ಮಂಗಳೂರಿನಲ್ಲಿ ನೀರು ಸರಬರಾಜು ಸ್ಥಗಿತವಾಗಲಿದೆ.
Advertisement
ಈ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಸœಗಿತಗೊಂಡಿದ್ದ ನೀರು ರೇಷನಿಂಗ್ ಮೇ 1ರಿಂದ ಮತ್ತೆ ಜಾರಿಯಾಗಲಿದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಸಂಗ್ರಹದಲ್ಲಿ ಇಳಿಮುಖವಾಗುತ್ತಿದ್ದು ಹಾಲಿ ಸಂಗ್ರಹ ಇರುವ ನೀರನ್ನು ಜೂನ್ ಮೊದಲನೇ ವಾರದವರೆಗೆ ಸಮರ್ಪಕವಾಗಿ ವಿತರಣೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ 4 ದಿನಗಳ ಒಟ್ಟು 96 ಗಂಟೆಗಳ ಅವಧಿಯಲ್ಲಿ ಎಲ್ಲ ವಾರ್ಡ್‌ಗಳಿಗೆ ಹಾಲಿ ಪೂರೈಕೆ ಮಾಡುತ್ತಿರುವ ರೀತಿಯಲ್ಲಿ ನೀರನ್ನು ಸರಬರಾಜು ಮಾಡಲಾಗುವುದು.
ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ನೀರಿನ ಮಟ್ಟ ಕಡಿಮೆಗೊಂಡ ಹಿನ್ನೆಲೆಯಲ್ಲಿ ಎ. 11ರಿಂದಲೇ ನೀರಿನ ರೇಷನಿಂಗ್ ನಡೆಸಲು ಜಿಲ್ಲಾಡಳಿತ/ ಮನಪಾ ನಿರ್ಧರಿಸಿತ್ತು. ಬಳಿಕ ನಿರ್ಧಾರ ಬದಲಿಸಿ ಚುನಾವಣೆ ಮುಗಿದ ಬಳಿಕ ರೇಷನಿಂಗ್‌ಗೆ ಉದ್ದೇಶಿಸಿದ ಹಿನ್ನೆಲೆಯಲ್ಲಿ ಎ. 18ರ ಸಂಜೆ 6 ಗಂಟೆಯಿಂದ ರೇಷನಿಂಗ್ ಆರಂಭಿಸಿತ್ತು. ಹೀಗಾಗಿ ಎ. 18ರಿಂದ 20ರ ಬೆಳಗ್ಗೆಯವರೆಗೆ ನೀರಿರಲಿಲ್ಲ. 20ರಂದು ಬೆಳಗ್ಗಿನಿಂದ ಮತ್ತೆ ನೀರು ಸರಬರಾಜು ಆರಂಭಿಸಿ ಎ. 24ರಂದು ಬೆಳಗ್ಗೆಯವರೆಗೆ ನೀರು ಹರಿಸಲು ಉದ್ದೇಶಿಸಿ ಎ. 24- ಎ. 25ಕ್ಕೆ ರೇಷನಿಂಗ್ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ತುಂಬೆ ಡ್ಯಾಮ್‌ನಲ್ಲಿ ಆಗ ನೀರಿನ ಪ್ರಮಾಣದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ವಾರದ ರೇಷನಿಂಗ್ ಕೈಬಿಡಲಾಗಿತ್ತು. ಈ ಮಧ್ಯೆ ಸಚಿವ ಖಾದರ್ ಎ. 28ರಂದು ತುಂಬೆ ಡ್ಯಾಂಗೆ ಭೇಟಿ ನೀಡಿ, ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟು ಎ. 30ರವರೆಗಿನ ಪರಿಸ್ಥಿತಿ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಉಲ್ಲೇಖೀಸಿದ್ದರು. ಈಗ ಮಳೆಯ ಸಾಧ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ರೇಷನಿಂಗ್ ಮುಂದುವರಿಸುವ ಅನಿವಾರ್ಯತೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಗಣಿಸಿದೆ. ಇದರಂತೆ ಮೇ ತಿಂಗಳಿನಲ್ಲಿ ರೇಷನಿಂಗ್ ಮಾಡುವ ದಿನಾಂಕವನ್ನು ಪ್ರಕಟಿಸಿದೆ.
Related Articles
ಮಂಗಳೂರು ಪಾಲಿಕೆಯು ತಿಳಿಸಿರುವ ಪ್ರಕಾರ, ಮೇ 1ರ ಬೆಳಗ್ಗೆ 6 ಗಂಟೆಯಿಂದ ಮೇ 3ರ ಬೆಳಗ್ಗೆ 6 ಗಂಟೆಯವರೆಗೆ (48 ತಾಸುಗಳ ಅವಧಿ) ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತದೆ. ಬಳಿಕ ಮೇ 3ರ ಬೆಳಗ್ಗೆ 6 ಗಂಟೆಯಿಂದ ಮೇ 7ರ ಬೆಳಗ್ಗೆ 6 ಗಂಟೆಯವರೆಗೆ (96 ಗಂಟೆಗಳ ಕಾಲ) ನೀರು ಸರಬರಾಜು ಮಾಡಲಾಗುವುದು. ಬಳಿಕ ಮೇ 9 ರ ಬೆಳಗ್ಗೆ 6 ಗಂಟೆಯವರೆಗೆ ಪೂರೈಕೆ ಸ್ಥಗಿತಗೊಳಿಸಲಾಗುವುದು. ಮೇ 9 ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಬೆಳಗ್ಗೆ 6 ಗಂಟೆಯವರೆಗೆ 96 ತಾಸುಗಳ ಕಾಲ ಸರಬರಾಜು ಇರುತ್ತದೆ. ಬಳಿಕ ಮೇ15 ರ ಬೆಳಗ್ಗೆ 6 ಗಂಟೆಯವರೆಗೆ ಸ್ಥಗಿತಗೊಳ್ಳುತ್ತದೆ. ಮೇ 15 ರಂದು 6 ಗಂಟೆಯಿಂದ ಪ್ರಾರಂಭವಾಗುವ ಪೂರೈಕೆ ಮೇ19 ರ ಬೆಳಗ್ಗೆ 6 ಗಂಟೆಯವರೆಗೆ ಸರಬರಾಜು ಮಾಡಲಾಗುತ್ತದೆ. ಬಳಿಕ ಸ್ಥಗಿತಗೊಳ್ಳಲಿದ್ದು ಮೇ 21ರ ಬೆಳಗ್ಗೆ 6 ಗಂಟೆಗೆ ಪ್ರಾರಂಭಗೊಳ್ಳಲಿದೆ.
Advertisement