Advertisement
“ಗುರುಪೂರ್ಣಿಮೆ’ ಅಥವಾ “ವ್ಯಾಸ ಪೂರ್ಣಿಮೆ’ ವೇದಗಳನ್ನು ವಿಂಗಡಿಸಿದ ಹಾಗೂ ಮಹಾಭಾರತ ಮಹಾಕಾವ್ಯ ರಚಿಸಿದ ಮಹರ್ಷಿ ವೇದವ್ಯಾಸರನ್ನು ಸ್ಮರಿಸುವ ಪಾವನ ದಿನ. ಗುರುವೇ ತ್ರಿಮೂರ್ತಿ ಗಳು, ಅಷ್ಟೇಕೆ ಗುರುವೇ “ಸಾಕ್ಷಾತ್ ಪರಬ್ರಹ್ಮ’ ಎಂಬ ಮಟ್ಟಕ್ಕೇರಿಸಿ ಪೂಜನೀಯ ಭೂಮಿಕೆ ಸೃಜಿಸಿದ ನಾಡು ನಮ್ಮ ಭಾರತ. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವ ದಾಸೋಕ್ತಿಯವರೆಗೆ, ಗುರುತ್ವವನ್ನು ಉನ್ನತೀಕರಿಸಿದ ಸಂಸ್ಕೃತಿ ನಮ್ಮದು. ಮಾತಾ ಪಿತೃಗಳ ಬಳಿಕ “ಆಚಾರ್ಯ ದೇವೋಭವಃ’ ಎಂಬುದಾಗಿ ಜನಸಾಮಾನ್ಯ ರಿಂದ ಹಿಡಿದು ಮಕುಟಧಾರಿಗಳವರೆಗೆ ಗುರು ನಮನದ ಸುಂದರ ಸಭ್ಯತೆಯ ತಂತು ಹರಿಸಿದ ಭವ್ಯ ಚರಿತ್ರೆ ನಮ್ಮದು.
Related Articles
Advertisement
1. ತನ್ನದೇ ಶಿಕ್ಷಕ ವೃತ್ತಿಯ ಬಗ್ಗೆ ಆತ್ಮಾಭಿಮಾನ, ಪ್ರೀತಿ ಹಾಗೂ ಗೌರವ- ಇದು ಶಿಕ್ಷಕರಿಗೆ ಇರಲೇ ಬೇಕಾದ ಪ್ರಾಥಮಿಕ ಅಂಶ.2. ಎರಡನೆಯದಾಗಿ, “ಜ್ಞಾನತೃಷೆ’ ಉತ್ತಮ ಶಿಕ್ಷಕನ ಇನ್ನೊಂದು ಮೂಲಧಾತು. ತಾನು ಕಲಿಸುವ ಪಠ್ಯದ ಬಗೆಗೆ, ವಿಷಯದ ಬಗೆಗೆ ಪರಿಪೂರ್ಣ ಜ್ಞಾನ ನೂರಕ್ಕೆ ನೂರು ಪ್ರತಿಶತಃ ಯಾರಿಗೂ ಸಾಧ್ಯವಿಲ್ಲ. ಅನೇಕ ಹಿರಿಯ ಪರಂಪರೆಯ ಗುರುಗಳ ನಿರಂತರ ಅಧ್ಯಯನಶೀಲತೆ, ಬೆರಗುಗೊಳಿಸುವಷ್ಟು ಜ್ಞಾನ ಭಂಡಾರ- ಇವೆಲ್ಲವೂ ಕಟ್ಟುಕತೆಗಳಲ್ಲ; ವಾಸ್ತವ!
3. ತಮಗೆ ಅನ್ನ ನೀಡುವ, ಬೋಧನೆ, ಸಾಧನೆಯ ತಾಣ ಎನಿಸುವ ತಂತಮ್ಮ ವಿದ್ಯಾಸಂಸ್ಥೆಗಳ ಬಗೆಗೆ ನಿಷ್ಠೆ ತೀರಾ ಅತ್ಯಗತ್ಯ. ಅವು ಖಾಸಗಿ ಇರಬಹುದು, ಸರಕಾರೀ ಶಾಲೆ, ಕಾಲೇಜುಗಳಿರಬಹುದು. ಅದರ ಸರ್ವಾಂಗೀಣ, ಉನ್ನತಿಗೆ ಯತ್ನಿಸುವ, ಅದನ್ನು ಪ್ರೀತಿಸುವ ವಿಶಾಲ ಹೃದಯವಂತಿಕೆ ಶಿಕ್ಷಕರು ಆರ್ಜಿಸಬೇಕಾದ ಗುಣ. ಎಷ್ಟೋ ವಿದ್ಯಾ ಸಂಸ್ಥೆಗಳ ಅಧ್ಯಾಪಕರ ನಿರಂತರ ಯತ್ನದಿಂದ ಗ್ರಂಥಾಲಯ, ಪ್ರಯೋಗ ಶಾಲೆಯಿಂದ ಹಿಡಿದು ಆಟದ ಬಯಲು, ಸುಂದರ ತೋಟದವರೆಗೆ, ಪ್ರಶಸ್ತಿ ಪತ್ರಗಳಿಂದ ಹಿಡಿದು ಸಾಲು ಸಾಲು ಪದಕ, ಪಾರಿತೋಷಕದ ವರೆಗೆ ಅಂತೆಯೇ ಶಿಸ್ತಿನ ಒಪ್ಪ ಓರಣದ ಬಗೆಗೆ ಶಿಕ್ಷಕರ ಪಾತ್ರ ಬಹಳಷ್ಟು ಹಿರಿದು.
