Advertisement
ಡಾ| ಅಂಬೇಡ್ಕರ್ ಅವರ ಪ್ರಶಂಸೆಗೆ ಪಾತ್ರವಾಗಿದ್ದ ಬೆನಗಲ್ ನರಸಿಂಗ ರಾವ್(ಬಿ.ಎನ್.ರಾವ್) ಸಂವಿಧಾನ ಸಿದ್ಧಪಡಿಸಲು ರಚಿಸಿದ ಸಮಿತಿಗೆ ಸಲಹೆಗಾರರಾಗಿ ತಮ್ಮ ಅಮೂಲ್ಯ ಸೇವೆಯನ್ನು ಉಚಿತವಾಗಿ ನೀಡಿದವರು. ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ, ನಾಗರಿಕ ಹಕ್ಕುಗಳು, ಅಂತಾರಾಷ್ಟ್ರೀಯ ಸಂಬಂಧ ಹೀಗೆ ರಾಜ್ಯಶಾಸ್ತ್ರದ ವಿವಿಧ ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಬಿ.ಎನ್.ರಾವ್ ಭಾರತವಲ್ಲದೆ ಅಂತಾರಾ ಷ್ಟ್ರೀಯ ಗಮನ ಸೆಳೆದಿದ್ದರು. ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸುವ ಅವಕಾಶವಿದ್ದರೂ ಯಾವುದೆ ಲಾಬಿ ಮಾಡದೆ, ಪ್ರಚಾರ ಬಯಸದೆ ತಮ್ಮ ಕೆಲಸ ಮಾಡಿ, ಹೆಚ್ಚು ಪರಿಚಯವಿಲ್ಲದೆ ಮರೆಯಾದ ವರು ಬಿ.ಎನ್.ರಾವ್. ಡಾ| ಅಂಬೇಡ್ಕರ್ ಸೇರಿದಂತೆ ಜವಾಹರ್‌ಲಾಲ್ ನೆಹರೂ, ರಾಜೇಂದ್ರ ಪ್ರಸಾದ್ ಮುಂತಾದವರಿಂದ ಪ್ರಶಂಸೆಗೆ ಪಾತ್ರರಾಗಿದ್ದ ಬಿ.ಎನ್.ರಾವ್ ಕರ್ನಾಟಕದ ಕೊಡುಗೆಯಾಗಿದ್ದು ಕನ್ನಡಿಗರ ಸೌಭಾಗ್ಯ. ಕೇಂಬ್ರಿಡ್ಜ್ನ ಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ತಮ್ಮ ತಂದೆ ಮೋತಿಲಾಲ್ ನೆಹರೂ ಅವರಿಗೆ ಬರೆದ ಪತ್ರವೊಂದರಲ್ಲಿ ಬಿ.ಎನ್.ರಾವ್ ಅವರನ್ನು ಒಬ್ಬ ಬುದ್ದಿವಂತ, ಮೇಧಾವಿ, ಸದಾ ಅಧ್ಯಯನದಲ್ಲಿ ತೊಡಗಿರುವ ಬ್ರಾಹ್ಮಣ ಯುವಕ ಎಂದು ಬಣ್ಣಿಸಿದ್ದಾರೆ.
Related Articles
Advertisement
ಬ್ರಿಟಿಷ್ ಭಾರತದ ಉಚ್ಚ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಮೂರ್ತಿ ಸರ್ ಮಾರೀಸ್ ಗೇಯರ್( maurice gwyer) ಬಿ.ಎನ್.ರಾವ್ ಅವರನ್ನು ತಮ್ಮ ಸಹೋದ್ಯೋಗಿಯಾಗಿ ನೇಮಕ ಮಾಡಲು ಇಚ್ಛಿಸಿದ್ದರು. ಆದರೆ ಆಗಿನ ನಿಯಮದ ಪ್ರಕಾರ ಈ ಹುದ್ದೆಗೆ ಮುಂಚೆ ಐದು ವರ್ಷ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುವ ಅಗತ್ಯವಿತ್ತು. ಈ ಕಾರಣದಿಂದ ಬಿ.ಎನ್.ರಾವ್ ಅವರನ್ನು 1939ರಲ್ಲಿ ಕಲ್ಕತ್ತಾ ನ್ಯಾಯಾಲಯದ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿತು. ಈ ಹುದ್ದೆಯಲ್ಲಿ ಕೆಲವೇ ತಿಂಗಳುಗಳಿದ್ದರೂ ಪ್ರಮುಖ ತೀರ್ಪುಗಳನ್ನು ನೀಡಿದರು. ಈ ಹಂತದಲ್ಲಿ ಬಿ.ಎನ್.ರಾವ್ ಗ್ರೇಟ್ ಇಂಡಿಯನ್ ಪೆನಿನ್ಸುಲರ್ (ಜಿಐಪಿ) ರೈಲ್ವೇಯಲ್ಲಿ ಸಂಬಳ, ಭತ್ತೆ ಇತ್ಯರ್ಥಪಡಿಸುವ ಜವಾಬ್ದಾರಿ ಹೊತ್ತುಕೊಂಡರು. ಇದೇ ಸಂದರ್ಭದಲ್ಲಿ ಭಾರತ ಸರಕಾರದ ಅಧಿನಿಯಮ 1935 ಜಾರಿಗೆ ಬಂದು ನದಿ ನೀರಿಗೆ ಸಂಬಂಧಿಸಿದ ಕಾಮಗಾರಿಗೆ ಇಂಡಸ್ ಆಯೋಗ ಸ್ಥಾಪನೆಯಾಗಿ, ಅದಕ್ಕೆ ಬಿ.ಎನ್.ರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಈ ಎಲ್ಲ ಕಾರಣಗಳಿಂದ ಬಿ.ಎನ್.ರಾವ್ ಉತ್ಛ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕಗೊಳ್ಳಲಿಲ್ಲ.
