Advertisement

ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಇಳಿಮುಖ

06:00 AM Jan 12, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಿರಂತರ ಜಾಗೃತಿ ಫ‌ಲವಾಗಿ ತಂಬಾಕು ಉತ್ಪನ್ನಗಳ ಬಳಕೆ ಗಣನೀಯವಾಗಿ ಇಳಿಮುಖವಾಗಿದ್ದು, ಆರು ವರ್ಷಗಳಲ್ಲಿ ತಂಬಾಕು ಸೇವನೆ ಮಾಡುವವರ ಪ್ರಮಾಣ ಶೇ.5 ರಿಂದ 6ರಷ್ಟು ಕಡಿಮೆಯಾಗಿದೆ.

Advertisement

ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ತಂಬಾಕು ಉತ್ಪನ್ನಗಳ ಬಳಕೆ ಇಳಿಮುಖವಾಗಿರುವುದು ವಿಶೇಷ. ಗ್ಲೋಬಲ್‌ ಅಡಲ್ಪ್ ಟೊಬ್ಯಾಕೋ 2016-17ರ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ. 2009-10 ರಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಶೇ.28.2 ರಷ್ಟಿದ್ದು 2016-17 ಕ್ಕೆ ಶೇ.22.8 ರಷ್ಟು ಇಳಿಮುಖವಾಗಿದೆ.

ವಯಸ್ಕ ಧೂಮಪಾನಿಗಳ ಸಂಖ್ಯೆ ಶೇ.11.9ರಿಂದ 8.8 ಕ್ಕೆ ಇಳಿದಿದ್ದರೆ, ಜಗಿಯುವ ತಂಬಾಕು ಸೇವನೆ ಮಾಡುವವರ ಸಂಖ್ಯೆ ಶೇ.19.4 ರಿಂದ ಶೇ.16.3 ಕ್ಕೆ ಇಳಿದಿದೆ. 15 ರಿಂದ 17 ವಯೋಮಾನದ ಪ್ರೌಢರಲ್ಲಿ ತಂಬಾಕು ಬಳಕೆ ಪ್ರಮಾಣ ಗಣನೀಯ ವಾಗಿ ಇಳಿದಿದ್ದು, 2009-10 ರಲ್ಲಿ ಶೇ.6.8 ರಷ್ಟಿ ದ್ದದ್ದು, ಪ್ರಮಾಣ 2016-17 ಕ್ಕೆ ಶೇ.3.7 ಕ್ಕೆ ಇಳಿದಿದೆ.

ಎಲೆ ಅಡಿಕೆ ಜತೆಗೆ ತಂಬಾಕು ಸೇವನೆ ಮಾಡುವುದು, ಬೀಡಿ ಮತ್ತು ಗುಟ್ಕಾ ಸೇವನೆ ಮಾಡುವುದು ಪ್ರಮುಖ ಮೂರು ತಂಬಾಕು ಸೇವನೆ ವಿಧಾನಗಳಾಗಿದೆ. ಶೇ.9.4 ರಷ್ಟು ವಯಸ್ಕರು ಎಲೆ ಅಡಿಕೆ ಜತೆಗೆ ತಂಬಾಕು ಸೇವನೆ ಮಾಡಿದರೆ ಶೇ.5.9 ರಷ್ಟು ಜನರು ಬೀಡಿ ಸೇದುವುದು ಹಾಗೂ ಗುಟ್ಕಾ ಸೇವನೆ ಮಾಡುತ್ತಿದ್ದಾರೆ.

ವಿಧಾನಸಭೆ ಉಪಾಧ್ಯಕ್ಷ ಎನ್‌.ಎಚ್‌. ಶಿವಶಂಕರರೆಡ್ಡಿ ಗುರುವಾರ ಸಮೀಕ್ಷಾ ವರದಿ ಬಿಡುಗಡೆಗೊಳಿಸಿ, ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ  ಬಳಕೆ ಪ್ರಮಾಣ ಇಳಿಮುಖವಾಗಿರುವುದು ಸಂತಸದ ವಿಚಾರ. ಇನ್ನೂ ಕಡಿತಗೊಳಿಸಲು ಜಾಗೃತಿ ಅಗತ್ಯ ಎಂದರು. ರಾಜ್ಯದಲ್ಲಿ ಸೆಕೆಂಡ್‌ ಹ್ಯಾಂಡ್‌ ಸ್ಮೋಕ್‌ನಿಂದ ಬಳಲುತ್ತಿರುವ ಸಂಖೆಯಲ್ಲೂ ಕಡಿಮೆಯಾಗಿದೆ. ಆ ಪ್ರಮಾಣ ಶೇ.37.2 ರಿಂದ ಶೇ.23.9 ಕ್ಕೆ ಇಳಿದಿದೆ ಎಂದು ತಿಳಿಸಿದರು.

