Advertisement

ರಂಗಾಯಣದಲ್ಲಿ ಇಂದಿನಿಂದ 34 ದಿನ ಗ್ರೀಷ್ಮ ರಂಗೋತ್ಸವ

09:47 PM May 18, 2019 | Lakshmi GovindaRaj |

ಮೈಸೂರು: ಇತ್ತೀಚೆಗೆ ನಿಧನರಾದ ಹಿರಿಯ ರಂಗಕರ್ಮಿ ಎಸ್‌.ಮಾಲತಿ ಅವರ ನೆನಪಿನಲ್ಲಿ ಮೈಸೂರು ರಂಗಾಯಣ ಮೇ 19ರಿಂದ ಜೂನ್‌ 23 ರವರೆಗೆ ಗ್ರೀಷ್ಮ ರಂಗೋತ್ಸವ ಹವ್ಯಾಸಿ ನಾಟಕೋತ್ಸವ ಹಮ್ಮಿಕೊಂಡಿದೆ.

Advertisement

ರಂಗಾಯಣದಲ್ಲಿ ಶನಿವಾರ ನಾಟಕೋತ್ಸವದ ಭಿತ್ತಿಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ರಂಗಾಯಣದ ಜಂಟಿ ನಿರ್ದೇಶಕ ವಿ.ಎಸ್‌.ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ ಪ್ರತಿ ವರ್ಷ ಖ್ಯಾತ ರಂಗಕರ್ಮಿಗಳ ನೆನಪಿನಲ್ಲಿ ರಂಗೊತ್ಸವ ಆಯೋಜಿಸುತ್ತಿದ್ದು, ಈ ಬಾರಿ ಇತ್ತೀಚೆಗೆ ನಿಧನರಾದ ಹಿರಿಯ ರಂಗನಟಿ, ನಿರ್ದೇಶಕಿ, ನಾಟಕಕಾರ್ತಿ ಎಸ್‌.ಮಾಲತಿ ಅವರ ನೆನಪಿನಲ್ಲಿ ಗ್ರೀಷ್ಮ ರಂಗೋತ್ಸವ ಆಯೋಜಿಸಿರುವುದಾಗಿ ತಿಳಿಸಿದರು.

ರಂಗಾಯಣದ ಭೂಮಿಗೀತದಲ್ಲಿ ಪ್ರತಿ ಭಾನುವಾರ ಸಂಜೆ 6.30ಕ್ಕೆ ರಾಜ್ಯದ ನಾನಾ ಹವ್ಯಾಸಿ ರಂಗತಂಡಗಳು ಅತ್ಯುತ್ತಮವಾದ ನಾಟಕ ಪ್ರದರ್ಶನ ನೀಡಲಿವೆ. ಒಟ್ಟು 7 ನಾಟಕಗಳು ಗ್ರೀಷ್ಮ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು.

ಮೇ 19 ರಂದು ಸಂಜೆ 6ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಹಿರಿಯ ರಂಗ ನಿರ್ದೇಶಕ ಪ್ರೊ.ಎಚ್‌.ಎಸ್‌.ಉಮೇಶ್‌ ಗ್ರೀಷ್ಮ ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಂಗ ನಿರ್ದೇಶಕಿ ಕೆ.ಆರ್‌.ಸುಮತಿ ಭಾಗವಹಿಸಲಿದ್ದು, ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ ಅಧ್ಯಕ್ಷತೆವಹಿಸಲಿದ್ದಾರೆ ಎಂದು ಹೇಳಿದರು.

ಬಹುರೂಪಿಯಲ್ಲಿ ಎಲ್ಲಾ ಭಾಷೆಗಳ ನಾಟಕಗಳಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ನಾಡಿನ ಹವ್ಯಾಸಿಗಳ ರಂಗತಂಡಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷವೂ ಗ್ರೀಷ್ಮ ಹವ್ಯಾಸಿ ರಂಗೋತ್ಸವ ಏರ್ಪಡಿಸಲಾಗುತ್ತದೆ.

