Advertisement

ಕಟಕ್‌ನಲ್ಲಿ ಇಂದು ಭಾರತ-ವೆಸ್ಟ್‌ ಇಂಡೀಸ್‌ ನಿರ್ಣಾಯಕ ಏಕದಿನ

10:20 AM Dec 23, 2019 | Sriram |

ಕಟಕ್‌: ಮೊದಲೆರಡೂ ಪಂದ್ಯಗಳಲ್ಲಿ ಪ್ರಚಂಡ ಪ್ರದರ್ಶನ ನೀಡಿ ಅಧಿಕಾರ ಯುತ ಗೆಲುವು ಸಾಧಿಸಿದ ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ರವಿವಾರ ಕಟಕ್‌ನ “ಬಾರಾಬತಿ ಸ್ಟೇಡಿಯಂ’ನಲ್ಲಿ ಸರಣಿ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಲಿವೆ.
ಇತ್ತಂಡಗಳ ಟಿ20 ಸರಣಿಯಂತೆ ಏಕದಿನ ಸರಣಿ ಕೂಡ ಅಂತಿಮ ಪಂದ್ಯದಲ್ಲಿ “ಡಿಸೈಡರ್‌ ಗೇಮ್‌’ ಆಗಿ ಭಾರೀ ಮಹತ್ವ ಪಡೆದುಕೊಂಡಿದೆ. ಚುಟುಕು ಕ್ರಿಕೆಟ್‌ನಲ್ಲಿ ಮೊದಲ ಹಾಗೂ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ಪಡೆ ಸರಣಿ ಮೇಲೆ ಹಕ್ಕು ಚಲಾಯಿಸಿತ್ತು. ಇಲ್ಲಿ ವಿಂಡೀಸ್‌ ಮೊದಲ ಪಂದ್ಯ ಗೆದ್ದಿದೆ. ಬಳಿಕ ಭಾರತ ಸಮಬಲ ಸಾಧನೆಗೈದಿದೆ. ಕಟಕ್‌ನಲ್ಲಿ ಯಾರು ಯಾರನ್ನು ಕುಟುಕಬಹುದು ಎಂಬುದು ತೀವ್ರ ಕುತೂಹಲದ ಸಂಗತಿ.

Advertisement

2 ಪಂದ್ಯಗಳಲ್ಲಿ 4 ಶತಕ
ಚೆನ್ನೈಯಲ್ಲಿ ನಡೆದ ಮೊದಲ ಮೇಲಾಟದಲ್ಲಿ ಶಿಮ್ರನ್‌ ಹೆಟ್‌ಮೈರ್‌, ಶೈ ಹೋಪ್‌ ಶತಕ ಬಾರಿಸಿ ವಿಂಡೀಸಿಗೆ 8 ವಿಕೆಟ್‌ಗಳ ಅಮೋಘ ಜಯ ತಂದಿತ್ತಿದ್ದರು. ಭಾರತದ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ತೀರಾ ಕಳಪೆಯಾಗಿದೆ ಎಂಬ ಕೂಗಿನ ನಡುವೆಯೇ ವಿಶಾಖಪಟ್ಟದಲ್ಲಿ ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌ ಶತಕ ಬಾರಿಸಿ ಅಬ್ಬರಿಸಿದರು. 107 ರನ್ನುಗಳ ಜಯಭೇರಿ ಮೊಳಗಿಸಿದ ಭಾರತ ಸರಣಿಯನ್ನು ಸಮಬಲಕ್ಕೆ ತಂದಿತು.

ಮೊದಲೆರಡೂ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳೇ ಅಬ್ಬರಿಸಿ 4 ಶತಕ ಬಾರಿಸಿದ್ದನ್ನು ಕಂಡಾಗ ಕಟಕ್‌ ಕೂಡ “ಹೈ ಸ್ಕೋರ್‌ ಮ್ಯಾಚ್‌’ ಆದೀತೆಂಬ ನಿರೀಕ್ಷೆ ಇದೆ. ಆದರೆ “ಬಾರಾಬತಿ ಸ್ಟೇಡಿಯಂ’ನ ಇತಿಹಾಸ ಗಮನಿಸಿದಾಗ ಇದು ಬೌಲರ್‌ಗಳಿಗೆ ಸಹಕರಿಸಿದ ನಿದರ್ಶನವೇ ಅಧಿಕ. 2017ರ ಕೊನೆಯ ಪಂದ್ಯದಲ್ಲಿ ರನ್‌ ಮಳೆಯಾಗಿತ್ತು. ಆದರೆ ಇಲ್ಲಿ ಎರಡೂವರೆ ವರ್ಷಗಳ ಬಳಿಕ ಏಕದಿನ ಪಂದ್ಯ ನಡೆಯುತ್ತಿದ್ದು, ಪಿಚ್‌ ಹೇಗೆ ವರ್ತಿಸೀತೆಂದು ಅಂದಾಜಿಸುವುದು ಕಷ್ಟ.

