ಭಾರತ ಕೃಷಿ ಪ್ರಧಾನವಾದ ದೇಶ. ದೇಶದ ಆರ್ಥಿಕತೆಯ ಜೀವಾಳವಾಗಿ ರುವ ಈ ಕ್ಷೇತ್ರದಲ್ಲಿ ದುಡಿಯುವ ರೈತರು ದೇಶದ ಬೆನ್ನೆಲುಬು. ಈ ಕಾರಣ ಕ್ಕಾಗಿಯೇ ಪ್ರತಿಯೊಂದು ಸರಕಾರಕ್ಕೂ ಕೃಷಿ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ. ಪ್ರತೀ ಆಯವ್ಯಯ ಪತ್ರದಲ್ಲೂ ಕೃಷಿಕರಿಗೆ ಕೆಲವಾದರೂ ಕೊಡುಗೆಗಳು ಇದ್ದೇ ಇರುತ್ತವೆ. ಇಷ್ಟೆಲ್ಲ ಆದರೂ ವರ್ಷಗಳು ರುಳಿದಂತೆಯೇ ದೇಶದ ಕೃಷಿರಂಗ ಸೊರಗುತ್ತಿದೆ. ಕೃಷಿಯತ್ತ ಒಲವು ತೋರಿಸುವ ವಿದ್ಯಾವಂತ ಯುವಕರ ಸಂಖ್ಯೆ ನಿರಾಶಾದಾಯಕ. ಇದೊಂದು ಗೌರವದ ಉದ್ಯೋಗವಲ್ಲ ಎಂಬ ಭಾವನೆ ಯುವಕ ರಲ್ಲಿ ಬೆಳೆದು ಬರುತ್ತಿದೆ. ಸರಕಾರಿ ಅಥವಾ ಖಾಸಗಿ ನೌಕರರಿಗಿರುವಂತೆ ಕೃಷಿ ಕೆಲಸಕ್ಕೆ ಸುಸಜ್ಜಿತ ಕಚೇರಿ ಗಳಿಲ್ಲ. ಹೊಲಗದ್ದೆ, ತೋಟಗಳೇ ಕೃಷಿಕರ ಶ್ರಮದ ತಾಣ. ಮಣ್ಣು, ಕೆಸರು, ಹಸುರು, ಪ್ರಾಣಿಪಕ್ಷಿಗಳ ನಡುವೆ ಇವರ ದುಡಿಮೆ. ಕೃಷಿ ಕುಟುಂಬದ ಯುವಕರೂ ವಿದ್ಯಾವಂತರಾದ ತತ್‌ಕ್ಷಣ ಅನ್ಯ ಕೆಲಸವನ್ನರಸಿ ನಗರದ ಕಡೆಗೆ ವಲಸೆ ಹೋಗಲು ಇದೂ ಒಂದು ಕಾರಣ ಎನ್ನಬಹುದು. ಕೃಷಿಯನ್ನೇ ನಂಬಿಕೊಂಡು ಬಂದ ಕುಟುಂಬದ ಹಿರಿಯರೂ ತಮ್ಮ ಮಕ್ಕಳು ಬೇರೆ ಯಾವುದಾದರೂ ಗೌರವದ ಕೆಲಸಕ್ಕೆ ಸೇರಿ ಸುಖ ಪಡಲಿ ಎಂದು ಅಪೇಕ್ಷಿಸುತ್ತಾರೆ. ಬೇರೆ ಎಲ್ಲ ಉದ್ಯೋಗದವರೂ ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೆ, ಕೃಷಿಕನೋರ್ವ ತಾನು ಕೃಷಿಕ ಎಂದು ಹೇಳಿಕೊಳ್ಳಲೂ ಹಿಂಜರಿಯುತ್ತಾನೆ. ಬೇರೆ ಕೆಲಸಗಳಿಗೆ ಇದ್ದಷ್ಟು ಗೌರವ, ಭದ್ರತೆ, ನಿಗದಿತ ಆದಾಯ ಕೃಷಿ ಕೆಲಸಕ್ಕಿಲ್ಲ. ಹಾಗಾಗಿ ಮದುವೆಯಾಗುವ ಯುವತಿಯರು ಕೃಷಿ ಕ್ಷೇತ್ರದ ಯುವಕರನ್ನು ಆಯ್ಕೆ ಮಾಡಲು ಹಿಂಜರಿಯುತ್ತಾರೆ.
