Advertisement

ತಂಬಾಕು ಸಸಿ ಮಡಿ, ಗೊಬ್ಬರ ಮಳೆಪಾಲು; ಕೇಂದ್ರ ಸರ್ಕಾರದತ್ತ ಮುಖಮಾಡಿದ ರೈತರು

02:50 PM Jun 14, 2022 | Team Udayavani |

ಹುಣಸೂರು: ವಾರದ ಹಿಂದೆ ಸುರಿದ ಜಡಿ ಮಳೆಗೆ ಸುಮಾರು 6-8 ಸಾವಿರ ಹೆಕ್ಟರ್‌ ಪ್ರದೇಶದಲ್ಲಿ ಬೆಳೆದಿದ್ದ ತಂಬಾಕು ಬೆಳೆಗೆ ಹಾನಿಯಾಗಿದ್ದು, ಸಾವಿರಾರು ಹೊಗೆಸೊಪ್ಪು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶ್ವ ಶ್ರೇಷ್ಠ ದರ್ಜೆಯ ವರ್ಜಿನೀಯಾ ತಂಬಾಕು ಬೆಳೆಯುವ ಕರ್ನಾಟಕದ ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ತಾಲೂಕುಗಳಲ್ಲಿ ಹೆಚ್ಚಾಗಿ ಹಾಗೂ ಕೆ.ಆರ್‌.ನಗರ, ಅರಕಲಗೂಡು ಹಾಗೂ ಹೊಳೆನರಸೀಪುರ ತಾಲೂಕಿನ ಕೆಲ ಪ್ರದೇಶದಲ್ಲಿ ವಾರ್ಷಿಕ ಸರಿ ಸುಮಾರು 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗುತ್ತದೆ.

Advertisement

ಈ ಬಾರಿ ಏಪ್ರಿಲ್‌-ಮೇ ಆರಂಭದಲ್ಲಿ ಬಿದ್ದ ಮಳೆಗೆ ಸುಮಾರು 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡಲಾಗಿತ್ತು. ಉತ್ತಮ ಬೆಳೆ ಬರುವ ಆಶಾಭಾವನೆ ಇತ್ತಾದರೂ ಹತ್ತು ದಿನ ಸುರಿದ ಅಸಾನಿ ಚಂಡಮಾರುತ ಹಾಗೂ ನಂತರದಲ್ಲಿ ವಾಯುಭಾರ ಕುಸಿತದಿಂದ ಬಿದ್ದ ಅಕಾಲಿಕ ಮಳೆಯು ಭತ್ತ ಬೆಳೆವ ಪ್ರದೇಶ, ಕಪ್ಪು ಮಣ್ಣು ಹಾಗೂ ತಗ್ಗು ಪ್ರದೇಶಗಳಲ್ಲಿ ಬೆಳೆದಿದ್ದ ತಂಬಾಕು ಬೆಳೆ ಜಲಾವೃತಗೊಂಡು ತಂಬಾಕು ಸಸಿಗಳ ಬೇರು ಶೀತಬಾಧೆಯಾಗಿ ಅಭಿವೃದ್ಧಿಗೊಳ್ಳದ ಪರಿಣಾಮ ಹತ್ತು ಸಾವಿರ ಹೆಕ್ಟೇರ್‌ ಪ್ರದೇಶದ ಬೆಳೆಯೇ ನಾಶವಾಗಿದೆ. ಇದೀಗ ಬಿಸಿಲಿನ ಪರಿಣಾಮ ಸ್ವಲ್ಪ ಚೇತರಿಕೆ ಕಂಡು ಬಂದರೂ ಆತಂಕ ಇದ್ದೆ ಇದೆ. ಮತ್ತೂಂದೆಡೆ ಬೆಳೆಗೂ ರೋಗ ಭೀತಿಯೂ ಇದೆ.

ಸಸಿಯೂ ಸಿಗುತ್ತಿಲ್ಲಾ; ಹವಮಾನ ವೈಪರೀತ್ಯದಿಂದಾಗಿ ನಷ್ಟವಾಗಿರುವ ತಂಬಾಕು ಬೆಳೆಯನ್ನು ಮತ್ತೆ ನಾಟಿ ಮಾಡಲು ಸಸಿಯು ಸಿಗುತ್ತಿಲ್ಲಾ, ಅತೀ ಮಳೆಗೆ ಸಸಿ ಮಡಿಗಳಿಗೂ ಹಾನಿಯಾಗಿದೆ. ಈಗ ಮತ್ತೆ ಸಸಿ ಬೆಳೆಸಿ ಮತ್ತೆ ನಾಟಿ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಶೇ.40-50ರಷ್ಟು ಬೆಳೆ ಉತ್ಪಾದನಾ ಪ್ರಮಾಣವೇ ಸಾಕಷ್ಟು ಕಡಿಮೆಯಾಗುವ ಸಂಭವವಿದ್ದು, ಬೆಳೆಗಾರರಲ್ಲದೆ ಇದೀಗ ತಂಬಾಕು ಮಂಡಳಿ, ಖರೀದಿ ಕಂಪನಿಗಳಿಗೂ ಆತಂಕ ಎದುರಾಗಿದೆ. ಇರುವ ಬೆಳೆಯನ್ನು ಸಂರಕ್ಷಿಸಿಕೊಳ್ಳಲು ಬೆಳೆಗಾರರು ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕಿದೆ.

