Advertisement

ಇನ್ನು ರೋಹಿತ್‌ ಶರ್ಮ ಪಾರುಪತ್ಯ

12:30 AM Jan 31, 2019 | |

ಹ್ಯಾಮಿಲ್ಟನ್‌: ನ್ಯೂಜಿಲ್ಯಾಂಡ್‌ ವಿರುದ್ಧ ಅವರದೇ ನೆಲದಲ್ಲಿ ಏಕದಿನ ಸರಣಿ ವಶಪಡಿಸಿಕೊಂಡು ಬೀಗುತ್ತಿರುವ ಭಾರತ ತಂಡ ಇಷ್ಟಕ್ಕೇ ಸಮಾಧಾನಪಡದೆ ಮುನ್ನುಗ್ಗುವ ಹುರುಪಿನಲ್ಲಿದೆ. ಗುರುವಾರ ಹ್ಯಾಮಿಲ್ಟನ್‌ನ “ಸೆಡ್ಡನ್‌ ಪಾರ್ಕ್‌’ನಲ್ಲಿ ಕಿವೀಸ್‌ಗೆ 4ನೇ ಪಂದ್ಯದಲ್ಲೂ ಸಡ್ಡು ಹೊಡೆಯಲು ತುದಿಗಾಲಲ್ಲಿ ನಿಂತಿದೆ. ಗೆಲುವನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿರುವ ಟೀಮ್‌ ಇಂಡಿಯಾಕ್ಕೆ ಹೊಸ ಎತ್ತರವೊಂದು ಕಾದಿದೆ.

Advertisement

5 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 3-0 ಮುನ್ನಡೆಯೊಂದಿಗೆ ನಿಚ್ಚಳ ಮೇಲುಗೈ ಸಾಧಿಸಿದೆ. ಇನ್ನೊಂದು ಜಯ ಸಾಧಿಸಿದರೆ ನ್ಯೂಜಿಲ್ಯಾಂಡ್‌ ಪ್ರವಾಸದ 52 ವರ್ಷಗಳ ಇತಿಹಾಸದಲ್ಲಿ ಬೃಹತ್‌ ಅಂತರದ ಸರಣಿ ಗೆಲುವಿನ ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ. 1967ರಿಂದ ನ್ಯೂಜಿಲ್ಯಾಂಡ್‌ ಪ್ರವಾಸಗೈಯುತ್ತಲೇ ಇರುವ ಭಾರತ ತಂಡ, ಎಲ್ಲ ಮಾದರಿಯ ಸರಣಿಗಳನ್ನೊಳಗೊಂಡಂತೆ ಮೂರಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದದ್ದಿಲ್ಲ. ಗುರುವಾರವೇ ಈ ಸಾಧನೆಗೈದರೆ ಟೀಮ್‌ ಇಂಡಿಯಾದ ಕ್ಲೀನ್‌ಸಿÌàಪ್‌ ಇತಿಹಾಸಕ್ಕೆ ದಾರಿ ತೆರೆದುಕೊಳ್ಳಳಿದೆ.

“ಡಬಲ್‌’ ಹಾದಿಯಲ್ಲಿ ರೋಹಿತ್‌
ಸಾಧಿಸಬೇಕಾದ್ದನ್ನೆಲ್ಲ ಸಾಧಿಸಿ, ತಂಡವನ್ನು ಯಶಸ್ಸಿನ ಪಥದಲ್ಲಿ ತಂದು ನಿಲ್ಲಿಸಿದ ನಾಯಕ ವಿರಾಟ್‌ ಕೊಹ್ಲಿ ಇನ್ನು ನ್ಯೂಜಿಲ್ಯಾಂಡ್‌ ಸರಣಿಗೆ ಲಭ್ಯರಿರುವುದಿಲ್ಲ. ಹೀಗಾಗಿ ತಂಡವನ್ನು ರೋಹಿತ್‌ ಶರ್ಮ ಮುನ್ನಡೆಸಲಿದ್ದಾರೆ.ಈಗಾಗಲೇ ಏಕದಿನದಲ್ಲಿ 3 ಡಬಲ್‌ ಸೆಂಚುರಿ ಹೊಡೆದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಯ ರೋಹಿತ್‌ ಶರ್ಮ ಹ್ಯಾಮಿಲ್ಟನ್‌ನಲ್ಲಿ ಇನ್ನೊಂದು “ಡಬಲ್‌’ನತ್ತ ಮುಖ ಮಾಡಿದ್ದಾರೆ. ಇದು ಅವರ 200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ! ರೋಹಿತ್‌ ಈ ಎತ್ತರ ತಲುಪಲಿರುವ ವಿಶ್ವದ 79ನೇ ಹಾಗೂ ಭಾರತದ 14ನೇ ಕ್ರಿಕೆಟಿಗ.

