Advertisement

ಡಿಕೆಶಿ ಪ್ರತಿಜ್ಞಾವಿಧಿಗೆ ಹೈಟೆಕ್‌ ಸ್ಪರ್ಶ; ವರ್ಚುವಲ್‌ನಲ್ಲಿ 10 ಲಕ್ಷ  ಜನರ ಸೇರ್ಪಡೆ ಗುರಿ

01:40 AM Jul 01, 2020 | Hari Prasad |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ಅಧಿಕಾರ ಸ್ವೀಕರಿಸಲಿದ್ದು, ಇದು ವರ್ಚುವಲ್‌ ವ್ಯವಸ್ಥೆಯಲ್ಲಿ ವಿಶ್ವದಾಖಲೆ ಬರೆಯಲು ಸಜ್ಜಾಗಿದೆ.

Advertisement

ಬೆಂಗಳೂರಿನ ಪಕ್ಷದ ನೂತನ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಝೂಮ್‌ ಆ್ಯಪ್‌ ಮೂಲಕ ವೀಕ್ಷಿಸಲಿದ್ದಾರೆ ಎಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಈ ಆ್ಯಪ್‌ ಮೂಲಕವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇರ ಪ್ರಸಾರ ಮಾಡಲೂ ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ 10 ಸಾವಿರ ಲಿಂಕ್‌ ಸಿದ್ಧಪಡಿಸಲಾಗಿದೆ.

ವಿಶ್ವದಾಖಲೆ
ರಾಜ್ಯದಲ್ಲಿ ಇದುವರೆಗೆ ಈ ಪ್ರಮಾಣದಲ್ಲಿ ವರ್ಚುವಲ್‌ ಪದಗ್ರಹಣ ಕಾರ್ಯಕ್ರಮ ನಡೆದಿಲ್ಲ. ಇದೇ ಮೊದಲ ಬಾರಿಗೆ ಇಂಥ ಕಾರ್ಯಕ್ರಮ ನಡೆಸಲಾಗುತ್ತದೆ. ಅಷ್ಟೇ ಅಲ್ಲ, ಇದನ್ನು ವೀಕ್ಷಿಸಲು ದೇಶದ ಬೇರೆ ಬೇರೆ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಕಮಿಟಿಗಳಿಂದಲೂ ಝೂಮ್‌ ಲಿಂಕ್‌ಗಾಗಿ ಮನವಿ ಬಂದಿದೆ. ವಿದೇಶದಲ್ಲಿರುವ ಡಿಕೆಶಿ ಅಭಿಮಾನಿಗಳು ಕೂಡ ಲಿಂಕ್‌ ಕಳುಹಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

Advertisement

ರಾಜ್ಯದ 7,800 ಪ್ರದೇಶಗಳಲ್ಲಿ ಏಕಕಾಲಕ್ಕೆ ಪ್ರತಿಜ್ಞೆ ಸ್ವೀಕರಿಸಲಾಗುತ್ತದೆ. ಮುಖ್ಯ ಕಾರ್ಯಕ್ರಮದ ವೇದಿಕೆಯ ಸ್ಕ್ರೀನ್‌ ಮೇಲೆ ಇದು ನೇರ ಪ್ರಸಾರವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಪಕ್ಷದ ಅಧ್ಯಕ್ಷರ ಜತೆಗೆ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸುವ ವಿಶಿಷ್ಟ ಕಾರ್ಯಕ್ರಮ ಪ್ರಾಯಃ ಇದೇ ಮೊದಲು.

ಡಿ.ಕೆ. ಸುರೇಶ್‌ ಉಸ್ತುವಾರಿ
ಡಿ.ಕೆ. ಶಿವಕುಮಾರ್‌ ಮೇಲುಸ್ತುವಾರಿಯಲ್ಲಿ ಸಂಸದ ಡಿ.ಕೆ. ಸುರೇಶ್‌ ಈ ವರ್ಚುವಲ್‌ ಸಮಾವೇಶದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ತಂಡ ಮತ್ತು ನುರಿತ ಐಟಿ ತಂತ್ರಜ್ಞರನ್ನು ಬಳಸಿಕೊಂಡು ಎರಡು ತಿಂಗಳಿನಿಂದ ಸಿದ್ಧತೆಗೆ ಶ್ರಮಿಸುತ್ತಿದ್ದಾರೆ.

ಸಂವಿಧಾನ ಪೀಠಿಕೆ ಓದು
ರಾಜ್ಯದ 6,024 ಗ್ರಾ.ಪಂ. ಸಹಿತ ಪುರಸಭೆ, ಪ.ಪಂ., ನಗರಪಾಲಿಕೆಗಳ ವಾರ್ಡ್‌ ಮಟ್ಟದಲ್ಲಿ ಸುಮಾರು 7,800 ಕಡೆಗಳಲ್ಲಿ ಏಕಕಾಲಕ್ಕೆ ಪ್ರಮಾಣ ವಚನದ ಜತೆಗೆ ಪ್ರತಿಜ್ಞಾ ವಿಧಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಪ್ರತೀ ಪಂಚಾಯತ್‌ ಮತ್ತು ವಾರ್ಡ್‌ ವ್ಯಾಪ್ತಿಯಲ್ಲಿ ಕನಿಷ್ಠ 50ರಿಂದ 200 ಜನರು ಪಾಲ್ಗೊಳ್ಳುವ ಯೋಜನೆ ರೂಪಿಸಲಾಗಿದೆ.

ಜಿಪಿಎಸ್‌ ಟ್ರ್ಯಾಕರ್‌ ಬಳಕೆ
ಕಾರ್ಯಕ್ರಮದ ಯೋಜನೆ ರೂಪಿಸಲು ಪ್ರತೀ ಬ್ಲಾಕ್‌ ಮಟ್ಟಕ್ಕೂ ಉಸ್ತುವಾರಿ ನೇಮಿಸಲಾಗಿದೆ. ಇವರು ತಮ್ಮ ಬ್ಲಾಕ್‌ನಲ್ಲಿ ನಡೆಸಿದ ಸಿದ್ಧತೆಯನ್ನು ಕೆಪಿಸಿಸಿ ಕೇಂದ್ರ ಕಚೇರಿಯಿಂದಲೇ ಜಿಪಿಎಸ್‌ ಟ್ರ್ಯಾಕ್‌ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

16 ಸಾವಿರ ಯುವಕರಿಗೆ ತರಬೇತಿ
ಪ್ರತೀ ಪಂಚಾಯತ್‌ ವ್ಯಾಪ್ತಿಯಲ್ಲಿ ನೇರವಾಗಿ ಪ್ರತಿಜ್ಞೆಯಲ್ಲಿ ಪಾಲ್ಗೊಳ್ಳಲು ಝೂಮ್‌ ಆ್ಯಪ್‌ ಬಳಕೆ ಬಗ್ಗೆ ಸುಮಾರು 16 ಸಾವಿರ ಯುವಕರಿಗೆ ತರಬೇತಿ ನೀಡಲಾಗಿದೆ. ಇವರನ್ನು ‘ಡಿಜಿಟಲ್‌ ಯೂತ್‌’ ಆಗಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next