Advertisement

ಸಮೀಕ್ಷಾ ವರದಿ ಪ್ರಕಾರ ಪ್ರತಿ ನಾಲ್ಕು ಮಂದಿಯಲ್ಲಿ ಒಬ್ಬ ಮನೆಯಲ್ಲಿ ಅಥವಾ

ಕಚೇರಿಯಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಪರೋಕ್ಷ ಧೂಮಪಾನಕ್ಕೆ ಗುರಿಯಾಗುತ್ತಿದ್ದಾನೆಂದು ತಿಳಿದು ಬಂದಿದೆ. ಇದಕ್ಕೆ ಕಠಿಣಕ್ರಮ ಅಗತ್ಯ ಎಂದರು. ರಾಜ್ಯದಲ್ಲಿ ಪ್ರತಿ ದಿನ 20 ಜನರಂತೆ ವರ್ಷಕ್ಕೆ 7200 ಜನ ತಂಬಾಕಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದರು.

ತ್ಯಜಿಸುವ ನಿರ್ಧಾರ: ಕರ್ನಾಟಕದಲ್ಲಿ ಶೇ.65.7ರಷ್ಟು ಧೂಮಪಾನಿಗಳು ಮತ್ತು ಶೇ.48.2 ರಷ್ಟು ಜನರು ಜಗಿಯುವ ತಂಬಾಕು ಸೇವನೆ ತ್ಯಜಿಸಲು ನಿರ್ಧರಿಸಿದ್ದಾರೆ. ಬೀಡಿ ಹಾಗೂ ಸಿಗರೇಟ್‌ ಪ್ಯಾಕ್‌ಗಳ ಎಲೆ ಚಿತ್ರಸಹಿತ ಎಚ್ಚರಿಕೆ ಸಂದೇಶ ನೋಡಿ ಶೇ.73 ರಷ್ಟು ಧೂಮಪಾನಿಗಳು ಧೂಮಪಾನ ನಿಲ್ಲಿಸಬೇಕು ಎಂದು ತೀರ್ಮಾನಿಸಿರುವುದು ವಿಶೇಷ. ಶೇ.73.8 ರಷ್ಟು ಸಿಗರೇಟ್‌, ಶೇ.63.7 ರಷ್ಟು ಬೀಡಿ ಸೇವನೆ ಮಾಡುವವರು, ಶೇ.47.4 ರಷ್ಟು ಜಗಿಯುವ ತಂಬಾಕು ಸೇವಿಸುವವರು ಎಚ್ಚರಿಕೆ ಸಂದೇಶ ನೋಡಿ ತ್ಯಜಿಸಿದ್ದಾರೆ. ಶೇ.50 ರಷ್ಟು ಜನ ವೈದ್ಯರ ಸಲಹೆ ಮೇರೆಗೆ ತಂಬಾಕು ಸೇವನೆ ಬಿಟ್ಟಿದ್ದಾರೆ.

ಮಹಿಳೆಯರೂ ಇದ್ದಾರೆ: ಶೇ.16.8ರಷ್ಟು ಪುರುಷರು, ಶೇ.0.7ರಷ್ಟು ಮಹಿಳೆಯರು,ಶೇ.8.8ರಷ್ಟು ಎಲ್ಲ ವಯಸ್ಕರು ಧೂಮಪಾನಿಗಳು.ಶೇ.22.2 ಪುರುಷರು, ಶೇ.10.3 ಮಹಿಳೆಯರು, ಶೇ.16.3 ರಷ್ಟು ವಯಸ್ಕರು ಜಗಿಯುವ ತಂಬಾಕು ಸೇವನೆ ಮಾಡುವವರು.

ಸಮೀಕ್ಷೆ ಮಾಡಿದ್ದು ಹೇಗೆ?
ಟಾಟಾ ಇನ್ಸ್‌ಟಿಟ್ಯೂಟ್‌ ಆಫ್ ಸೋಶಿಯಲ್‌ ಸೈನ್ಸಸ್‌, ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಜತೆಗೂಡಿ ಮನೆಗಳಿಗೆ ಭೇಟಿ ನೀಡಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರನ್ನು ವೈಯಕ್ತಿಕ ಸಂದರ್ಶನದ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗಿದೆ.

ದೇಶಾದ್ಯಂತ 2016ರ ಆಗಸ್ಟ್‌ನಿಂದ 2017ರ ಫೆಬ್ರವರಿ ಅವಧಿಯಲ್ಲಿ ಒಟ್ಟು 73,037 ಜನರನ್ನು ಸಂದರ್ಶನ ಮಾಡಲಾಗಿದ್ದು ಕರ್ನಾಟಕದಲ್ಲಿ 2016 ರ ಸೆಪ್ಟಂಬರ್‌ ಮತ್ತು ಆಕ್ಟೋಬರ್‌ ತಿಂಗಳಲ್ಲಿ 1311 ಪುರುಷರು ಮತ್ತು 1403 ಮಹಿಳೆಯರನ್ನು ಸಂದರ್ಶನಕ್ಕೆ ಒಳಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next