Advertisement
ದತ್ತಾತ್ರೇಯ ಅಥವಾ ಶ್ರೀದತ್ತಾ ತ್ರಿಮೂರ್ತಿಗಳ ಅಂಶವುಳ್ಳವನು. ದತ್ತ ಅಂದರೆ ನೀಡಲಾದ ಅತ್ರೇಯ – ತಂದೆ ಅತ್ರಿ ಮಹರ್ಷಿಗಳ ಉಲ್ಲೇಖ. ಅದ್ದರಿಂದ ದತ್ತಾತ್ರೇಯ. ನಾಥ ಪಂಥದನ್ವಯ ದತ್ತಾತ್ರೇಯ ಶಿವನ ಅವತಾರ. ಆದಿಗುರು. ಆದಿನಾಥ ಸಂಪ್ರದಾಯದವರಿಗೆ ಮೊದಲ ಗುರು. ದತ್ತಾತ್ರೇಯನು ಮಾರ್ಗಶಿರ ಮಾಸದಲ್ಲಿ ಜನ್ಮವೆತ್ತಿದನು. ಅವನು ಹರಿಹರಾತ್ಮಕಂ ವಂದೇ. ಅವನು ತ್ರೆಲೋಕ್ಯ ಲೋಕ ವಂದಿತನು. ಅವನು ನಿಷ್ಕಲ ನಿರ್ಗುಣ ರೂಪನು. ಭೂತಗಳ ಈಶನು. ಬ್ರಹ್ಮಲೋಕದ ಈಶನು. ಶಂಖಚಕ್ರ ಗಧಾದರನು. ಪಾಣಿಪಾತ್ರಧರನು. ಅವನು ನಿರ್ಮಲ ನೀಲವರ್ಣದವನು. ಸುಲೋಚನ. ವಿಶಾಲಾಕ್ಷನು. ಕೃಪಾ ನಿಧಿ. ಸರ್ವರೋಗಹರನು. ಕ್ಷರಾಕ್ಷರ ಸ್ವರೂಪನು. ಅವನು ಶತ್ರುನಾಶಕರನು. ಜ್ಞಾನವಿಜ್ಞಾನದಾಯಕನು. ಸರ್ವಪಾಪ ಗಳನ್ನು ಶಮನ ಮಾಡುವವನು ದತ್ತಾತ್ರೇಯನು. ಆದ್ದರಿಂದ ಅವನು ತ್ತೈಲೋಕ ವಂದಿತನು. ಹೀಗೆ ದತ್ತಾತ್ರೇಯ ಕುರಿತಾದ ಅನೇಕ ಶ್ಲೋಕಗಳಲ್ಲಿ ಅವನ ಗುಣಸ್ವರೂ ವಿಶೇಷಣಗಳು ಸ್ತುತಿಸಲ್ಪಟ್ಟಿವೆ.
Related Articles
ದತ್ತಾತ್ರೇಯ ಶಿವನ ಅವತಾರ ಎಂದು ಶೈವರು, ಬಳಿಕ ವೈಷ್ಣವರು ಆತ ವಿಷ್ಣುವಿನ ಅವತಾರ ಎಂದು ಸಮರ್ಥಿಸಿಕೊಂಡರು. ಶಿವ ವಿಷ್ಣು ಅಂತಿಮವಾಗಿ ಪರಬ್ರಹ್ಮಸ್ವರೂಪವೇ. ಆದ್ದರಿಂದ ದತ್ತಾತ್ರೇಯ ಇಂದಿಗೂ ತ್ರಿಮೂರ್ತಿಸ್ವರೂಪಿಯಾಗಿ ಪೂಜಿಸಲ್ಪಡುತ್ತಾನೆ. ದತ್ತಾ ತ್ರೇಯನನ್ನು ವಿವಿಧ ರೂಪಗಳಲ್ಲಿ ಚಿತ್ರಿಸಲಾಗಿದೆ. ಮೂರು ಮುಖ, ಮಾಲೆ, ಕಮಂಡಲು ಧರಿಸಿರುವ ಕೆಳಗಿನ ಎರಡು ಕೈ, ಡಮರು, ತ್ರಿಶೂಲ ಧರಿಸಿರುವ ಮಧ್ಯದ ಎರಡು ಕೈ, ಶಂಖ, ಚಕ್ರ ಧರಿಸಿರುವ ಮೇಲ್ಗಡೆಯ ಎರಡು ಕೈಗಳು, ಹೀಗೆ ಆರು ಕೈಗಳು. ನಾಲ್ಕು ಶ್ವಾನಗಳು ಮತ್ತು ಒಂದು ಗೋವನ್ನು ಹೊಂದಿರುವ ರೂಪ ಸಾಮಾನ್ಯವಾಗಿದೆ. ಮೂರು ಮುಖಗಳು ತ್ರಿಮೂರ್ತಿಗಳು, ಮೂರು