ಹುಣಸೂರು: ತಂಬಾಕು ಬೆಳೆಗೆ ದೇಸೀಯ ನ್ಯೂಟ್ರಿಫೀಡ್ ಪೊಟ್ಯಾಷ್ ರಸಗೊಬ್ಬರ ಬಳಕೆಯಿಂದ ಗುಣಮಟ್ಟ ವೃದ್ಧಿ ಜೊತೆಗೆ ಹಣ ಉಳಿತಾಯವಾಗಲಿದೆ ಎಂದು ತಂಬಾಕು ಮಂಡಳಿ ಸದಸ್ಯ ಕಿರಣ್‌ಕುಮಾರ್ ಮನವಿ ಮಾಡಿದರು. ತಾಲೂಕಿನ ಹೊಸಕೋಟೆಕೊಪ್ಪಲಿನಲ್ಲಿ ಟ್ರಾನ್ಸ್‌ವಲ್ಡ್ ಫರ್ಟಿಕೆಮ್ ಕಂಪನಿ, ತಂಬಾಕು ಸಂಶೋಧನಾ ಕೇಂದ್ರ, ತಂಬಾಕು ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತಂಬಾಕು ಬೆಳೆಯ ಗುಣಮಟ್ಟದ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುವ ಪೊಟ್ಯಾಷ್‌ನ್ನು ಕಳೆದ 40 ವರ್ಷಗಳಿಂದ ಜರ್ಮನ್ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಮಹಾರಾಷ್ಟ್ರದ ಪುಣೆಯಲ್ಲಿ ಟ್ರಾನ್ಸ್‌ವಲ್ಡ್ ಫರ್ಟಿಕೆಮ್ ಸ್ವದೇಶಿ ಕಂಪನಿ ನ್ಯೂಟ್ರಿಫೀಡ್ ಪೊಟ್ಯಾಷನ್ನು ಕಳೆದ ನಾಲ್ಕು ವರ್ಷಗಳಿಂದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಉತ್ಪಾದಿಸುತ್ತಿದೆ.
ಹುಣಸೂರಿನ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ ಪರೀಕ್ಷೆಗೊಳಪಡಿಸಿ, ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ 33 ಟನ್ ಟ್ರಾನ್ಸ್‌ವಲ್ಡ್ ಪೊಟ್ಯಾಷ್ ತರಿಸಿಕೊಂಡು ತಂಬಾಕು ಬೆಳೆಗಾರರಿಗೆ ವಿತರಿಸಿದ್ದು, ಉತ್ತಮ ಫಲಿತಾಂಶ ಸಿಕ್ಕಿದೆ ಎಂದರು.
35 ಕೋಟಿ ಉಳಿತಾಯ: ಐಪಿಎಲ್ ಕಂಪನಿಯ ಗೊಬ್ಬರ 50 ಕೆಜಿಗೆ 2,662 ರೂ. ಇತ್ತು. ಇದೀಗ 2,150 ರೂ.ಗಳಿಗೆ ಟ್ರಾನ್ಸ್‌ವಲ್ಡ್ ಪೊಟ್ಯಾಷ್ ಸಿಗುತ್ತಿದೆ. ಅಲ್ಲದೆ ಮಾರುಕಟ್ಟೆ ಪೈಪೋಟಿ ಹಿನ್ನೆಲೆಯಲ್ಲಿ ಇತರೆ ಗೊಬ್ಬರ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಪ್ರತಿ ಬ್ಯಾಗ್‌ಗೆ 90 ರೂ ಕಡಿಮೆಯಾಗಲಿದೆ. ಇದರಿಂದ ಪ್ರತಿ ಸಿಂಗಲ್ ಬ್ಯಾರನ್‌ಗೆ ಕನಿಷ್ಟ 5,600 ರೂ. ಗೊಬ್ಬರದ ಹೊರೆ ಕಡಿಮೆಯಾಗಲಿದೆ. ಒಟ್ಟಾರೆ ವಾರ್ಷಿಕ 35 ಕೋಟಿ ರೂ.ಗಳಿಗೂ ಹೆಚ್ಚು ಹಣ ಉಳಿತಾಯವಾಗುತ್ತಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ರತ್ನಸಾಗರ್, ಸಿಟಿಆರ್‌ಐ ಮುಖ್ಯಸ್ಥ ಡಾ.ರಾಮಕೃಷ್ಣನ್, ವಿಜ್ಞಾನಿ ಡಾ.ಮಹದೇವಸ್ವಾಮಿ, ಕಟ್ಟೆಮಳಲವಾಡಿ ಹರಾಜು ಅಧೀಕ್ಷಕ ಪರುಷೋತ್ತಮ ರಾಜೇ ಅರಸ್, ರೈತ ಸಮಿತಿ ಸದಸ್ಯ ತಟ್ಟೆಕೆರೆ ಶ್ರೀನಿವಾಸ್, ಟ್ರಾನ್ಸ್‌ವಲ್ಡ್ ಪೊಟ್ಯಾಷ್ ಕಂಪನಿ ಉಪಾಧ್ಯಕ್ಷ ಯೋಗೇಶ್‌ಚಂದ್ರ, ಪ್ರತಿನಿಧಿಗಳಾದ ಮನ್ಸೂರ್, ಬಾಲಚಂದ್ರನ್, ತಂಬಾಕು ಬೆಳೆಗಾರ ಮರೂರು ಚಂದ್ರಶೇಖರ್, ತಂಬಾಕು ಬೆಳೆಗಾರರು ಭಾಗವಹಿಸಿದ್ದರು.