ಸರಕಾರಿ ಸೇವೆಯಿಂದ 1944ರಲ್ಲಿ ನಿವೃತ್ತರಾದ ಬಿ.ಎನ್.ರಾವ್ 1945ರಲ್ಲಿ ತೇಜ್ ಬಹದ್ದೂರ್ ಸಪ್ರು ಅವರ ಕೋರಿಕೆಯ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿ ಹುದ್ದೆಯನ್ನು ಒಪ್ಪಿಕೊಂಡರು. ಆದರೆ ಕೆಲವೇ ವರ್ಷಗಳಲ್ಲಿ ಬಿ.ಎನ್.ರಾವ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜನ ನಡುವೆ ಭಿನ್ನಾಬಿಪ್ರಾಯ ಉಂಟಾಗಿ ರಾಜೀನಾಮೆ ನೀಡಿದರು. ಸರಕಾರವು ಹಿಂದೂ ಮಹಿಳೆಯರ ಆಸ್ತಿ ಹಕ್ಕು ಅಧಿನಿಯಮವನ್ನು 1937ರಲ್ಲಿ ಜಾರಿಗೊಳಿಸಿತು. ಕೇವಲ 3 ವರ್ಷಗಳಲ್ಲಿ ಅದಕ್ಕೆ ಕೆಲವು ಬದಲಾವಣೆ ಮಾಡಬೇಕೆಂಬ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ಹಿಂದೂ ಕಾನೂನು ಸುಧಾರಣ ಸಮಿತಿಯನ್ನು ರಚಿಸಿ ಬಿ.ಎನ್.ರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ನಿವೃತ್ತಿಯ ಅನಂತರವೂ ವೈಸ್‌ರಾಯ್ ಬಿ.ಎನ್.ರಾವ್ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ಮಾಡಿದ್ದರು.
ಈ ಮಧ್ಯೆ 1946ರಲ್ಲಿ ಬಿ.ಎನ್.ರಾವ್ ಅಕಸ್ಮಾತ್ತಾಗಿ ಬರ್ಮಾದ ಯುವ ಪ್ರಧಾನಿ ಯು ಆಂಗ್‌ಸಾಂಗ್ (ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾಂಗ್ ಸೂಕಿ ಅವರ ತಂದೆ) ಅವರ ಭೇಟಿಯಾದರು. ಭಾರತ ತನ್ನ ಸಂವಿಧಾನ ರಚಿಸಲು ಅರಂಭಿಸಿತ್ತು. ಬರ್ಮಾದಲ್ಲೂ ಸಂವಿಧಾನ ರಚಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ ಪ್ರಧಾನಿ, ಬಿ.ಎನ್.ರಾವ್ ಅವರ ವಿದ್ವತ್ತನ್ನು ಕಂಡು ಅವರ ಸಹಾಯ ಅಪೇಕ್ಷಿಸಿದರು. ಕೆಲವೇ ದಿನಗಳಲ್ಲಿ ಬರ್ಮಾದ ಸಂವಿಧಾನ ಸಲಹೆಗಾರ ದಿಲ್ಲಿಗೆ ಬಂದು ಬಿ.ಎನ್.ರಾವ್ ಅವರನ್ನು ಭೇಟಿ ಮಾಡಿದರು. ಅನಂತರ 1947ರ ಆಗಸ್ಟ್ ತಿಂಗಳಲ್ಲಿ ಬರ್ಮಾದ ಸಂವಿಧಾನ ಸಿದ್ದವಾಗಿತ್ತು. ಅದನ್ನು ಅನುಷ್ಠಾನಗೊಳಿಸುವ ದಿನ ಬರ್ಮಾ ಬಿ.ಎನ್.ರಾವ್ ಅವರಿಗೆ ಆಹ್ವಾನ ನೀಡಿತ್ತು.