ಗೊಬ್ಬರವೂ ನೀರು ಪಾಲು: ಕೆಲವು ದಿನಗಳ ಹಿಂದೆ ತಂಬಾಕು ಮಂಡಳಿ ಗೊಬ್ಬರ ವಿತರಣೆ ಮಾಡಿತ್ತು. ಸಸಿ ಮಡಿಗೆ ಹಾಕಿದ್ದ ರೈತರು ಮಳೆಯಿಂದಾಗಿ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ಮತ್ತೆ ಸಾಲ ಮಾಡಿ ಗೊಬ್ಬರ ಖರೀದಿಸುವಂತಾಗಿದೆ.

ಅಂತರ ಬೇಸಾಯ-ಗೊಬ್ಬರ ನಿರ್ವಹಣೆ ಮಾಡಿ; ಹವಾಮಾನ ವೈಪರೀತ್ಯದಿಂದ ತಂಬಾಕು ಬೆಳೆಗೆ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಹುಣಸೂರು ತಂಬಾಕು ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ವಿಜ್ಞಾನಿ ಡಾ.ರಾಮಕೃಷ್ಣನ್‌, ಹಿರಿಯ ವಿಜ್ಞಾನಿ ಮಹದೇವಸ್ವಾಮಿ ಉಪಯುಕ್ತ ಮಾಹಿತಿ ನೀಡಿದ್ದು, ಜಮೀನುಗಳಲ್ಲಿ ಹೆಚ್ಚು ನೀರು ನಿಂತಿರುವುದರಿಂದ ಹೊರ ಹೋಗಲು ಕ್ರಮವಹಿಸಬೇಕು.ಜೊತೆಗೆ ಮೊದಲ ಹಂತದಲ್ಲಿ ರಸಗೊಬ್ಬರ ನೀಡದಿದ್ದಲ್ಲಿ ಗುಳಿ ಹೊಡೆದು ತಕ್ಷಣವೇ ನೀಡಬೇಕು.

Advertisement

ಮೊದಲು ನೀಡಿದ್ದ ಗೊಬ್ಬರ ನೀರಿನೊಂದಿಗೆ ಕರಗಿ ಪೋಲಾಗಿದ್ದರೆ, ಮತ್ತೆ ಎಕರೆಗೆ ಸಾರಜನಕ, ರಂಜಕದ ಅಂಶಗಳುಳ್ಳ ಒಂದು ಮೂಟೆ 20;20;13 ಗೊಬ್ಬರವನ್ನು ತಕ್ಷಣವೇ ನೀಡಬೇಕು. ಇದು ಸಾಧ್ಯವಾಗದಿದ್ದಲ್ಲಿ ಎಕರೆಗೆ ಒಂದು ಪ್ಯಾಕೆಟ್‌ ನೀರಿನಲ್ಲಿ ಕರಗುವ ಕ್ಯಾಲ್ಸಿಯಂ ನೈಟ್ರೇಟ್‌ ದ್ರಾವಣ ಮಾಡಿಕೊಂಡು ಒಂದು ಕ್ಯಾನಿಗೆ 100 ಗ್ರಾಂ.ನಂತೆ ಬೆರಸಿ ನಿಧಾನವಾಗಿ ಸಿಂಪರಣೆ ಮಾಡುವುದು. ಮೊದಲನೆ ಗೊಬ್ಬರ ನಿರ್ವಹಣೆ ಮಾಡಿದ್ದಲ್ಲಿ ತಕ್ಷಣ ಎರಡನೇ ಕಂತಾದ ಎಕರೆಗೆ 60 ಕೆ.ಜಿ.ಅಮೋನಿಯಂ ಸಲ್ಪೇಟ್‌, 50ಕೆ.ಜಿ. ಎಸ್‌ಒಪಿ ಗೊಬ್ಬರ ನೀಡಬೇಕು. ಮಣ್ಣಿನ ತೇವಾಂಶ ಕಡಿಮೆಯಾಗುತ್ತಿದ್ದಂತೆ ಕಡ್ಡಾಯವಾಗಿ ಅಂತರ ಬೇಸಾಯ ಮಾಡಿ ಮಣ್ಣನ್ನು ಸಡಿಲಗೊಳಿಸಿ ಬೇರಿಗೆ ಗಾಳಿ ಹೋಗುವಂತೆ ಮಾಡಬೇಕು.