ನಾಯಕನಾಗಿ ಸಾಕಷ್ಟು ಯಶಸ್ಸು ಕಂಡಿರುವ ರೋಹಿತ್‌ ಶರ್ಮ ಅವರಿಗೆ ಸರಣಿಯ ದ್ವಿತೀಯಾರ್ಧ ಎನ್ನುವುದು ಸಮಸ್ಯೆಯಾಗಿ ಕಾಡುವ ಸಾಧ್ಯತೆ ಇಲ್ಲ. ಕಾರಣ, ಭಾರತ ತಂಡ ಈಗಾಗಲೇ ನ್ಯೂಜಿಲ್ಯಾಂಡನ್ನು ಎಲ್ಲ ವಿಭಾಗಗಳಲ್ಲೂ ಮೀರಿಸಿ ಸುಭದ್ರ ಸ್ಥಿತಿಯಲ್ಲಿ ನೆಲೆಸಿದೆ. ತಂಡದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ. ಹೀಗಾಗಿ ರೋಹಿತ್‌ ನಿರಾಳವಾಗಿ ಗೆಲುವಿನ ಪಥದಲ್ಲಿ ತಂಡವನ್ನು ಮುನ್ನಡೆಸಬಹುದೆಂಬುದು ಸದ್ಯದ ಲೆಕ್ಕಾಚಾರ.

ಅವಕಾಶ ಪಡೆದಾರೇ ಗಿಲ್‌?
ವಿರಾಟ್‌ ಕೊಹ್ಲಿ ಹೊರಗುಳಿಯುವುದರಿಂದ ತಂಡದ ಸ್ವರೂಪ ಹೇಗಿದ್ದೀತು ಎಂಬುದು ಕ್ರಿಕೆಟ್‌ ಅಭಿಮಾನಿಗಳ ಕುತೂಹಲ. ನಿಜಕ್ಕಾದರೆ ಇಲ್ಲಿ 19ರ ಹರೆಯದ ಉದಯೋನ್ಮುಖ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಅವರಿಗೆ ಅವಕಾಶ ಕೊಡುವುದು ನ್ಯಾಯೋಚಿತ. “ನಾನು 19ರ ಹರೆಯದಲ್ಲಿ ಗಿಲ್‌ ಅವರ ಶೇ. ಹತ್ತರಷ್ಟೂ ಸಾಮರ್ಥ್ಯ ಹೊಂದಿರಲಿಲ್ಲ’ ಎಂಬ ವಿರಾಟ್‌ ಕೊಹ್ಲಿ ಅವರ ಹೇಳಿಕೆಯೊಂದೇ ಸಾಕು, ಶುಭಮನ್‌ ಆಯ್ಕೆಗೆ!

Advertisement

ಆದರೆ ಕಳೆದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಸಿಲುಕಿ ಹೊರಗುಳಿದಿದ್ದ ಮಹೇಂದ್ರ ಸಿಂಗ್‌ ಧೋನಿ ಈಗ ಗುಣಮುಖರಾಗಿದ್ದು, ಅಭ್ಯಾಸವನ್ನೂ ನಡೆಸಿದ್ದಾರೆ. ಹೀಗಾಗಿ ಗುರುವಾರ ತಂಡಕ್ಕೆ ವಾಪಸಾಗುವುದು ಬಹುತೇಕ ಖಚಿತ. ಅಲ್ಲಿಗೆ ಕೊಹ್ಲಿ ಸ್ಥಾನ ಭರ್ತಿ ಆದಂತಾಗುತ್ತದೆ ಎಂಬುದೊಂದು ಲೆಕ್ಕಾಚಾರ. ಆಗ ಗಿಲ್‌ ವೀಕ್ಷಕನಾಗಿಯೇ ಉಳಿಯಬೇಕಾಗುತ್ತದೆ.

ಹೇಗೂ ಸರಣಿ ಗೆದ್ದಾಗಿದೆ, ಕೆಲವು ಪ್ರಯೋಗಳಿಗೆ ಮುಂದಾಗೋಣ, ಶುಭಮನ್‌ ಗಿಲ್‌ ಅವರನ್ನು ಆಡಿಸೋಣ ಎಂಬ ನಿರ್ಧಾರಕ್ಕೆ ಬಂದರೆ ಆಗ ದಿನೇಶ್‌ ಕಾರ್ತಿಕ್‌ ಅಥವಾ ಅಂಬಾಟಿ ರಾಯುಡು ಅವರನ್ನು ಹೊರಗುಳಿಸಬೇಕಾಗುತ್ತದೆ.