ಪಿಚ್‌ ಹೇಗೆ ಇದ್ದರೂ ಭಾರತದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡೂ ಸದೃಢವಾಗಿಯೇ ಇವೆ. ರೋಹಿತ್‌, ರಾಹುಲ್‌, ಕೊಹ್ಲಿ, ಅಯ್ಯರ್‌, ರಿಷಭ್‌ ಪಂತ್‌,ಕೇದಾರ್‌ ಜಾಧವ್‌ ಬ್ಯಾಟಿಂಗ್‌ ಯಾದಿಯ ಹುರಿಯಾಳುಗಳು. ಆದರೆ ಮೊದಲೆರಡೂ ಪಂದ್ಯಗಳಲ್ಲಿ ವಿಫ‌ಲರಾಗಿದ್ದ ಕೊಹ್ಲಿ ಇಲ್ಲಿ “ಬಿಗ್‌ ಇನ್ನಿಂಗ್ಸ್‌’ ಒಂದನ್ನು ದಾಖಲಿಸಬೇಕಿದೆ.

ಬೌಲಿಂಗ್‌ ವಿಭಾಗದಲ್ಲಿ ದೀಪಕ್‌ ಚಹರ್‌ ಕೊರತೆ ಕಾಡುತ್ತಿದ್ದರೂ ಇದು ಗಂಭೀರವೇನಲ್ಲ. ಇವರ ಸ್ಥಾನಕ್ಕೆ ಬಂದ ನವದೀಪ್‌ ಸೈನಿ ಕೂಡ ಪ್ರತಿಭಾನ್ವಿತ ಬೌಲರ್‌. ಜತೆಗೆ ಅನುಭವಿ ಶಮಿ ಇದ್ದಾರೆ. ಹ್ಯಾಟ್ರಿಕ್‌ ವೀರ ಕುಲದೀಪ್‌ ಈಗಾಗಲೇ ಕೆರಿಬಿಯನ್ನರಿಗೆ ಬಿಸಿ ಮುಟ್ಟಿಸಿದ್ದಾರೆ. ಶಾದೂìಲ್‌ ಠಾಕೂರ್‌ ಬದಲು ಮತ್ತೂಬ್ಬ ಸ್ಪಿನ್ನರ್‌ ಚಹಲ್‌ ಅವಕಾಶ ಪಡೆಯುವ ಸಾಧ್ಯತೆ ಇದೆ. ಆಲ್‌ರೌಂಡ್‌ ಹೊಣೆಗಾರಿಕೆ ಜಡೇಜ ಮೇಲಿದೆ. ಫೀಲ್ಡಿಂಗ್‌ ವಿಭಾಗದಲ್ಲಿ ಸುಧಾರಣೆ ಕಂಡರೆ ಭಾರತಕ್ಕೆ ಸರಣಿ ಗೆಲುವು ಅಸಾಧ್ಯವೇನಲ್ಲ.

Advertisement

ಅಪಾಯಕಾರಿ ವಿಂಡೀಸ್‌
ವೆಸ್ಟ್‌ ಇಂಡೀಸ್‌ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿ ರುವ ತಂಡ. ಹೋಪ್‌, ಲೆವಿಸ್‌, ಹೆಟ್‌ಮೈರ್‌, ಪೂರಣ್‌, ಪೊಲಾರ್ಡ್‌ ಅತ್ಯಂತ ಅಪಾಯಕಾರಿ ಆಟಗಾರರು ಎಂಬುದನ್ನು ನಿರೂಪಿಸಲಿಕ್ಕೇನೂ ಇಲ್ಲ. ಇವರಲ್ಲಿ ಇಬ್ಬರು ಸಿಡಿದರೂ ಪಂದ್ಯದ ಗತಿಯೇ ಬದಲಾಗಲಿದೆ ಎಂಬುದಕ್ಕೆ ಚೆನ್ನೈ ಪಂದ್ಯವೇ ಸಾಕ್ಷಿ.

ಆದರೆ ವಿಂಡೀಸ್‌ ಬೌಲಿಂಗ್‌ ಅದೆಷ್ಟು ದುರ್ಬಲ ಎಂಬುದು ವಿಶಾಖಪಟ್ಟಣದಲ್ಲಿ ಸಾಬೀತಾಗಿದೆ. ಭಾರತದ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಕಟಕ್‌ನಲ್ಲೂ ಇದು ಪುನರಾವರ್ತನೆಯಾಗಬೇಕಿದೆ.

