Advertisement
ಪ್ರಿಸ್ಕೂಲ್ ಓದುವ ಮಗರಾಯನಿಗೆ ಮೊಹರಂ, ಓಣಂ ಎಂದು ಶಾಲೆಗೆ ಎರಡು ದಿನ ರಜೆ. ಅಯ್ಯೋ, ಮೊದಲೇ ಗೊತ್ತಿದ್ದರೆ ಗೌರಿ- ಗಣೇಶ ಹಬ್ಬಕ್ಕೆಂದು ಊರಿಗೆ ಹೋದವಳು ಇನ್ನೂ ಎರಡು ದಿನ ಅಲ್ಲಿಯೇ ಉಳಿದುಕೊಳ್ಳಬಹುದಿತ್ತು ಅಂತ ಕೈ ಕೈ ಹಿಸುಕಿಕೊಂಡೆ. ದಿನಾಲೂ ತಕರಾರಿಲ್ಲದೆ ಶಾಲೆಗೆ ಹೋಗುವ ಮಗ, ಮಧ್ಯಾಹ್ನ ಮನೆಗೆ ಬಂದ ಕೂಡಲೇ ಮಲಗುವ ಅಭ್ಯಾಸ ಮಾಡಿಕೊಂಡಿದ್ದಾನೆ. ನಿದ್ದೆ ಮುಗಿಸಿ ಎದ್ದರೆ ಅವನು ಹಿಡಿಯಲಾಗದ ಪಾದರಸ! ಒಂದು ಕ್ಷಣವೂ ಕೂರಲು ಬಿಡದಂತೆ, “ಅಮ್ಮಾ, ಹೊರಗೆ ಹೋಗುವಾ, ಅಮ್ಮಾ, ಆ ಆಟ ಆಡುವಾ, ಇದು ಮಾಡುವ ಬಾ…ಅಂತ ಪೀಡಿಸಿ, ಹೊರಗೆ ಎಳೆದೊಯ್ಯುತ್ತಾನೆ. ವಾಪಸ್ ಬಂದಮೇಲೆ ಕೈಕಾಲು ತೊಳೆದು, ದೇವರಿಗೆ ಪ್ರಾರ್ಥನೆ ಮಾಡಿ, ಹೋಮ್‌ವರ್ಕ್ ಮಾಡಲು ಕೂರುತ್ತಾನೆ. ಹೋಮ್‌ವರ್ಕ್ ಏನಾದ್ರೂ ಬೇಗ ಮುಗಿಯಿತೆಂದರೆ ನನ್ನ ಕಥೆ ಮುಗಿಯಿತು ಅಂತ ಅರ್ಥ! ಕಥೆ ಪುಸ್ತಕಗಳನ್ನು ಹಿಡಿದು ಆ ಕಥೆ ಹೇಳಮ್ಮ, ಇದು ಹೇಳಮ್ಮ ಎಂದು ಕೆಲವೊಮ್ಮೆ ಹೇಳಿದ್ದೇ ಕಥೆಯನ್ನು ನಾಲ್ಕಾರು ಸಲ ಹೇಳಿಸುತ್ತಾನೆ.
Related Articles
Advertisement
ಆಟದ ನಡುವಲ್ಲಿ ಸಮಯದ ಪರಿವೆಯಿಲ್ಲ. ಹಸಿವೆಯಂತೂ ಲೆಕ್ಕಕ್ಕೇ ಇಲ್ಲ. ರಜೆಯ ದಿನ ಮಧ್ಯಾಹ್ನದ ನಿದ್ದೆಗೂ ರಜಾ. ಬಿಸಿಲಲ್ಲಿ ಹೊರಗೆ ಆಡುವುದು ಬೇಡ ಅಂದರೆ, ಆ ಹಾಡು ಹಾಕಿ ಕೊಡು, ಈ ಕಾರ್ಟೂನ್ ತೋರಿಸು ಅಂತ ಟಿ.ವಿ. ಮುಂದೆ ಪ್ರತಿಷ್ಠಾಪನೆಗೊಳ್ಳುತ್ತಾನೆ. ಟಿ.ವಿ. ಬೋರಾದಾಗ, ಕ್ರಾಫ್ಟ್ನ ಹೆಸರಲ್ಲಿ ಮನೆ ತುಂಬಾ ರಾಶಿ ಕಸ ಮಾಡುತ್ತಾನೆ.
ಹೀಗೆ ಎರಡು ದಿನ ರಜೆ ಕಳೆಯುವಷ್ಟರಲ್ಲಿ ಅವನ ಹಿಂದೆ ಓಡಾಡಿ ನನಗೆ ಸುಸ್ತಾಗಿಬಿಟ್ಟಿತ್ತು. ಪ್ರಿಸ್ಕೂಲ್ ನಡೆಸುವ ಗೆಳತಿ, “ಏನೇ ಎರಡು ದಿನ ರಜೆಯೆಂದರೆ ಹಾಗೆ ಆಕಾಶ ಮೈಮೇಲೆ ಬಿದ್ದವಳಂತೆ ಆಡ್ತೀಯಲ್ಲೇ! ನಾವು ವಾರಪೂರ್ತಿ ನೋಡಿಕೊಳ್ತೀವಿ’ ಅಂತ ನಗುತ್ತಾಳೆ. ಅವಳು ಹೇಳುವುದೇನೋ ಸರಿ. ಆದರೆ, ಶಾಲೆಯಲ್ಲಿ ಟೀಚರ್ ಅಂತ ಗೌರವಿಸಿ, ಹಠ ಮಾಡದೆ ಸುಮ್ಮನಿರುವ ಕಂದಮ್ಮಗಳು ಅಮ್ಮನೊಡನೆ ಅಷ್ಟೇ ಶಿಸ್ತಿನಿಂದ ಎಲ್ಲಿರುತ್ತಾರೆ? ಮಕ್ಕಳ ರಜೆ, ಅಮ್ಮಂದಿರಿಗೆ ಸಜೆ ಅನ್ನಿಸುವುದು ಅದೇ ಕಾರಣಕ್ಕೆ!
-ಸಾವಿತ್ರಿ ಶ್ಯಾನಭಾಗ್