ಇದೀಗ ಎಲ್ಲ ವೃತ್ತಿಗಳಲ್ಲೂ ಕೌಶಲಕ್ಕೆ ವಿಶೇಷ ಮಹತ್ವ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಾಮರ್ಥ್ಯವನ್ನು ಹೆಚ್ಚಿಸಲು ಆಗಾಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಇದರಿಂದ ನೌಕರರ ಸಾಮರ್ಥ್ಯ ಹೆಚ್ಚುವುದರೊಂದಿಗೆ ಆ ಕ್ಷೇತ್ರವೂ ಸುಧಾರಣೆಗಳತ್ತ ಹೆಜ್ಜೆ ಇಡುತ್ತದೆ. ಆದರೆ ಕೃಷಿಯನ್ನು ಕೈಗೆತ್ತಿಕೊಂಡ ವಿದ್ಯಾವಂತ ಯುವ ಕೃಷಿಕರಿಗೆ ಈ ಕೌಶಲಾಭಿವೃದ್ಧಿಯ ಯೋಜನೆಗಳಿ ವೆಯೇ? ಇವರ ಪಾಲಿಗೆ ಇಂಥ ತರಬೇತಿಗಳು ಕಡಿಮೆ ಎಂದೇ ಹೇಳಬಹುದು. ಇಂತಹ ತರಬೇತಿ ಕಾರ್ಯಕ್ರಮಗಳು ನಡೆದರೂ ಅದು ಬೆರಳೆಣಿಕೆಯ ಕೃಷಿಕರನ್ನಷ್ಟೇ ತಲುಪುತ್ತವೆ.
Advertisement
ಕೃಷಿಯಲ್ಲಿ ಬಳಸಬಹುದಾದ ತಂತ್ರಜ್ಞಾನ, ಕೃಷಿ ಯಲ್ಲಿನ ಸುಧಾರಣೆ, ಅದನ್ನು ಲಾಭದಾಯಕ ವಾಗಿರಿಸುವತ್ತ ಸೂಕ್ತ ಮಾರ್ಗದರ್ಶನ ಮೊದಲಾದ ವಿಷಯಗಳಲ್ಲಿ ವಿದ್ಯಾವಂತ ಯುವಕರಿಗೆ ಆಗಾಗ ತರಬೇತಿಯನ್ನು ಸರಕಾರ ಅಥವಾ ಇತರ ಸಂಸ್ಥೆಗಳು ಆಯೋಜಿಸಿದರೆ ಕೃಷಿ ಕ್ಷೇತ್ರವೂ ಸ್ವಲ್ಪ ಕಳೆಗಟ್ಟಬಹುದು. ತಾಲೂಕು ಅಥವಾ ಗ್ರಾಮ ಮಟ್ಟಗಳಲ್ಲಿ ಆಗಾಗ ಇಂಥ ತರಬೇತಿ, ತಜ್ಞರ ಉಪನ್ಯಾಸ ಹಾಗೂ ಸಂವಾದಗಳನ್ನು ಆಯೋಜಿಸಿದರೆ ಕೃಷಿ ಕ್ಷೇತ್ರದ ಸಮಸ್ಯೆಗಳಿಗೂ ಪರಿಹಾರ ಸಿಗಬಹುದು. ಆದರೆ ಇಂತಹ ತರಬೇತಿ, ವಿಚಾರಸಂಕಿರಣ, ಉಪನ್ಯಾಸ ಕಾರ್ಯಕ್ರಮಗಳ ಬಗೆಗೆ ರೈತರಲ್ಲಿ ಆಸಕ್ತಿ ಮೂಡಿಸುವ ಕಾರ್ಯವೂ ಆಗಬೇಕಿದೆ. ಕಾಟಾಚಾರಕ್ಕೆ ಎಂಬಂತೆ ಈ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಅವುಗಳ ನೈಜ ಉದ್ದೇಶ ಈಡೇರಲಾರದು.
ಕುಮಾರವ್ಯಾಸನು ಕೃಷಿ ಮೊದಲು ಸರ್ವಕ್ಕೆ ಎಂದನು. ಸರ್ವಜ್ಞನು ಕೋಟಿ ವಿದ್ಯೆಗಳಲಿ ನಾಟಿ ವಿದ್ಯೆಯೇ ಮೇಲು ಎಂದನು. ಕೃಷಿ ಕ್ಷೇತ್ರದ ಸಮಸ್ಯೆ ಗಳನ್ನು ಪರಿಹರಿಸಿ ವಿದ್ಯಾವಂತ ಯುವಕರು ಈ ಕ್ಷೇತ್ರದತ್ತ ಹೆಚ್ಚಿನ ಒಲವು ತೋರಿಸುವಂತೆ ಸರಕಾರವು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
Related Articles
Advertisement