Advertisement
ಜಿಲ್ಲೆಯ ತೋಟಗಾರಿಕಾ ಇಲಾಖೆ ಮಾವು ಬೆಳೆಗಾರರನ್ನು ಉತ್ತೇಜಿಸಿ ಅವರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಮಹತ್ವಕಾಂಕ್ಷೆ ಹೊತ್ತು ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಜಿಲ್ಲೆಯ ಚದಲುಪುರ ಹಾಗೂ ತಾಲೂಕಿನ ಐತಿಹಾಸಿಕ ವಿಶ್ವ ವಿಖ್ಯಾತ ನಂದಿ ಗಿರಿಧಾಮದಲ್ಲಿ ಮಾವು ಮೇಳ ತಲೆ ಎತ್ತಲಿದ್ದು, ತೋಟಗಾರಿಕೆ ಇಲಾಖೆ ಈಗಾಗಲೇ ಮೇಳವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಭರದ ಸಿದ್ಧತೆಗಳನ್ನು ಕೈಗೊಂಡು ವ್ಯಾಪಕ ಪ್ರಚಾರಕ್ಕೂ ಮುಂದಾಗಿದೆ.
Related Articles
Advertisement
ಮಾವು ಮೇಳದಲ್ಲಿ ರೈತರಿಗೆ ಲಾಭದಾಯಕ ಕೃಷಿ, ಇಳುವರಿ ಹೆಚ್ಚು ಪಡೆಯುವ ವಿಧಾನ ಮಾವುಗಳ ತಳಿ, ಮಾಗಿಸುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಮಾವು ಮೇಳ ನಡೆಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
13,886 ಹೆಕ್ಟೇರ್ ಪ್ರದೇಶದಲ್ಲಿ ಮಾವು: ಜಿಲ್ಲೆಯಲ್ಲಿ ಸುಮಾರು 13,886 ಹೆಕೇrರ್‌ಗಳಲ್ಲಿ ಮಾವು ಬೆಳೆಯುತ್ತಿದ್ದು, ಇದರಿಂದ ಪ್ರತಿ ವರ್ಷ ಸುಮಾರು 1.18 ಲಕ್ಷ ಟನ್ ನಷ್ಟು ಮಾವಿನ ಹಣ್ಣನ್ನು ಉತ್ಪಾದಿಸಲಾಗುತ್ತಿದೆ. ವಿಶೇಷವಾಗಿ ಬಾದಾಮಿ, ರಸಪುರಿ, ಸೇಂದೂರ, ತೋತಾಪುರಿ, ಮಲ್ಲಿಕಾ, ನೀಲಂ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದೆ.
ಮಾವು ಮೇಳದಲ್ಲಿ ಈ ಎಲ್ಲಾ ತರಹದ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜಿಲ್ಲೆಯ 8 ರೈತರು ಮಾವು ಮೇಳದಲ್ಲಿ ಮಳಿಗೆ ತೆರೆಯಲು ಒಪ್ಪಿದ್ದಾರೆ. ಎಲ್ಲಾ ರೀತಿಯ ತರದ ತರಹೇವಾರಿ ಮಾವು ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ.
ಇಂದು ಡೀಸಿರಿಂದ ಉದ್ಘಾಟನೆ: ಹಲವು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಾವು ಮಾರಾಟ ಹಾಗೂ ಪ್ರದರ್ಶನ ಮೇಳ ಆಯೋಜಿಸಿದ್ದೇವೆ. ಶನಿವಾರ ಹಾಗೂ ಭಾನುವಾರ ವೀಕೆಂಡ್ ಆಗಿರುವುದರಿಂದ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುವ ಭರವಸೆ ಇದೆ.
25 ರಂದು ಬೆಳಗ್ಗೆ 8:30ಕ್ಕೆ ನಂದಿಬೆಟ್ಟದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾವು ಮಾರಾಟ ಹಾಗೂ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಮೇಳ ಯಶಸ್ವಿಯಾದರೆ ಪ್ರತಿ ವರ್ಷ ಮಾವು ಸುಗ್ಗಿಯಲ್ಲಿ ಮೇಳ ಆಯೋಜಿಸಿ ಗ್ರಾಹಕರಿಗೆ ನೇರವಾಗಿ ಮಾವು ಬೆಳೆಗಾರರಿಂದ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವ ಮೂಲಕ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗಲಿಯೆಂಬ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ಉದಯವಾಣಿಗೆ ತಿಳಿಸಿದರು.