ಗುಣಗಳು, ಸತ್ವರಜೋತಮೋಗುಣಗಳ ಸಂಕೇತ. ಪರಮಗುರುವಿನಲ್ಲಿ ತ್ರಿಗುಣಗಳಿರಬೇಕು. ಆದ್ದರಿಂದ ದತ್ತಾತ್ರೇಯ ಪರಮ ಗುರು ಎಂದೇ ಪೂಜನೀಯ. ಶಂಖ, ಚಕ್ರ, ಗಧಾ, ತ್ರಿಶೂಲ, ಕಮಂಡಲು, ಭಿಕ್ಷಾಪಾತ್ರೆಯು, ನಾದ, ಕಾಲಚಕ್ರ, ಅಹಂಕಾರವನ್ನು ತ್ಯಜಿಸುವುದು, ಇಡಾ ಪಿಂಗಳ, ಸುಶುಮ್ನ, ಜೀವವನ್ನು ಭರಿಸುವುದು, ಅಹಂನ್ನು ಭಿಕ್ಷೆ ನೀಡುವುದು ಇತ್ಯಾದಿ ವಿವಿಧ ಸಂಕೇತಗಳು.
Advertisement
ಶ್ರೀ ದತ್ತಾತ್ರೇಯ ಷೋಡಶಾವತಾರ ಚರಿತೆಯಲ್ಲಿ ದತ್ತಾತ್ರೇಯನ 16 ಅವತಾರಗಳನ್ನು ಹೇಳುತ್ತಾರೆ. ಯೋಗಿರಾಜ, ಅತ್ರಿವರದ, ದತ್ತಾತ್ರೇಯ, ಕಾಲಾಗ್ನಿ ಶಮನ, ಯೋಗಿಜನವಲ್ಲಭ, ಲೀಲಾವಿಶ್ವಂಭರ, ಸಿದ್ಧರಾಜ, ಧ್ಯಾನಸಾಗರ, ವಿಶ್ವಂಭರವಧೂತ, ಮಾಯಾಮುಕ್ತ ವಧೂತ, ಮಾಯಾಯುಕ್ತವಧೂತ, ಆದಿಗುರು, ಶಿವಗುರು ದತ್ತಾತ್ರೇಯ, ದೇವದೇವೇಶ್ವರ, ದಿಗಂಬರ, ಶ್ರೀಕೃಷ್ಣ ಶ್ಯಾಮ ಕಮಲನಯನ.ಅವಧೂತಗೀತೆ ದತ್ತಾತ್ರೇಯ ವಿರಚಿತವಾದ ಪ್ರಸಿದ್ಧ ಗ್ರಂಥ. ಅದನ್ನು ದತ್ತಾತ್ರೇಯ ಗೀತೆ, ದತ್ತಗೀತಾ ಯೋಗ ಶಾಸ್ತ ಮತ್ತು ವೇದಾಂತಸಾರ ಎಂದೂ ಕರೆಯುವುದಿದೆ. ಆಧ್ಯಾತ್ಮಿಕವಾಗಿ ಮುಕ್ತ ಅಥವಾ ವಿಮೋಚನೆಗೊಂಡ ವ್ಯಕ್ತಿಯ ಸ್ವಭಾವ ಮತ್ತು ಸ್ಥಿತಿಯನ್ನು ತಿಳಿಸುತ್ತದೆ. ಅ.ಗೀತೆಯು ಅವಧೂತರ ಆಧ್ಯಾತ್ಮಿಕ ಪ್ರಯಾಣವನ್ನು ವಿವರಿಸುತ್ತಾ, ಸನ್ಯಾಸಿಗೆ 24 ಗುರುಗಳು ಸಹಾಯ ಮಾಡಿದರು ಎಂದು ಹೇಳುತ್ತದೆ. ಭಾಗವತದಲ್ಲಿ ದತ್ತಾತ್ರೇಯನ ಉಲ್ಲೇಖ:
ಭಾಗವತ ಏಕಾದಶಸ್ಕಂದದಲ್ಲಿ ದತ್ತಾತ್ರೇಯನ ಕುರಿತಾಗಿ-
ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
ಅವಧೂತಸ್ಯ ಸಂವಾದಂ ಯದೋರಮಿಸತೇಜಸ||
ಈ ವಿಷಯದಲ್ಲಿ ಮಹಾತ್ಮರು ಒಂದು ಪ್ರಾಚೀನ ಇತಿಹಾಸವನ್ನು ಹೇಳುತ್ತಾರೆ. ಆ ಇತಿಹಾಸವು ಪರಮ ತೇಜಸ್ವೀ ಅವಧೂತ ದತ್ತಾತ್ರೇಯ ಮತ್ತು ಯದುರಾಜನ ಸಂವಾದ ರೂಪದಲ್ಲಿದೆ.