Advertisement

ಈ ಬಾರಿಯ ಗ್ರೀಷ್ಮ ನಾಟಕೋತ್ಸವದಲ್ಲಿ ಮಾಲತಿ ಅವರೇ ರಂಗರೂಪಕ್ಕಿಳಿಸಿ ನಿರ್ದೇಶಿಸಿದ ನಾಟಕ “ಸ್ವಪ್ನ ಸಾರಸ್ವತ’ ಹಾಗೂ ಮಹಿಳಾ ಪ್ರಧಾನವಾಗಿರುವ “ಸಣಿಮ್ಮಿಯ ಲವ್‌ ಪುರಾಣ’ ಮತ್ತು “ಕೌದಿ’ ಏಕವ್ಯಕ್ತಿ ನಾಟಕ ಪ್ರದರ್ಶನ ಒಂದೇ ದಿನ ನಡೆಯಲಿವೆ.

ಚಾರ್ವಾಕ ತಂಡವು ಬುದ್ಧನ ಜೀವನ ಚರಿತ್ರೆಯ ಕುರಿತಾದ “ಬುದ್ಧಯಾನ’ ಆರು ಗಂಟೆಗಳ ನಾಟಕ ಪ್ರಯೋಗವನ್ನು ಎರಡೂವರೆ ಗಂಟೆಗೆ ಇಳಿಸಿ ಪ್ರದರ್ಶಿಸಲಿದೆ ಎಂದು ಹೇಳಿದರು. ಮೇ 19ರಂದು ಬೆಂಗಳೂರಿನ ದೃಶ್ಯಕಾವ್ಯ ತಂಡ ಅಭಿನಯಿಸುವ ಕೆ.ವೈ.ನಾರಾಯಣಸ್ವಾಮಿ ರಚನೆಯ ನಂಜುಂಡೇಗೌಡ ನಿರ್ದೇಶನದ ಮಾಯಾಬೇಟೆ ನಾಟಕ ಪ್ರದರ್ಶನಗೊಳ್ಳಲಿದೆ.

ಮೇ 26 ರಂದು ಮೈಸೂರಿನ ಚಾರ್ವಾಕ ಟ್ರಸ್ಟ್‌ನ ಕಲಾವಿದರು ಅಭಿನಯಿಸುವ ಗಿರೀಶ್‌ ಮಾಚಳ್ಳಿ ರಚನೆ ಮತ್ತು ನಿರ್ದೇಶನದ ಬುದ್ಧಯಾನ, ಜೂ. 2 ರಂದು ದು.ಸರಸ್ವತಿ ರಚನೆಯ ದೀಪಕ್‌ ಶ್ರೀನಿವಾಸನ್‌ ನಿರ್ದೇಶನದ ಸಣಿಮ್ಮಿಯ ಲವ್‌ ಪುರಾಣ, ಅದೇ ದಿನ ವಾಣಿ ಪೆರಿಯೋಡಿ ರಚನೆಯ ದೀಪಕ್‌ ಶ್ರೀನಿವಾಸನ್‌ ನಿರ್ದೇಶನದ ಕೌದಿ,

ಜೂ.9ರಂದು ಉಡುಪಿಯ ಸುಮನಸಾ ಕೊಡವೂರು ತಂಡದಿಂದ ರವೀಂದ್ರನಾಥ್‌ ಟಾಗೋರ್‌ ಅವರ ಗುರುರಾಜ ಮಾಂರ್ಪಳ್ಳಿ ನಿರ್ದೇಶನದ ರಥಯಾತ್ರೆ, ಜೂ.16 ರಂದು ಕೋಲಾರದ ಸಾರಂಗ ತಂಡದಿಂದ ಪಿಚ್ಚಿಳ್ಳಿ ಶ್ರೀನಿವಾಸ್‌ ನಿರ್ದೇಶನದ ಕುವೆಂಪು ಅವರ ಜಲಗಾರ, ಜೂ.22ರಂದು ಮಂಡ್ಯದ ಜನದನಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ಮಂಜುನಾಥ್‌ ಎಲ್‌. ಬಡಿಗೇರ ನಿರ್ದೇಶನದ ಪ್ರಸನ್ನ ಅವರ ಮಮಾಪುರ,

ಜೂ.23 ರಂದು ತೀರ್ಥಹಳ್ಳಿಯ ನಟ ಮಿತ್ರರು ತಂಡದಿಂದ ಗೋಪಾಲಕೃಷ್ಣ ಪೈ ಅವರ ಕಾದಂಬರಿ ಆಧರಿಸಿ ಎಸ್‌.ಮಾಲತಿ ಅವರ ರಂಗರೂಪಕ್ಕಿಳಿಸಿ ನಿರ್ದೇಶನ ಮಾಡಿ ಸ್ವಪ್ನ ಸಾರಸ್ವತ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next