ಕೊಹ್ಲಿಗೆ ಕಾದಿವೆ ದಾಖಲೆಗಳು…
ಈ ಸರಣಿಯ ಮೊದಲೆರಡು ಏಕದಿನ ಪಂದ್ಯಗಳಲ್ಲಿ ನಾಯಕ ವಿರಾಟ್‌ ಕೊಹ್ಲಿ ರನ್‌ ಬರಗಾಲ ಅನುಭವಿಸಿದ್ದಾರೆ. ಚೆನ್ನೈಯಲ್ಲಿ ಕೇವಲ 4 ರನ್‌ ಗಳಿಸಿದರೆ, ವಿಶಾಖಪಟ್ಟಣದಲ್ಲಿ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದ್ದರು. ಹಾಗೆಯೇ ಕಟಕ್‌ ಅಂಗಳದಲ್ಲೂ ಕೊಹ್ಲಿ ದಾಖಲೆ ತೀರಾ ಕಳಪೆ. ಆಡಿದ 4 ಪಂದ್ಯಗಳಲ್ಲಿ ಗಳಿಸಿದ್ದು 3, 22, 1 ಮತ್ತು 8 ರನ್‌ ಮಾತ್ರ. ಎದುರಿಸಿದ ಎಸೆತಗಳ ಸಂಖ್ಯೆ ಬರೀ 33.
ಅಂದಮಾತ್ರಕ್ಕೆ ಕೊಹ್ಲಿ ಫಾರ್ಮ್ನಲ್ಲಿಲ್ಲ ಎಂದು ಭಾವಿಸುವುದು ತಪ್ಪಾಗುತ್ತದೆ. ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಕಟಕ್‌ನಲ್ಲಿ ರವಿವಾರ ಇದೇ ಜೋಶ್‌ ತೋರಬಾರದೆಂದೇನೂ ಇಲ್ಲ.

ವಿರಾಟ್‌ ಕೊಹ್ಲಿ ಇನ್ನು 56 ರನ್‌ ಮಾಡಿದರೆ ಸರ್ವಾಧಿಕ ರನ್‌ ಸಾಧಕರ ಯಾದಿಯಲ್ಲಿ ಜಾಕ್‌ ಕ್ಯಾಲಿಸ್‌ ಅವರನ್ನು ಹಿಂದಿಕ್ಕಿ 7ನೇ ಸ್ಥಾನ ಅಲಂಕರಿಸಲಿದ್ದಾರೆ. ಕೊಹ್ಲಿ ಖಾತೆಯಲ್ಲೀಗ 11,524 ರನ್‌ ಇದೆ. ಕ್ಯಾಲಿಸ್‌ 11,579 ರನ್‌ ಹೊಡೆದಿದ್ದಾರೆ.

ಇನ್ನು 116 ರನ್‌ ಮಾಡಿದರೆ 11 ಸಾವಿರ ರನ್‌ ಪೂರ್ತಿಗೊಳಿಸಿದ ವಿಶ್ವದ 6ನೇ ಭಾರತದ 2ನೇ ನಾಯಕನೆನಿಸಲಿದ್ದಾರೆ. ವಿಶ್ವದಾಖಲೆ ರಿಕಿ ಪಾಂಟಿಂಗ್‌ ಹೆಸರಲ್ಲಿದೆ (15,440 ರನ್‌). ಭಾರತದ ಸಾಧಕ ಮಹೇಂದ್ರ ಸಿಂಗ್‌ ಧೋನಿ (11,207 ರನ್‌).