ಭಾರತದ ಸಂವಿಧಾನ ಸಲಹೆಗಾರನಾಗಿ ನೇಮಕ ಗೊಂಡ ಬಳಿಕ ಬಿ.ಎನ್.ರಾವ್ ಅದರಲ್ಲಿ 2 ವರ್ಷಗಳ ಕಾಲ ತಲ್ಲೀನರಾಗಿದ್ದರು. ಸಂವಿಧಾನ ಸಿದ್ದಪಡಿಸಲು ಅನೇಕರನ್ನು ಭೇಟಿ ಮಾಡಿದರು. 27 ವಿಷಯಗಳನ್ನು ಒಳಗೊಂಡ ಪ್ರಶ್ನಾವಳಿಯನ್ನು ಸಿದ್ದಪಡಿಸಿ ಎಲ್ಲ ರಾಜರು ಮತ್ತು ತಜ್ಞರಿಗೆ ಕಳುಹಿಸಿ ಉತ್ತರ ಪಡೆದು ಅದನ್ನು ಒಟ್ಟುಗೂಡಿಸಿದರು. ಕಂಪ್ಯೂಟರ್ ಇಲ್ಲದ ಕಾಲದಲ್ಲಿ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದು ವಿಶೇಷ. ಈ ಹುದ್ದೆಯನ್ನು ಒಪ್ಪಿಕೊಳ್ಳುವಾಗಲೆ ಯಾವುದೇ ಸಂಬಳ, ಭತ್ತೆ ಬೇಡವೆಂದು ಬಿ.ಎನ್.ರಾವ್ ಷರತ್ತು ವಿಧಿಸಿದ್ದರು. ಸಂವಿಧಾನ ಕೆಲಸ ಮುಗಿದ ಮೇಲೆ ಭಾರತವನ್ನು ರಕ್ಷಣ ಪರಿಷತ್ತಿಗೆ ಸದಸ್ಯ ರಾಷ್ಟçವೆಂದು ಆಯ್ಕೆ ಮಾಡಿದಾಗ ಬಿ.ಎನ್.ರಾವ್ ಅವರು ಭಾರತದ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಬಿ.ಎನ್. ರಾವ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲವಾದರೂ ಅವರು ಕೇಂಬ್ರಿಡ್ಜ್ ನಲ್ಲಿ ಭೇಟಿ ಮಾಡಿದ್ದ ಡೈಸಿ ಪಾಲ್ಮರ್ ಎಂಬ ಯುವತಿ ಯನ್ನು ವಿವಾಹವಾದರು. ಆದರೆ ಆ ವಿವಾಹ ಹೆಚ್ಚು ದಿನ ಮುಂದುವರಿಯಲಿಲ್ಲ. ಸಂವಿಧಾನ ಕೆಲಸ ಮುಗಿಸಿದ ಮೇಲೆ ಕ್ಯಾನ್ಸರ್ ತಗಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೇವಲ ನಾಲ್ಕು ವಾರಗಳ ಬಳಿಕ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಬಳಿಕ ಚೇತರಿಸಿಕೊಂಡರೂ 1953ರಲ್ಲಿ ಮತ್ತೂಮ್ಮೆ ಕ್ಯಾನ್ಸರ್ ಮರುಕಳಿಸಿತು. ಈ ಬಾರಿ ಅದು ಮತ್ತಷ್ಟು ಗಂಭೀರವಾಗಿತ್ತು. ತಂದೆ ತೀರಿಕೊಂಡ ಒಂದು ವರ್ಷದ ಅನಂತರ ಬಿ.ಎನ್.ರಾವ್ 1953ರ ನ. 29ರಂದು ಜುರಿಚ್‌ನಲ್ಲಿ ನಿಧನ ಹೊಂದಿದರು. ಬಿ.ಎನ್.ರಾವ್ ಅವರು ಮಹಾತ್ಮಾ ಗಾಂಧಿ, ಜಿನ್ನಾ, ಪ್ರಸಿದ್ಧ ವಿಜ್ಞಾನಿ ಐನ್‌ಸ್ಟಿàನ್ ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು.
ವೈ.ಜಿ.ಮುರಳೀಧರನ್