ಬೌಲಿಂಗ್‌ ಬದಲಾವಣೆ ಅನುಮಾನ
ಭಾರತದ ಬೌಲರ್‌ಗಳು ನ್ಯೂಜಿಲ್ಯಾಂಡ್‌ ಟ್ರ್ಯಾಕ್‌ನ ಸಂಪೂರ್ಣ ಲಾಭವೆತ್ತಿದ್ದಾರೆ. ಶಮಿ ಅವರಂತೂ 2 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಭುವನೇಶ್ವರ್‌ ಭರ್ಜರಿ ಲಯದಲ್ಲಿದ್ದಾರೆ. ಇವರಿಬ್ಬರು ಕಿವೀಸ್‌ ಆರಂಭಿಕರಿಗೆ ಕ್ರೀಸ್‌ ಆಕ್ರಮಿಸಿಕೊಳ್ಳಲು ಅವಕಾಶವನ್ನೇ ನೀಡುತ್ತಿಲ್ಲ. ಅಕಸ್ಮಾತ್‌ ಖಲೀಲ್‌ ಅಹ್ಮದ್‌ ಅಥವಾ ಮೊಹಮ್ಮದ್‌ ಸಿರಾಜ್‌ ಅವರಿಗೆ ವಿಶ್ವಕಪ್‌ ಹಿನ್ನೆಲೆಯಲ್ಲಿ ಮತ್ತೂಂದು ಚಾನ್ಸ್‌ ನೀಡಬೇಕಾದಲ್ಲಿ ಈ ಪ್ರಧಾನ ಬೌಲರ್‌ಗಳಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಲೂಬಹುದು.

ಕುಲದೀಪ್‌-ಚಾಹಲ್‌ ಜೋಡಿಯ ಸ್ಪಿನ್‌ ನ್ಯೂಜಿಲ್ಯಾಂಡಿಗೆ ನುಂಗಲಾಗದ ತುತ್ತಾಗಿರುವುದು ಸುಳ್ಳಲ್ಲ. ಇದನ್ನು ಅವರ ನಾಯಕ ವಿಲಿಯಮ್ಸನ್‌ ಕೂಡ ಒಪ್ಪಿಕೊಂಡಿದ್ದಾರೆ. ಆದರೂ ರವೀಂದ್ರ ಜಡೇಜ ಅವರಿಗೆ ಬಾಗಿಲು ತೆರೆದೀತೇ ಎಂಬ ಕುತೂಹಲವಂತೂ ಇದ್ದೇ ಇದೆ.

ಸಂಭಾವ್ಯ ತಂಡಗಳು
ಭಾರತ
: ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಅಂಬಾಟಿ ರಾಯುಡು, ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌.

ನ್ಯೂಜಿಲ್ಯಾಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮುನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟಯ್ಲರ್‌, ಟಾಮ್‌ ಲ್ಯಾಥಂ, ಹೆನ್ರಿ ನಿಕೋಲ್ಸ್‌, ಜೇಮ್ಸ್‌ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಟಾಡ್‌ ಆ್ಯಸ್ಟಲ್‌, ಲಾಕಿ ಫ‌ರ್ಗ್ಯುಸನ್‌, ಟ್ರೆಂಟ್‌ ಬೌಲ್ಟ್.
ಆರಂಭ: ಬೆಳಗ್ಗೆ 7.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ಹ್ಯಾಮಿಲ್ಟನ್‌ನಲ್ಲಿ ಒಂದೇ ಗೆಲುವು
ಹ್ಯಾಮಿಲ್ಟನ್‌ನ “ಸೆಡ್ಡನ್‌ ಪಾರ್ಕ್‌’ನಲ್ಲಿ ಮೊದಲ ಏಕದಿನ ಪಂದ್ಯ ನಡೆದದ್ದೇ ಭಾರತ-ನ್ಯೂಜಿಲ್ಯಾಂಡ್‌ ನಡುವೆ. 1981ರ ಪ್ರವಾಸದ ವೇಳೆ ಸರಣಿಯ 2ನೇ ಪಂದ್ಯವನ್ನು ಇಲ್ಲಿ ಆಡಲಾಗಿತ್ತು. ಸಣ್ಣ ಮೊತ್ತದ ಈ ಮುಖಾಮುಖೀಯಲ್ಲಿ ಭಾರತ 57 ರನ್ನುಗಳ ಸೋಲನುಭವಿಸಿತು. ಕಿವೀಸ್‌ 2 ಪಂದ್ಯಗಳ ಕಿರು ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿತು. ಭಾರತ ತಂಡದ ಅಂದಿನ ನಾಯಕರಾಗಿದ್ದವರು ಜಿ.ಆರ್‌. ವಿಶ್ವನಾಥ್‌.