ಸೊರಗು ರೋಗಕ್ಕೆ ಕೋಸೈಡ್‌: ಮೇ ಮಾಹೆಯ ಕೇವಲ ಹತ್ತು ದಿನದಲ್ಲಿ 320 ಮಿ.ಮೀ. ಮಳೆಯಾಗಿದ್ದು, ಅಪಾರ ಪ್ರಮಾಣದಲ್ಲಿ ತಂಬಾಕು ಬೆಳೆ ನಾಶವಾಗಿದೆ. ಬೇರು ಉಸಿರಾಡುವಂತೆ ಅಂತರ ಬೇಸಾಯ ಮಾಡಬೇಕು. ಸಮರ್ಪಕ ಗೊಬ್ಬರ ನಿರ್ವಹಣೆ ಮಾಡಬೇಕು. ಅನಾವಶ್ಯಕವಾಗಿ ಕ್ರಿಮಿನಾಶಕ ಸಿಂಪಡಿಸಬಾರದು.

ಅತಿಯಾದ ಮಳೆಯಿಂದ ತಂಬಾಕು ಬೆಳೆ ಸಾಕಷ್ಟು ಹಾನಿಯಾಗಿದೆ. ಮತ್ತೆ ನಾಟಿ ಮಾಡಲು ಸಸಿ ಸಹ ಸಿಗುತ್ತಿಲ್ಲ, ಸಂಕಷ್ಟಕ್ಕೆ ಸಿಲುಕಿದ್ದೇವೆ. ರೋಗ ಭೀತಿ ಬೇರೆ, ರಸ ಗೊಬ್ಬರ ಬೆಲೆ ಗಗನಕ್ಕೇರಿದೆ. ಉತ್ಪಾದನಾ ವೆಚ್ಚವು ದುಬಾರಿಯಾಗಿದೆ. ವಾಣಿಜ್ಯ ಬೆಳೆ ಎಂದು ಪರಿಹಾರವು ಸಿಗುತ್ತಿಲ್ಲ, ತಂಬಾಕಿನಿಂದಲೇ ಕೇಂದ್ರ ಸರಕಾರಕ್ಕೆ ಕೋಟ್ಯಂತರ ರೂ. ಆದಾಯ ಬರುತ್ತಿದ್ದರೂ ಪರಿಹಾರ ನೀಡುತ್ತಿಲ್ಲ. ಈಗಲಾದರೂ ಜನಪ್ರತಿನಿಧಿಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಪರಿಹಾರ ಕೊಡಿಸಲಿ.
●ಸಿದ್ದಯ್ಯ, ರೈತ ತಿಪ್ಪಲಾಪುರ

ಅಲ್ಲಲ್ಲಿ ಗಿಡಗಳಿಗೆ ಸೊರಗು ಅಥವಾ ಕಪ್ಪ ಕಾಂಡ ರೋಗ ಕಂಡುಬಂದಲ್ಲಿ ಕ್ಯಾಲ್ಸಿಯಂ ನೈಟ್ರೇಟ್‌ ಜೊತೆಗೆ ಕೋಸೈಡ್‌ ಔಷಧಿಯನ್ನು ಒಂದು ಕ್ಯಾನಿಗೆ 20-30 ಗ್ರಾಂ ಬೆರೆಸಿ ಸಿಂಪಡಿಸಬೇಕು ಹಾಗೂ ಲೀಟರ್‌ಗೆ 2 ಗ್ರಾಂನಂತೆ ಬೇರಿನ ಜಾಗಕ್ಕೆ 100ಮಿ.ಲೀ. ನಂತೆ ಬೇರಿನ ಜಾಗಕ್ಕೆ ಸುರಿಯಬೇಕು. ಸಿಟಿಆರ್‌ಐ ಶಿಫಾರಸು ಮಾಡಿದ ಉಪಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕೇಂದ್ರವನ್ನು ಸಂಪರ್ಕಿಸಬೇಕು.
●ಡಾ.ರಾಮಕೃಷ್ಣನ್‌, ಮುಖ್ಯಸ್ಥರು,
ಸಿಟಿಆರ್‌ಐ, ಹುಣಸೂರು

*ಸಂಪತ್‌ ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next