ಅಂಕಿಅಂಶ
– ಗೆದ್ದರೆ ಇದು ವಿಂಡೀಸ್‌ ವಿರುದ್ಧ ಭಾರತ ಸಾಧಿಸಲಿರುವ ಸತತ 10ನೇ ಏಕದಿನ ಸರಣಿ ವಿಜಯವಾಗಲಿದೆ.
– ಕೆರಿಬಿಯನ್‌ ಪಡೆ ಭಾರತದೆದುರು ಸರಣಿ ಗೆಲ್ಲದೇ 13 ವರ್ಷಗಳೇ ಉರುಳಿವೆ.
– ಆಸ್ಟ್ರೇಲಿಯ ವಿರುದ್ಧದ ಹಿಂದಿನ ಸರಣಿಯನ್ನು ಭಾರತ 2-3ರಿಂದ ಕಳೆದು ಕೊಂಡಿತ್ತು. ಕಳೆದ 15 ವರ್ಷಗಳಲ್ಲಿ ತವರಲ್ಲಿ ಭಾರತ ತಂಡ ಸತತ 2 ಸರಣಿಗಳನ್ನು ಸೋತದ್ದಿಲ್ಲ.
– ಇಂಗ್ಲೆಂಡ್‌ ವಿರುದ್ಧ ಕಟಕ್‌ನಲ್ಲಿ ನಡೆದ ಕೊನೆಯ ಏಕದಿನದಲ್ಲಿ ಭಾರತ 382 ರನ್‌ ಪೇರಿಸಿತ್ತು. ಆದರೆ ಗೆಲುವಿನ ಅಂತರ ಬರೀ 15 ರನ್‌ ಆಗಿತ್ತು.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ಯಜುವೇಂದ್ರ ಚಹಲ್‌/ಶಾದೂìಲ್‌ ಠಾಕೂರ್‌.
ವೆಸ್ಟ್‌ ಇಂಡೀಸ್‌: ಎವಿನ್‌ ಲೆವಿಸ್‌, ಶೈ ಹೋಪ್‌, ಶಿಮ್ರನ್‌ ಹೆಟ್‌ಮೈರ್‌, ರೋಸ್ಟನ್‌ ಚೇಸ್‌, ನಿಕೋಲಸ್‌ ಪೂರಣ್‌, ಕೈರನ್‌ ಪೊಲಾರ್ಡ್‌ (ನಾಯಕ), ಜಾಸನ್‌ ಹೋಲ್ಡರ್‌, ಕೀಮೊ ಪೌಲ್‌, ಅಲ್ಜಾರಿ ಜೋಸೆಫ್, ಖಾರಿ ಪಿಯರ್‌/ರೊಮಾರಿಯೊ ಶೆಫ‌ರ್ಡ್‌, ಕಾಟ್ರೆಲ್‌.

ಕಟಕ್‌ನಲ್ಲಿ ಭಾರತದ ಸಾಧನೆ
ವರ್ಷ ಎದುರಾಳಿ ಫ‌ಲಿತಾಂಶ
1982 ಇಂಗ್ಲೆಂಡ್‌ ಭಾರತಕ್ಕೆ 5 ವಿಕೆಟ್‌ ಜಯ
1984 ಇಂಗ್ಲೆಂಡ್‌ ಇಂಗ್ಲೆಂಡಿಗೆ 1 ರನ್‌ ಜಯ
1988 ಆಸ್ಟ್ರೇಲಿಯ ಭಾರತಕ್ಕೆ 5 ವಿಕೆಟ್‌ ಜಯ
1990 ಶ್ರೀಲಂಕಾ ಶ್ರೀಲಂಕಾಕ್ಕೆ 36 ರನ್‌ ಜಯ
1994 ವಿಂಡೀಸ್‌ ಭಾರತಕ್ಕೆ 8 ವಿಕೆಟ್‌ ಜಯ
1996 ಕೀನ್ಯಾ ಭಾರತಕ್ಕೆ 7 ವಿಕೆಟ್‌ ಜಯ
1996 ಆಸ್ಟ್ರೇಲಿಯ ರದ್ದು
1998 ಜಿಂಬಾಬ್ವೆ ಭಾರತಕ್ಕೆ 32 ರನ್‌ ಜಯ
2000 ಜಿಂಬಾಬ್ವೆ ಭಾರತಕ್ಕೆ 3 ವಿಕೆಟ್‌ ಜಯ
2002 ಇಂಗ್ಲೆಂಡ್‌ ಇಂಗ್ಲೆಂಡಿಗೆ 16 ರನ್‌ ಜಯ
2003 ಕಿವೀಸ್‌ ಕಿವೀಸ್‌ಗೆ 4 ವಿಕೆಟ್‌ ಜಯ
2007 ವಿಂಡೀಸ್‌ ಭಾರತಕ್ಕೆ 20 ರನ್‌ ಜಯ
2008 ಇಂಗ್ಲೆಂಡ್‌ ಭಾರತಕ್ಕೆ 6 ವಿಕೆಟ್‌ ಜಯ
2009 ಶ್ರೀಲಂಕಾ ಭಾರತಕ್ಕೆ 7 ವಿಕೆಟ್‌ ಜಯ
2011 ವಿಂಡೀಸ್‌ ಭಾರತಕ್ಕೆ 1 ವಿಕೆಟ್‌ ಜಯ
2013 ಆಸ್ಟ್ರೇಲಿಯ ರದ್ದು
2014 ಶ್ರೀಲಂಕಾ ಭಾರತಕ್ಕೆ 169 ರನ್‌ ಜಯ
2017 ಇಂಗ್ಲೆಂಡ್‌ ಭಾರತಕ್ಕೆ 15 ರನ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next