ನ್ಯೂಜಿಲ್ಯಾಂಡ್‌ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ಒಟ್ಟು 5 ಪಂದ್ಯವಾಡಿರುವ ಭಾರತ, ನಾಲ್ಕರಲ್ಲಿ ಸೋತು ಒಂದನ್ನಷ್ಟೇ ಗೆದ್ದಿದೆ. ಉಳಿದಂತೆ ಇತರ ತಂಡಗಳ ವಿರುದ್ಧ 4 ಪಂದ್ಯಗಳನ್ನಾಡಿ ಎರಡರಲ್ಲಿ ಜಯ ಸಾಧಿಸಿದೆ. ಈ ಗೆಲುವು ಜಿಂಬಾಬ್ವೆ ಮತ್ತು ಐರ್ಲೆಂಡ್‌ ವಿರುದ್ಧ ದಾಖಲಾಗಿತ್ತು. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ಎದುರು ಪರಾಭವಗೊಂಡಿತ್ತು.

ಹ್ಯಾಮಿಲ್ಟನ್‌ನಲ್ಲಿ ಭಾರತ-ನ್ಯೂಜಿಲ್ಯಾಂಡ್‌
ವರ್ಷ    ಫ‌ಲಿತಾಂಶ
1981    ನ್ಯೂಜಿಲ್ಯಾಂಡಿಗೆ 57 ರನ್‌ ಜಯ
2003    ನ್ಯೂಜಿಲ್ಯಾಂಡಿಗೆ 6 ವಿಕೆಟ್‌ ಜಯ
2009    ಭಾರತಕ್ಕೆ 84 ರನ್‌ ಜಯ
2014    ನ್ಯೂಜಿಲ್ಯಾಂಡಿಗೆ 15 ರನ್‌ ಜಯ
2014    ನ್ಯೂಜಿಲ್ಯಾಂಡಿಗೆ 7 ವಿಕೆಟ್‌ ಜಯ

ಅಂಕಿ-ಅಂಶ
* ರೋಹಿತ್‌ ಶರ್ಮ 200 ಏಕದಿನ ಪಂದ್ಯಗಳನ್ನಾಡಲಿರುವ ಭಾರತದ 14ನೇ ಕ್ರಿಕೆಟಿಗನಾಗಲಿದ್ದಾರೆ.
* ಏಕದಿನದಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಭಾರತೀಯ ದಾಖಲೆ ಸ್ಥಾಪಿಸಲು ರೋಹಿತ್‌ಗೆ ಇನ್ನೊಂದೇ ಸಿಕ್ಸರ್‌ ಅಗತ್ಯವಿದೆ. ಸದ್ಯ ಧೋನಿ ಮತ್ತು ರೋಹಿತ್‌ 215 ಸಿಕ್ಸರ್‌ ಬಾರಿಸಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
* ಇಲ್ಲಿ ಆಡಲಾದ ಕಳೆದ 10 ಪಂದ್ಯಗಳಲ್ಲಿ ಸೆಕೆಂಡ್‌ ಬ್ಯಾಟಿಂಗ್‌ ನಡೆಸಿದ ತಂಡ ಏಳರಲ್ಲಿ ಗೆದ್ದಿದೆ.
* ಕಾಲಿನ್‌ ಮುನ್ರೊ 50ನೇ ಏಕದಿನ ಪಂದ್ಯವಾಡಲಿದ್ದಾರೆ.
* ನ್ಯೂಜಿಲ್ಯಾಂಡ್‌ನ‌ಲ್ಲಿ ಈವರೆಗೆ ಭಾರತದ ಯಾವುದೇ ನಾಯಕನಿಂದ ಶತಕ ದಾಖಲಾಗಿಲ್ಲ. ಜಿಂಬಾಬ್ವೆ ಎದುರಿನ 2015ರ ಆಕ್ಲೆಂಡ್‌ ಪಂದ್ಯದಲ್ಲಿ ಧೋನಿ ಅಜೇಯ 85 ರನ್‌ ಬಾರಿಸಿದ್ದೇ ಅತ್ಯಧಿಕ ಮೊತ್ತವಾಗಿದೆ.
* ರವೀಂದ್ರ ಜಡೇಜ 2 ಸಾವಿರ ರನ್‌ ಪೂರ್ತಿಗೊಳಿಸಲು ಇನ್ನು ಹತ್ತೇ ರನ್‌ ಮಾಡಬೇಕಿದೆ. ಆದರೆ ಈ ಸರಣಿಯಲ್ಲಿ ಅವರಿಗೆ ಇನ್ನೂ ಆಡುವ ಅವಕಾಶ ಲಭಿಸಿಲ್ಲ.
* ಸಾವಿರ ರನ್‌ ಪೂರ್ತಿಗೊಳಿಸಲು ಕೇದಾರ್‌ ಜಾಧವ್‌ಗೆ ಇನ್ನು 33 ರನ್‌ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next