ಉಡುಪಿ: ಬಾರಕೂರಿನಲ್ಲಿ ಶುಕ್ರವಾರದಿಂದ ರವಿವಾರದ ತನಕ ನಡೆಯಲಿರುವ ಆಳುಪೋತ್ಸವಕ್ಕೆ ಪೂರ್ವಭಾವಿಯಾಗಿ ಇಲ್ಲಿನ ನಂದರಾಯನ ವೈಭವದ ಸಂಕೇತವಾಗಿದ್ದ ಕೋಟೆ ಮತ್ತು ಅರಮನೆ ಭಾಗವನ್ನು (14.12 ಎಕ್ರೆ ಜಾಗ) ಸಂಪೂರ್ಣ ಸ್ವತ್ಛಗೊಳಿಸ ಲಾಗಿದೆ. ತೆರೆಮರೆಯಲ್ಲಿದ್ದ ಕೋಟೆ ಪ್ರಸ್ತುತ ಸಾರ್ವಜನಿಕರಿಗೆ ತೆರೆದುಕೊಂಡಿದೆ. ಕೋಟೆಯ ಮಧ್ಯಭಾಗದಲ್ಲಿದ್ದ “ರಾಜ-ರಾಣಿ ಕಲ್ಯಾಣಿ’ ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆಯ ಅಧ್ಯಕ್ಷ ಮನೋಹರ ಶೆಟ್ಟಿ ಅವರ ವಿಶೇಷ ಮುತುವರ್ಜಿಯಿಂದ “ಮನೋಹರ ಪುಷ್ಕರಿಣಿ’ಯಾಗಿ ಹೊಸ ರೂಪ ತಳೆದಿದೆ.
“ರಾಜ-ರಾಣಿ ಕಲ್ಯಾಣಿ’ಯೆಂದೇ ಪ್ರಸಿದ್ಧವಾದ ಪುಷ್ಕರಿಣಿ ಗಿಡ ಗಂಟಿಗಳು, ಮಣ್ಣಿನಿಂದ ಮುಚ್ಚಿಕೊಂಡು ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಆದರೆ ಆಳುಪೋತ್ಸವದ ಅಂಗವಾಗಿ ಪುನಶ್ಚೇತನಗೊಳಿಸಲಾದ ಪುಷ್ಕರಿಣಿಯಲ್ಲಿ ನೀರು ಬರಲಾರಂಭಿಸಿದೆ. ತನ್ಮೂಲಕ ತನ್ನ ಮೆರುಗನ್ನು ಮರಳಿ ಪಡೆಯುದಕ್ಕೆ ಸಾಧ್ಯವಾಗಿದೆ.
ತುಳುನಾಡಿನ ರಾಜಧಾನಿ, ವಾಣಿಜ್ಯ ಕೇಂದ್ರವಾಗಿದ್ದ ಐತಿಹಾಸಿಕ ನಗರಿ ಬಾರಕೂರಿನಲ್ಲಿ ಕರಾವಳಿ ಪ್ರವಾಸೋದ್ಯಮ ಸಂಘಟನೆ (ಆ್ಯಕ್ಟ್) ಮತ್ತು ಊರ, ಪರವೂರ ಜನರ ಸಹಕಾರದೊಂದಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಘಟಿಸಿರುವ ಆಳುಪೋತ್ಸವ ಅಂಗವಾಗಿ ಪುನಶ್ಚೇತನಗೊಂಡ ಕೋಟೆ ಪ್ರವಾಸಿ ಕೇಂದ್ರವಾಗಿ ಮೈದಳೆದಿದೆ. ಇಲ್ಲಿನ ಕೋಟೆ-ಕೊತ್ತಲ, ದೇಗುಲಗಳು, ಮಸೀದಿ ಇತ್ಯಾದಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಆಳುಪೋತ್ಸವಕ್ಕೆ ಸಜ್ಜುಗೊಳಿಸಲಾಗಿದೆ.
ಉದ್ಯೋಗ ಸೃಷ್ಟಿ
ಬಾರಕೂರಿನ ಆಳುಪೋತ್ಸವ ಎಲ್ಲ ಜಾತಿ, ಧರ್ಮದವರು ಒಗ್ಗೂಡಲು, ವೈಶಿಷ್ಟéಪೂರ್ಣ ಪ್ರವಾಸೋದ್ಯಮ ಸ್ಥಳವಾಗಿ ಮೂಡಿಬರಲು ಸಹಕಾರಿ. ಇದು ಕೇವಲ ಉತ್ಸವ ಅಲ್ಲ. ಜನತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ವ್ಯಾಪಾರೀ ಕೇಂದ್ರವಾಗಲಿದೆ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿ, ಉಸ್ತವಾರಿ ಸಚಿವರ ಮುತುವರ್ಜಿಯಿಂದ ಉತ್ಸವ ಯಶಸ್ವಿಗೊಳ್ಳಲಿದ್ದು, ಜಿಲ್ಲೆಯ ಇನ್ನಷ್ಟು ಪ್ರವಾಸಿ ತಾಣಗಳು ಅಭಿವೃದ್ಧಿ ಆಗಬೇಕಿದೆ. ಕರಾವಳಿ ಪ್ರವಾಸೋದ್ಯಮ ಸಂಘಟನೆ ಸಹಕಾರ ನೀಡಲು ಬದ್ಧವಿದೆ.
-ಮನೋಹರ ಎಸ್. ಶೆಟ್ಟಿ
ಅಧ್ಯಕ್ಷರು, ಕರಾವಳಿ ಪ್ರವಾಸೋದ್ಯಮ ಸಂಘಟನೆ (ಆ್ಯಕ್ಟ್) ಉಡುಪಿ ಜಿಲ್ಲೆ.