ರಮದಲ್ಲಿ ಡಾ.ಬರ್ನಾರ್ಡ್ ಮೊರಾಸ್ ಅವರು ಕರ್ನಾಟಕದ ಹಾಗೂ ಇತರ ಧರ್ಮಾಧ್ಯಕ್ಷರು,
ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ಭಕ್ತ ಜನತೆಯೊಂದಿಗೆ ಕೃತಜ್ಞತಾ ಬಲಿಪೂಜೆ ಅರ್ಪಿಸಲಿದ್ದಾರೆ. ಬಲಿಪೂಜೆಯ ನಂತರ ಸಂಜೆ 7ಕ್ಕೆ ಮಹಾಧರ್ಮಾಧ್ಯಕ್ಷರಿಗೆ ಸುವರ್ಣ ಮಹೋತ್ಸವದ ಶುಭ ಹಾರೈಕೆಯನ್ನು ಕೋರಿ ಸನ್ಮಾನಿಸಲಾಗುವುದು.
ರಾತ್ರಿ 8 ಗಂಟೆಗೆ ಸಹಭೋಜನ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನ ನಿಲುಗಡೆಗಾಗಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರಧಾನಾಲಯ ಹಾಗೂ ಸಂತ ಜರ್ಮೆನ್ಸ್ ವಿದ್ಯಾಸಂಸ್ಥೆಯ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಹಿನ್ನೆಲೆ ಮತ್ತು ಸಾಧನೆ: 1941ರ ಆ.10ರಂದು ಫ್ರಾನ್ಸಿಸ್ ಮೊರಾಸ್-ಮೊಂಥಿನಾ ಮೊರಾಸ್ ದಂಪತಿಯ ಪುತ್ರನಾಗಿ ಜನಿಸಿದ ಡಾ.ಬರ್ನಾರ್ಡ್ ಮೊರಾಸ್ ಅವರು, 1967ರ ಡಿ.6ರಂದು ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು, ನವದೆಹಲಿಯಲ್ಲಿ ಆಸ್ಪತ್ರೆ ಆಡಳಿತದಲ್ಲಿ ಡಿಪ್ಲೊಮಾ ಕೋರ್ಸ್ ಪೂರೈಸಿ, ಗ್ರಾಮೀಣ ವೈದ್ಯಕೀಯ ಸೇವೆ ಕುರಿತ ಡಿಪ್ಲೊಮಾ ಅಧ್ಯಯನ ಮಾಡಿದ್ದಾರೆ. ಸೇಂಟ್ ಆ್ಯಂಟನಿ ಚಾರಿಟೇಬಲ್ ಸಂಸ್ಥೆಯ ಸಹಾಯಕ ನಿರ್ದೇಕರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಮಂಗ ಳೂರಿನ ಪ್ರಸಿದ್ಧ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಸಹಾಯಕ ನಿರ್ದೇಶಕರಾಗಿಯೂ ತಮ್ಮ ಅಮೂಲ್ಯ ಸೇವೆ ನೀಡಿದ್ದಾರೆ. ಅಪ್ರತಿಮ ಸೇವೆಗಾಗಿ ಭಾರತೀಯ ಕೆಥೋಲಿಕ್ ಆಸ್ಪತ್ರೆಗಳ ಅಸೋಸಿಯೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸ್ಥಾನ ಲಭಿಸಿದೆ. 1980ರಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ನೇಮಕ ಗೊಂಡಿದ್ದರು. 1996ರ ಡಿ.31ರಂದು ಬೆಳಗಾವಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಆಗಿ ನಿಯುಕ್ತಿ ಹೊಂದಿದ್ದಾರೆ.
ಕರ್ನಾಟಕ ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಆರ್ಚ್‌ಬಿಷಪ್ ಡಾ. ಬರ್ನಾರ್ಡ್ ಮೊರಾಸ್ ಅವರು ಜನಸೇವೆ, ಶಿಕ್ಷಣ, ಆರೋಗ್ಯ ವಲಯಗಳಲ್ಲಿ ತಮ್ಮ ನಿಸ್ವಾರ್ಥ ಕಾಯಕದಿಂದಲೇ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ
ಜಿಲ್ಲೆಯ ಮಂಗಳೂರು ಸಮೀಪದ ಕುಪ್ಪೆಪದವಿನಿಂದ ರೋಮ್‌ವರೆಗೆ ಕ್ರೈಸ್ತ ಧರ್ಮದ ಧಾರ್ಮಿಕ, ಸಾಮಾಜಿಕ
ಕೆಲಸಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.