ನವದೆಹಲಿ: ರಾಜಸ್ಥಾನ, ಪಂಜಾಬ್, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಂಗಳವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಲ್ಲದೆ, ಪಂಜಾಬ್, ಹರ್ಯಾಣ, ಚಂಡೀಗಡ, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಕೆಲವು ರಾಜ್ಯಗಳಲ್ಲಿ
ಸೆ.4ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದೂ ಹೇಳಿದೆ.
ಈ ನಡುವೆ, ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಹಲವು ಗ್ರಾಮಗಳು ಜಲಾವೃತವಾಗಿವೆ. ಹೀಗಾಗಿ, ಒಂದೇ ಗ್ರಾಮದ 500 ಮಂದಿ ಸೇರಿದಂತೆ ಭಂಡಾರಾ ಮತ್ತು ಚಂದ್ರಾಪುರ ಜಿಲ್ಲೆಗಳ 3 ಸಾವಿರಕ್ಕೂ ಅಧಿಕ ಮಂದಿಯನ್ನು ಸೋಮವಾರ ಸ್ಥಳಾಂತರಿಸಲಾಗಿದೆ.
ಧಾರಾಕಾರ ಮಳೆಯಿಂದಾಗಿ ನರ್ಮದಾ ನದಿಯ ನೀರಿನ ಮಟ್ಟ ಏರಿಕೆ ಯಾಗಿದ್ದು, ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಭರೂಚ್ ಮತ್ತು ವಡೋದರಾ ಜಿಲ್ಲೆಗಳ 5 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಕೊಚ್ಚಿಹೋದ 55 ಮನೆಗಳು: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಗಂಗಾ ನದಿ ತೀರದಲ್ಲಿನ ಮಣ್ಣಿನ ಸವೆತದಿಂದಾಗಿ 55ಕ್ಕೂ ಅಧಿಕ ಮನೆಗಳು ಕೊಚ್ಚಿಕೊಂಡು ಹೋಗಿವೆ. ಏಕಾಏಕಿ ಗಂಗಾ ನದಿಯ ನೀರಿನ ಪ್ರಮಾಣ ಇಳಿಮುಖವಾಗಿದ್ದು, ಚೈನಾ ಬಜಾರ್ ಗ್ರಾಮದಲ್ಲಿ ಮಣ್ಣಿನ ಸವೆತ ಉಂಟಾಗಿ ನದಿ ತಟದಲ್ಲಿದ್ದ 70 ಮೀಟರ್‌ನಷ್ಟು ಪ್ರದೇಶ ಹಾಗೂ 55ಕ್ಕೂ ಹೆಚ್ಚು ಮನೆಗಳು ಕೊಚ್ಚಿಕೊಂಡು ಹೋದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾದ ಕಾರಣ 300ಕ್ಕೂ ಅಧಿಕ ವಾಹನಗಳು ಸಂಚರಿಸಲಾಗದೇ ರಸ್ತೆಯಲ್ಲೇ ಸಾಲುಗಟ್ಟಿ ನಿಂತಿವೆ.