ಉಡುಪಿ: ಲಾಕ್‌ಡೌನ್ ಪರಿಣಾಮ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದ್ದರೂ, ಅವುಗಳು ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿರುವುದು ಕಂಡು ಬಂದಿದೆ. ಜಿಲ್ಲೆಯ ವಿವಿಧೆಡೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ಕಾನೂನು ಕಣ್ಣಿಗೆ ಮಣ್ಣೆರಚಲಾಗಿದೆ.
ಲಾಕ್‌ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ತಂಬಾಕು ಜಗಿಯುವುದನ್ನು, ಸಾರ್ವಜನಿಕವಾಗಿ ಉಗುಳುವುದನ್ನು ಹಾಗೂ ತಂಬಾಕು, ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದನ್ನು ಸರಕಾರ ನಿಷೇಧಿಸಿತ್ತು. ಸಾರ್ವಜನಿಕವಾಗಿ ಉಗುಳುವುದೂ ಅಪಾಯಕಾರಿ ಎಂಬ ಕಾರಣಕ್ಕೆ ನಿಷೇಧಿಸಲಾಗಿತ್ತು. ಲಾಕ್‌ಡೌನ್ ಸಡಿಲಿಕೆಯ ಸಂದರ್ಭ ಇದನ್ನೆ ದುರ್ಲಾಭ ಪಡಕೊಂಡು ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಗೆ ದುಪ್ಪಟ್ಟು ದರವಿದೆ.
ಗುಟ್ಕಾ ನಿಷೇಧವಿದ್ದರೂ ಪಾನ್ ಮಸಾಲಾ ಜತೆ ತಂಬಾಕು ಮಾರಾಟ ಮಾಡುವುದು ಮುಂದುವರಿದಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳ ಪ್ರಯತ್ನ ಕೂಡ ವಿಫಲಗೊಂಡಿದೆ. ಉದಾಹರಣೆಗೆ ಮಧು ತಂಬಾಕು ಪ್ಯಾಕೆಟ್ ಹಿಂದೆ ಐದಾರು ರೂ. ಇದ್ದರೆ ಈಗ 15, 20, 30 ರೂ.ಗಳಿಗೆ ಮಾರಾಟವಾಗುತ್ತಿದೆ. ಗುಟ್ಕಾ ಉತ್ಪನ್ನ ಮಾರಾಟ ಮಾಡುವ ಕೃತ್ಯಗಳಲ್ಲಿ ತೊಡಗಿರುವವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ನಿಷೇಧಿತ ಪಟ್ಟಿಯಲ್ಲಿರುವ ತಂಬಾಕು ಉತ್ಪನ್ನಗಳು ನಗರದ ವಿವಿಧೆಡೆ ಅಡ್ಡದಾರಿಯಲ್ಲಿ ಮಾರಾಟವಾಗುತ್ತಿವೆ.
ಎಂಆರ್‌ಪಿಗಿಂತಲೂ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದರೂ ಏನೂ ಕ್ರಮ ಜರುಗುತ್ತಿಲ್ಲ. ನಿರ್ದಿಷ್ಟವಾಗಿ ದೂರು ಬಂದರೆ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳುತ್ತಾರೆ. ದೂರು ಕೊಡಲು ಯಾವ ನಂಬರಿಗೆ ಕರೆ ಮಾಡಬೇಕೆನ್ನುವುದೂ ತಿಳಿಸಿಲ್ಲ ಎನ್ನುತ್ತಾರೆ ನಾಗರಿಕರೋರ್ವರು.
ವಿಚಾರಣೆ ನಡೆಸುತ್ತೇವೆ
ನಗರ ಸಭೆ ವ್ಯಾಪ್ತಿಯಲ್ಲಿ ದರ ಹೆಚ್ಚಳಗೊಳಿಸಿ ತಂಬಾಕು ಉತ್ಪನ್ನ ಮಾಡುವ ಬಗ್ಗೆ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ. ದೂರುಗಳು ಬಂದಲ್ಲಿ ಅಂತಹ ಕೃತ್ಯ ನಡೆಸಿದವರ ಮೇಲೆ ಶಿಸ್ತು ಕ್ರಮ ಜರಗಿಸುತ್ತೇವೆ. ದರ ಹೆಚ್ಚಳಗೊಳಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದ ಕಾರಣ ವಿಚಾರಣೆ ನಡೆಸುತ್ತೇವೆ.
-ಕರುಣಾಕರ, ಆರೋಗ್ಯ ನಿರೀಕ್ಷರು, ನಗರಸಭೆ, ಉಡುಪಿ