ಧರ್ಮಶಾಲಾ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪರಾಕ್ರಮದ ಶಕ್ತಿ ಹೊಂದಿರುವ ಕರ್ನಾಟಕ ತಂಡ ದೇವಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಗುರುವಾರ ಭಾರತ “ಬಿ’ ತಂಡದ ಸವಾಲನ್ನು ಎದುರಿಸಲಿದೆ.
ಲೀಗ್ ಹಂತದಲ್ಲಿ ಕರ್ನಾಟಕ ತಂಡ ಭಾರತ “ಎ’ ಮತ್ತು ಭಾರತ “ಬಿ’ ತಂಡಗಳನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಹಾಕಿದೆ. ಆದರೆ, ಭಾರತ “ಬಿ’ ತಂಡ ಭಾರತ “ಎ’ ವಿರುದ್ಧ ಗೆಲುವು ಪಡೆದರೆ, ಕರ್ನಾಟಕ ವಿರುದ್ಧ ಸೋತು ಫೈನಲ್ ಪ್ರವೇಶಿಸಿದೆ.
ಕರ್ನಾಟಕ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮಾಯಾಂಕ್ ಅಗರ್ವಾಲ್, ಆರ್.ಸಮರ್ಥ್, ಪವನ್ ದೇಶಪಾಂಡೆ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಉಳಿದಂತೆ ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್ ಅಗತ್ಯ ಕಾಲದಲ್ಲಿ ನೆರವಾಗುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಕರಾರುವಾಕ್ ದಾಳಿ ನಡೆಸಿ ಕೆ.ಗೌತಮ್, ಶ್ರೇಯಸ್ ಗೋಪಾಲ್, ರೋನಿತ್ ಮೋರೆ ಎದುರಾಳಿಗಳನ್ನು ನಿಯಂತ್ರಿಸುತ್ತಿದ್ದಾರೆ.
ಇತ್ತ ಭಾರತ “ಬಿ’ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ಮನೋಜ್ ತಿವಾರಿ, ಸಿದ್ಧೇಶ್ ಲಾಡ್, ಶ್ರೇಯಸ್ ಅಯ್ಯರ್ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ಉಮೇಶ್ ಯಾದವ್, ಸಿದ್ಧಾರ್ಥ್ ಕೌಲ್, ಹರ್ಷಲ್ ಪಟೇಲ್, ಜಯಂತ್ ಯಾದವ್ ಉತ್ತಮ ದಾಳಿ ನಡೆಸುತ್ತಿದ್ದಾರೆ. ಮೆಲ್ನೋಟಕ್ಕೆ ಕರ್ನಾಟಕ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಕರ್ನಾಟಕ ತಂಡದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಎದುರಿಸುತ್ತಿರುವುದು ತಂಡಕ್ಕೆ ಆತಂಕವಾಗಿದೆ.
ತಂಡ
ಕರ್ನಾಟಕ: ಕರುಣ್ ನಾಯರ್ (ನಾಯಕ), ಮಾಯಾಂಕ್ ಅಗರ್ವಾಲ್, ಸ್ಟುವರ್ಟ್ ಬಿನ್ನಿ, ಪವನ್ ದೇಶಪಾಂಡೆ, ಸಿ.ಎಂ.ಗೌತಮ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಟಿ.ಪ್ರದೀಪ್, ಪ್ರಸಿದ್ಧ್ ಕೃಷ್ಣ, ಆರ್.ಸಮರ್ಥ್, ಬಿ.ಆರ್.ಶರತ್, ಜೆ.ಸುಚಿತ್.
ಭಾರತ “ಬಿ’: ಶ್ರೇಯಸ್ ಅಯ್ಯರ್ (ನಾಯಕ), ಅಭಿಮನ್ಯು ಈಶ್ವರನ್, ಶ್ರೀಕರ್ ಭರತ್, ಜಿ.ಎಚ್.ವಿಹಾರಿ, ಮನೋಜ್ ತಿವಾರಿ, ಸಿದ್ಧೇಶ್ ಲಾಡ್, ಜಯಂತ್ ಯಾದವ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಧರ್ಮೆಂದ್ರಸಿನ್ಹ ಜಡೇಜ, ಸಿದ್ಧಾರ್ಥ್ ಕೌಲ್, ರುತುರಾಜ್ ಗಾಯಕ್ವಾಡ್, ಕೆ. ಖಲಿಲ್ ಅಹ್ಮದ್.