Advertisement
ಗ್ರಾಹಕ ಸಂರಕ್ಷಣ ಕಾಯಿದೆದೇಶದಲ್ಲಿ ಮೊದಲ ಬಾರಿಗೆ 1986ರಲ್ಲಿ ಗ್ರಾಹಕ ಸಂರಕ್ಷಣ ಕಾಯಿದೆಯನ್ನು ಜಾರಿಗೆ ತರಲಾಯಿತು. ಸರಕು ಸಾಮಾಗ್ರಿಗಳ ಮಾರಾಟ ಹಾಗೂ ಖರೀದಿಯ ವೇಳೆ ಗ್ರಾಹಕ ಯಾವುದೇ ವಂಚನೆ ಗೊಳಗಾಗಬಾರದು ಮತ್ತು ಗ್ರಾಹಕ ಸುರಕ್ಷೆಯನ್ನು ಆದ್ಯತೆಯಾಗಿರಿಸಿಕೊಂಡು ಈ ಕಾಯಿದೆಯನ್ನು ರೂಪಿಸಲಾಗಿತ್ತು. ಈ ಕಾಯಿದೆಯ ಜಾರಿಯ ಬಳಿಕ ದೇಶದ ನಾಗರಿಕರಿಗೆ ಗ್ರಾಹಕ ಹಕ್ಕುಗಳ ಬಗೆಗೆ ಜಾಗೃತಿ ಮೂಡಲಾರಂಭಿಸಿತು.
1990ರ ದಶಕದ ಬಳಿಕ ಭಾರತದ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಳ್ಳುತ್ತಾಹೋಯಿತು. ಕೇಂದ್ರ ಸರಕಾರ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಯನ್ನು ದೇಶದಲ್ಲಿ ಜಾರಿಗೆ ತಂದ ಬಳಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಯು ಹೆಚ್ಚಾಯಿತು. ಇದರಿಂದ ಗ್ರಾಹಕರಿಗೂ ಹೆಚ್ಚಿನ ಆಯ್ಕೆಗಳು ದೊರೆತವು. ಸಹಜವಾಗಿಯೇ ಮಾರುಕಟ್ಟೆಯಲ್ಲಿ ಪೈಪೋಟಿ ಆರಂಭವಾಗಿ ಬೆಲೆ ಇಳಿಕೆಗೆ ಕಾರಣವಾಯಿತು. ಆದರೆ ಈ ಪೈಪೋಟಿಯ ಭರದಲ್ಲಿ ವಸ್ತುಗಳ ಗುಣಮಟ್ಟದಲ್ಲಿ ಇಳಿಕೆ ಕಂಡುಬಂತು. ಇದರಿಂದ ಪರೋಕ್ಷವಾಗಿ ಗ್ರಾಹಕರ ಶೋಷಣೆಗೊಳಗಾಗುವಂತಾಯಿತು. ಹೀಗಾಗಿ ದಿನಗಳುರುಳಿದಂತೆ ಸ್ಪರ್ಧಾತ್ಮಕ ಮಾರುಕಟ್ಟೆಯ ಮೇಲಿನ ಗ್ರಾಹಕರ ನಂಬಿಕೆಯು ಕಡಿಮೆಯಾಯಿತು. ಈ ಸಂದರ್ಭದಲ್ಲಿ ದೇಶದಲ್ಲಿ ಗ್ರಾಹಕ ಹಕ್ಕುಗಳ ಬಗೆಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಲಾರಂಭಿಸಿತು. ಅಷ್ಟು ಮಾತ್ರವಲ್ಲದೆ ಗ್ರಾಹಕ ವೇದಿಕೆಗಳು, ಗ್ರಾಹಕ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬಂದವು. ಕಾಲಕ್ರಮೇಣ ಗ್ರಾಹಕರಲ್ಲಿ ನಿಧಾನವಾಗಿ ತಮ್ಮ ಹಕ್ಕುಗಳ ಬಗೆಗೆ ಜಾಗೃತಿ ಮೂಡತೊಡಗಿತು. ಮತ್ತಷ್ಟು ಗ್ರಾಹಕಸ್ನೇಹಿಯಾದ ಕಾಯಿದೆ ಜಾರಿ
2019ರಲ್ಲಿ ಕೇಂದ್ರ ಸರಕಾರ ಸಂಸತ್‌ನಲ್ಲಿ ಹೊಸದಾಗಿ ಗ್ರಾಹಕ ಸಂರಕ್ಷಣ ಮಸೂದೆಯನ್ನು ಮಂಡಿಸಿತು. ಅನಂತರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣ ಸಚಿವಾಲಯವು 2020ರ ಜುಲೈಯಿಂದ ಈ ಹೊಸ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಗ್ರಾಹಕರನ್ನು ಮತ್ತಷ್ಟು ಸಶಕ್ತವನ್ನಾಗಿಸಿದವು. ಈ ಕಾಯಿದೆಯು ಗ್ರಾಹಕರಿಗೆ ರಕ್ಷಣೆಯ ಹಕ್ಕು, ಮಾಹಿತಿ ತಿಳಿಸುವ ಹಕ್ಕು, ಆಯ್ಕೆಯ ಹಕ್ಕು, ಕೇಳುವ ಹಕ್ಕು, ಪರಿಹಾರ ಕಂಡುಕೊಳ್ಳುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣದ ಹಕ್ಕನ್ನು ಒಳಗೊಂಡಿದೆ. ಎಲ್ಲ ಹಂತದ ಗ್ರಾಹಕ ಆಯೋಗಗಳ ಮೇಲೆ ನಿಯಂತ್ರಣ ಹೊಂದಿರುವ ಸಾಂವಿಧಾನಿಕ ಸಂಸ್ಥೆ ಗ್ರಾಹಕ ರಕ್ಷಣ ಪರಿಷತ್ ಸ್ಥಾಪನೆ ಈ ಕಾಯಿದೆಯ ಅತ್ಯಂತ ಮಹತ್ವದ ಅಂಶ.