ಅವಧೂತಂ ದ್ವಿಜಂ ಕಂಚಿಚ್ಚರಂತಮಕುತೋಭಯಮ್|
ಕವಿಂ ನಿರೀಕ್ಷ್ಯ ತರುಣಂ ಯದುಃ ಪಪ್ರತ್ಛ ಧರ್ಮವಿತ್||
ಒಮ್ಮೆ ಧರ್ಮದ ಮರ್ಮಜ್ಞನಾದ ಯದುರಾಜನು ಓರ್ವ ತ್ರಿಕಾಲದರ್ಶಿ ತರುಣ ಅವಧೂತ ಬ್ರಾಹ್ಮಣನು ನಿರ್ಭಯನಾಗಿ ಸಂಚರಿಸುವುದನ್ನು ನೋಡಿದನು. ಅವನು ಅವಧೂತನಲ್ಲಿ ಪ್ರಶ್ನಿಸಿದನು.
ಯದುರಾಜ ದತ್ತಾತ್ರೇಯ ಸಂವಾದರೂಪದಲ್ಲಿದೆ ದತ್ತಾತ್ರೇಯರೂಪೀ ಬ್ರಾಹ್ಮಣನು, ನಾನು ನನ್ನ ಬುದ್ಧಿ ಯಿಂದ ಹಲವಾರು ಗುರುಗಳನ್ನು ಆಶ್ರಯಿಸಿದ್ದೇನೆ. ಆ ನನ್ನ ಗುರುಗಳು – ಭೂಮಿ, ವಾಯು, ಆಕಾಶ, ಜಲ, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಟಾವು, ಸಮುದ್ರ, ಪತಂಗ, ದುಂಬಿ, ಜೇನುನೊಣ, ಆನೆ, ಜೇನು ತೆಗೆಯುವವನು, ಜಿಂಕೆ, ಮೀನು, ಪಿಂಗಳವೇಶ್ಯೆ, ಕುರರಪಕ್ಷಿ, ಮಗು, ಕುಮಾರೀ, ಬಾಣವನ್ನು ತಯಾರಿಸುವವನು, ಸರ್ಪ, ಜೇಡಹುಳ, ಭೃಂಗ ಕೀಟ ಇತ್ಯಾದಿ 24 ಗುರುಗಳು. ಆ 24 ಗುರುಗಳಿಂದ ಕಲಿತ ವಿದ್ಯೆಯನ್ನು ತಿಳಿಸುತ್ತೇನೆ ಎಂದು ದತ್ತಾತ್ರೇಯ ವಿವರಿಸುತ್ತಾ ಕೊನೆಗೆ ಈ ವಿಧವಾಗಿ ನನಗೆ ವೈರಾಗ್ಯ ಉಂಟಾಯಿತು, ಅಂತಕರಣದಲ್ಲಿ ವಿಜ್ಞಾನದ ಪ್ರಕಾಶ ಹರಡಿಕೊಂಡಿತು. ಈಗ ನಾನು ಅಹಂಕಾರವನ್ನು ಬಿಟ್ಟು ಈ ಭೂತಲದಲ್ಲಿ ಸ್ವತ್ಛಂದವಾಗಿ ವಿಹರಿಸುತ್ತೇನೆ. ಒಬ್ಬನೇ ಗುರುವಿನಿಂದ ಪಡೆದ ಜ್ಞಾನ ಅಪೂರ್ಣ. ಆಳವಾದ ಬುದ್ಧಿಯುಳ್ಳ ಅವಧೂತ ದತ್ತಾತ್ರೇಯರು ಎಂದೇ ಭಗವಂತ ಉದ್ಧವನಿಗೆ ತಿಳಿಸುತ್ತಾನೆ. ಜಲಂಚಾರು ರಘುಪತಿ ತಂತ್ರಿ, ಉಡುಪಿ