Advertisement

ಇಂದು ಪೂಜ್ಯ ಗಾಂಧಿ ಜಯಂತಿ, ನಕಲಿ ಗಾಂಧಿಗಳ ಬಗ್ಗೆ ನಾನೇಕೆ ಮಾತನಾಡಬೇಕು?: ಸಿಎಂ ಕಿಡಿ

03:52 PM Oct 02, 2022 | Team Udayavani |

ಬೆಂಗಳೂರು : ಇಂದು ಗಾಂಧಿ ಜಯಂತಿ, ನಕಲಿ ಗಾಂಧಿಗಳ ಬಗ್ಗೆ ನಾನೇಕೆ ಮಾತನಾಡಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಭಾನುವಾರ ಕಿಡಿ ಕಾರಿದ್ದಾರೆ.

Advertisement

ಭಾನುವಾರ ಮಹಾತ್ಮ ಗಾಂಧಿಯವರ ಜನ್ಮದಿನದಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ರಾಹುಲ್ ಗಾಂಧಿಯವರನ್ನು “ನಕಲಿ” ಎಂದು ಕರೆದು, ಗಾಂಧಿ ಜಯಂತಿಯಂದು ಅವರ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಏಕೆ ಮಾತನಾಡಬೇಕು” ಎಂದು ಪ್ರಶ್ನಿಸಿದರು.

ಇಡೀ ಕಾಂಗ್ರೆಸ್ ಪಕ್ಷವೇ ಜಾಮೀನಿನ ಮೇಲೆ ಹೊರಗಿದ್ದು, ಕರ್ನಾಟಕ ಪಕ್ಷಕ್ಕೆ ಎಟಿಎಂ ಆಗಿತ್ತು.ಈಗ ಅದು ಬದಲಾಗಿದೆ ಎಂದರು.

”ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಮ್ಮ ದೇಶದ ಪ್ರೇರಣಾ ಶಕ್ತಿ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶ ಮತ್ತು ಅನುಕರಣೀಯ. ಹಲವಾರು ಅವಮಾನ, ಅಪಮಾನಗಳನ್ನು ಸಹಿಸಿಕೊಂಡು, ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ತ್ಯಾಗಮಯಿ ಅವರು” ಎಂದು ಸಿಎಂ ಹೇಳಿದರು.

ಭಾರತದ ಮಾಜಿ ಪ್ರಧಾನಿಗಳಾದ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 118 ನೇ ಜನ್ಮದಿನದ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಸಿಎಂ ಪುಷ್ಪ ನಮನ ಸಲ್ಲಿಸಿದರು.

Advertisement

ಡಿಕೆ ಶಿವಕುಮಾರ್ ತಿರುಗೇಟು

ಬಿಜೆಪಿಯ ಹತ್ತಾರು ಮಂದಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

“ನಾನು ಜಾಮೀನಿನಲ್ಲಿದ್ದೇನೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಜಾಮೀನಿನ ಮೇಲೆ ಇದ್ದಾರೆ. ಬಿಜೆಪಿಯಲ್ಲೂ ಹತ್ತಾರು ಮಂದಿ ಜಾಮೀನಿನ ಮೇಲೆ ಇದ್ದಾರೆ. ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಕೇಸ್ ಇಲ್ಲವೇ ? ಬೊಮ್ಮಾಯಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅವರು ಕಳುಹಿಸಲಿ. ನಾನು ಪರಪ್ಪನ ಅಗ್ರಹಾರಕ್ಕೆ ಹೋಗುತ್ತೇನೆ, ನಾನು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ” ಎಂದರು.

”ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರವಾಗಿ ನನಗೆ ಅ. 7 ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಿದ ನಂತರ ನನಗೆ ವಿಚಾರಣೆಗೆ ಕರೆದಿದ್ದಾರೆ. ನನ್ನ ಮೇಲೆ ಬೇರೆ ಪ್ರಕರಣಗಳ ಜತೆಗೆ ಇದನ್ನೂ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ”ಭಾರತ್ ಜೋಡೋ” ಯಾತ್ರೆ ಸಮಯದಲ್ಲಿ ನನಗೆ ಹಾಗೂ ನನ್ನ ಸಹೋದರನಿಗೆ ನೋಟಿಸ್ ನೀಡಲಾಗಿದೆ. ನಾನು ವಿಚಾರಣೆಗೆ ಸಹಕಾರ ನೀಡುತ್ತೇನೆ. ಆದರೆ ಅ. 7 ರಂದು ರಾಹುಲ್ ಗಾಂಧಿ ಅವರ ಜತೆಗೆ ನಮ್ಮ ಸಮಾಜದ ಆದಿ ಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿಯವರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ. ಇದು ಬಹಳ ಮುಖ್ಯ ಕಾರ್ಯಕ್ರಮ. ನಾನು ಮಠದಲ್ಲಿ ಇರಲೇಬೇಕಾದ ಅನಿವಾರ್ಯವಿದೆ. ಈಗಿನ ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲಾವಕಾಶ ಕೇಳುತ್ತೇನೆ. ಇಡಿ ಅಧಿಕಾರಿಗಳು ನಮ್ಮ ಪರಿಸ್ಥಿತಿ ಅರಿತು ಸಮ್ಮತಿಸುವ ವಿಶ್ವಾಸವಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next