4. ತಾವು ಕಲಿಸುವ ಮಕ್ಕಳ ಬಗೆಗೆ ಅಕ್ಕರೆ, ಪ್ರೀತಿ ಹಾಗೂ ಶಿಷ್ಯವಾತ್ಸಲ್ಯ ಇವೆಲ್ಲ ಅಕ್ಷರ ಗಳಲ್ಲಿ ತುಂಬಲಾರದ, ಶಿಕ್ಷಕ ಸಂಪನ್ಮೂಲದ ಮೂಲಧಾರೆ. ಮಕ್ಕಳ ಬಾಳಹೊತ್ತಗೆಯಲ್ಲಿ ಗುರುಗಳ ಸುಂದರ ಹಸ್ತಾಕ್ಷರ ಮೂಡಿ ಬರುವಲ್ಲಿ ಶಿಕ್ಷಕರ ದಿನಾಚರಣೆಯ ನೈಜ ಮಕರಂದ ತುಂಬಿ ನಿಂತಿದೆ.
5. “ನಾವು ರಾಷ್ಟ್ರ ಕಟ್ಟುವ ಭಾವೀ ಪ್ರಜೆಗಳ ನಿರ್ಮಾತೃಗಳು’ ಎಂಬ ಔನ್ನತ್ಯದ ಮನೋ ಭೂಮಿಕೆ, ರಾಷ್ಟ್ರೀಯ ಪರಿಕಲ್ಪನೆ, ಅಂತಃಸತ್ವ ಶಿಕ್ಷಕರ ಮೈಮನ ಅರಳಿಸುವಂತಿರಬೇಕು. “ತಮ್ಮ ಜೀವಿತ ಕಾಲದಲ್ಲೇ ಭಾರತ ಸ್ವತಂತ್ರವಾದರೆ ತಾವು ಯಾವ ಮಂತ್ರಿ ಆಗಬೇಕೆಂದು ಬಯಸುವಿರಿ?’ ಇದು ಬಾಲಗಂಗಾಧರ ತಿಲಕರಿಗೆ ಅಭಿಮಾನಿಯೋರ್ವರ ಪ್ರಶ್ನೆಯಾಗಿತ್ತು. ಆಗ ಥಟ್ಟನೆ “ನಾನು ಗಣಿತ ಅಧ್ಯಾಪಕ ನಾಗುವ ಬಯಕೆ ಹೊಂದಿದ್ದೇನೆ’ ಎಂದು ಉತ್ತರ ಅವರಿಂದ ಪುಟಿಯಿತು. ಮೈಸೂರು ವಿಶ್ವ ವಿದ್ಯಾನಿಲಯ ದಲ್ಲಿನ ತತ್ತÌಶಾಸ್ತ್ರ ಪ್ರಾಧ್ಯಾಪಕರಾದ ಡಾ| ರಾಧಾಕೃಷ್ಣನ್ ರಾಷ್ಟ್ರಪತಿ, ಉಪರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೇ ಗೇರುವಲ್ಲಿ ಅವರ ರಾಷ್ಟ್ರಭಕ್ತಿಯೇ ಶಕ್ತಿಧಾತುವಾದುದು ಒಂದು ಜ್ವಲಂತ ಉದಾಹರಣೆ: ಮೈಸೂರಿನ ಮಹಾ ರಾಜ ಕಾಲೇಜಿನಲ್ಲಿ ಅವರ ವಿದಾಯ ಕೂಟದ ಬಳಿಕ ರೈಲ್ವೇ ಸ್ಟೇಶನ್‌ಗೆ ತೆರಳಲು ಬಂದ ಕುದುರೆಗಾಡಿಯ ಕುದುರೆಗಳನ್ನು ಬಿಚ್ಚಿ ಸ್ವತಃ ವಿದ್ಯಾರ್ಥಿಗಳೇ ಎಳೆದುಕೊಂಡು ಹೋದ ಸಂದರ್ಭ- ಆ ಗುರು-ಶಿಷ್ಯರ ಮನದ ಮನೋಭೂಮಿಕೆ ಹೇಗಿರಬಹುದು ಅದು ಊಹನೆಗೆ ನಿಲುಕದಂತಹದು! ಹೀಗೆ ಭದ್ರ ಪಂಚಾಂಗದ ಮೇಲೆ ಶಿಕ್ಷಕರನನ್ನು ಇರಿಸಿ, ಸಮಗ್ರ ರಾಷ್ಟ್ರ ಚಿಂತನೆಯ ಪರಿಧಿಯಲ್ಲಿ ಗುರು ಪರಂಪರೆಯ ಜೀವಂತಿಕೆಗೆ ನೀರೆರೆಯುವ ಪುಣ್ಯದಿನ ವಿದು. ಈಗಲೂ ನಾಟ್ಯ, ಯಕ್ಷಗಾನ, ಸಂಸ್ಕೃತಾಭ್ಯಾಸ ಹೀಗೆ ಹಲವು ರಂಗಗಳಲ್ಲಿ ಯಥಾವತ್ತಾಗಿ ಮುಂದು ವರಿಯುತ್ತಿರುವ ಗುರು ಪರಂಪರೆಯ ಗಮನಾರ್ಹ. ನಾಡಿನ ಏಳಿಗೆಯಲ್ಲಿ ಪ್ರಧಾನ ಭೂಮಿಕೆಯ ವಿದ್ಯಾರ್ಜನೆಯ ಚೇತನ ಸಂವರ್ಧನೆಯ ಪೂರಕ, ಪ್ರೇರಕ ಶುಭಗಳಿಗೆಯೇ ಶಿಕ್ಷಕರ ದಿನಾಚರಣೆ. -ಡಾ| ಪಿ. ಅನಂತಕೃಷ್ಣ ಭಟ್