ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನ ಸೇವಿಸಿ ಉಗುಳುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನಿಯಮ, ಉಲ್ಲಂಘಿಸಿದರೆ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು, ಕೊರೊನಾ ಪಿಡುಗು ಪರಿಣಾಮಕಾರಿ ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ತಂಬಾಕು, ಪಾನ್ ಮಸಾಲ ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಿ ಉಗುಳುವುದು ನಿರ್ಬಂಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟ್ಕಾ ನಿಷೇಧಿಸಿದ ಬಳಿಕ ಅಡಕೆ ಹಾಗೂ ತಂಬಾಕು ಚೀಟಿಗಳನ್ನು ಬೇರೆ ಮಾಡಿ ಪೂರೈಕೆ ಹಾಗೂ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕಿದೆ. ಹೀಗಾಗಿ ಯಾವುದೇ ರೀತಿಯ ಜಗಿಯುವ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಿ, ಉಗುಳುವುದನ್ನು ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ರಕ್ಷಣೆ: ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳನ್ನು ಬಳಕೆ ಮಾಡುವವರ ಪ್ರಮಾಣ ಶೇ.28ರಿಂದ 22ಕ್ಕೆ ಇಳಿದಿದೆ. ತಂಬಾಕು ಚಟದಿಂದ ಯುವಪೀಳಿಗೆಯನ್ನು ರಕ್ಷಿಸುವುದು, ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಇಂತಹ ಕ್ರಮವನ್ನು ವಿಶ್ವ ತಂಬಾಕು ರಹಿತ ದಿನಾಚರಣೆಯ ಮುನ್ನಾ ದಿನವೇ ಕೈಗೊಂಡು ಈ ಕುರಿತು ಆದೇಶ ಹೊರಡಿಸಿದೆ ಎಂದರು.
ಜಗಿಯುವ ತಂಬಾಕು ಉತ್ಪನ್ನಗಳು, ನಿಕೋಟಿನ್ ಪದಾರ್ಥಗಳು ಹಾಗೂ ಪಾನ್ ಮಸಾಲ್ ಜಗಿದು ಉಗುಳುವುದನ್ನು ನಿಷೇಧ ಮಾತ್ರವಲ್ಲ, ಪರಿಣಾಮಕಾರಿ ಅನುಷ್ಠಾನ ಹಾಗೂ ಉಲ್ಲಂಘಿಸಿದರ ವಿರುದಟಛಿ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತ್ಯ ಅಗತ್ಯ ಕ್ರಮವಹಿಸುವುದಕ್ಕೂ ಸರ್ಕಾರ ಆದೇಶಿಸಲಾಗಿದೆ ಎಂದು ತಿಳಿಸಿದರು.
ಉಲ್ಲಂಘಿಸಿದರೆ ಜೈಲು: ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳ ಸೇವನೆ ಹಾಗೂ ಉಗುಳುವುದು ನಿಷೇಧಿಸುವ ಆದೇಶ ಉಲ್ಲಂಘಿಸಿದವರ ವಿರುದ ಐಪಿಸಿ ಸೆಕ್ಷನ್ 188 (ಸರ್ಕಾರಿ ಆದೇಶಕ್ಕೆ ಅವಿಧೇಯತೆ)ಡಿ 6 ತಿಂಗಳ ಸಾದಾ ಸಜೆ, 1000 ರೂ. ದಂಡ, ಸೆಕ್ಷನ್ 268 (ಅನುಚಿತ ವರ್ತನೆ) 269 (ಜೀವಕ್ಕೆ ಅಪಾಯಕಾರಿ ಸೋಂಕು ಹರಡುವಿಕೆ ಗೊತ್ತಿದ್ದರೂ ಉದಾಸೀನತೆ)ರಡಿ 6 ತಿಂಗಳ ಸಾದಾ ಶಿಕ್ಷೆ ಹಾಗೂ ಐಪಿಸಿ 270 (ಸಾರ್ವಜನಿಕರ ಸೋಂಕು ಹರಡಿಸುವ ಅಪಾಯಕಾರಿ ನಡವಳಿಕೆ)ರಡಿ 2 ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.