ಉಡುಪಿ: ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ 8 ಮಿಲಿಯನ್ ಜನರು ಸಾವೀಗೀಡಾಗುತ್ತಿದ್ದಾರೆ. ಸಾರ್ವಜನಿಕರು ಸೇವನೆ ಬಿಡುವ ದೃಢ ಸಂಕಲ್ಪ ಮಾಡುವ ಮೂಲಕ ಉಡುಪಿಯನ್ನು ತಂಬಾಕು ಮುಕ್ತ ಜಿಲ್ಲೆಯಾಗಿ ಪರಿವರ್ತಿಸು ಕಾರ್ಯದಲ್ಲಿ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ರಾಜ್ಯ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ ಜಿಲ್ಲೆಯನ್ನು ಕೋಟಾ³ 2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆ ಎನ್ನುವುದಾಗಿ ಘೋಷಿಸಲಾಗಿತ್ತು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೋಲಿಸ್, ಆರೋಗ್ಯ, ಶಿಕ್ಷಣ, ಅಬಕಾರಿ, ನಗರಸಭೆ ಹಾಗೂ ಕಂದಾಯ ಇಲಾಖೆಗಳನ್ನೊಳಗೊಂಡ “ತಂಬಾಕು ನಿಯಂತ್ರಣ ಕಮಿಟಿ’ ರಚಿಸಿದ್ದು, ಇಲ್ಲಿವರೆಗೆ ಸುಮಾರು 6284 ಪ್ರಕರಣದಲ್ಲಿ 8,79,995 ರೂ. ದಂಡ ಸಂಗ್ರಹಿಸಲಾಗಿದೆ. ಜತೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ :ಕೋವಿಡ್ ಸೆಂಟರ್ ನಲ್ಲಿ ಹೋಮ:ರೇಣುಕಾಚಾರ್ಯರಿಗೆ ನೊಟೀಸ್ ನೀಡಲು ಸೂಚಿಸಿದ ಜಿಲ್ಲಾಧಿಕಾರಿ
ದೇಶದಲ್ಲಿ ಪ್ರತಿದಿನ 3,500 ಸಾವು ತಂಬಾಕು ಉತ್ಪನ್ನಗಳ ಬಳಕೆಯಿಂದ ಸಂಭವಿಸುತ್ತದೆ. 15 ವರ್ಷಕ್ಕಿಂತ ಮೇಲ್ಪಟ್ಟ ಶೇ.28.6 ಜನರು ತಂಬಾಕು ಉತ್ಪನ್ನಗಳ ಬಳಕೆ ಮಾಡುತ್ತಾರೆ. 1.2 ಮಿಲಿಯನ್ ಜನರು ಪರೋಕ್ಷ ಧೂಮಪಾನಕ್ಕೆ ತುತ್ತಾಗುತ್ತಿದ್ದಾರೆ.
ಜಗತ್ತಿನಾದ್ಯಂತ ಪ್ರತಿನಿತ್ಯ 9 ಮಿ. ಜನರು ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ರಕ್ತನಾಳದ ಕಾಯಿಲೆಗಳು, ಮಧುಮೇಹ, ದೀರ್ಘಕಾಲದ ಶ್ವಾಶಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು, ಪಾರ್ಶ್ವ ವಾಯು, ಬಂಜೆತನ, ಕುರುಡುತನ, ಕ್ಷಯ ಮತ್ತು ಬಾಯಿ ಕ್ಯಾನ್ಸರ್ ಇತ್ಯಾದಿ ಅಪಾಯಕಾರಿ ಕಾಯಿಲೆಗೆ ತುತ್ತಾಗಿ ಮೃತಪಡುತ್ತಿದ್ದಾರೆ ಎಂದು ಹೆಳಿದರು.