ಮನೆಯಿಂದ ಕೆಲಸ ಮಾಡುವುದು ಸುಲಭವಲ್ಲ. ಮನೆಯಲ್ಲಿರುವ ಅಷ್ಟೂ ದಿನ, ತಿನ್ನುವ ಆಹಾರ, ಮಾಡುವ ಯೋಚನೆ, ಕಾಫಿ, ಸಿಗರೇಟು, ಕುರುಕಲು ತಿನ್ನುವ ಚಟಗಳ ಹೆಡೆಮುರಿ ಕಟ್ಟಬೇಕು. ಇಲ್ಲವಾದರೆ, ಆಫೀಸು ತೆರೆಯುವ ಹೊತ್ತಿಗೆ, ಆಸ್ಪತ್ರೆ ಸೇರಬೇಕಾಗುತ್ತದೆ. ಹೀಗಾಗಿ, ಲಾಕ್‌ಡೌನ್ ಅವಧಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುವ 6 ಸೂತ್ರಗಳ ಪಟ್ಟಿ ಇಲ್ಲಿದೆ…
Advertisement
ವಾತಾವರಣ ಸರಿ ಇರಲಿನೀವು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರೆ, ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಳ್ಳಬೇಕು. ಮಕ್ಕಳ ಗಲಾಟೆಯೋ, ಹೆಂಡತಿಯ ಕೂಗಾಟವೋ ಕಿವಿಗೆ ಬೀಳಬಾರದು. ಬಿದ್ದರೂ, ಅದನ್ನು ಮನಸ್ಸಿಗೆ ತೆಗೆದುಕೊಳ್ಳದಂಥ ಸಿದ್ಧ ಸ್ಥಿತಿ ನಿಮ್ಮದಾಗಿರಬೇಕು. ಪಕ್ಕದಲ್ಲಿ ಏನಾಗುತ್ತಿದೆ ಅಂತ ತಿಳಿಯದಷ್ಟು ತಲ್ಲೀನತೆಯನ್ನು, ವರ್ಕ್ ಫ್ರಂ ಹೋಮ್ ಬೇಡುತ್ತದೆ. ನಮ್ಮನೆಯವರೆಲ್ಲಾ ಸಹಕಾರ ಕೊಡ್ತಾರೆ ಅನ್ನೋರ ಸಂಖ್ಯೆ ಜಾಸ್ತಿ ಇರಲ್ಲ. ಇದ್ದರೂ, ಈ ರೀತಿ ತಿಂಗಳಾನುಗಟ್ಟಲೆ ಲಾಕ್‌ಡೌನ್ ಜಾರಿಯಾದರೆ, ಮನೆಯವರಿಗೂ ತಾಳ್ಮೆ ಉಳಿಯುವುದಿಲ್ಲ. ಹಾಗಾಗಿ, ಅಡುಗೆ, ಊಟ- ತಿಂಡಿಯ ವಿಚಾರದಲ್ಲಿ, ಇಂಥದೇ ಬೇಕು ಅನ್ನೋ ಆಸೆಯನ್ನು ಮೊದಲು
ನಿಗ್ರಹಿಸಬೇಕು.
ಆಫೀಸಿನಲ್ಲಿ ಇದ್ದಾಗ, ಗಂಟೆಗೋ, ಎರಡು ಗಂಟೆಗೋ ಒಮ್ಮೆ ಕಾಫಿ ಕುಡಿಯುತ್ತಿದ್ದಿರಿ, ಹೌದಾ? ಈಗ ಮನೆಯಲ್ಲಿ ಆ ರೀತಿ ಮಾಡಲು ಆಗಲ್ಲ. ಹೀಗಾಗಿ, ಟೀ, ಕಾಫಿ ಕುಡಿಯುವ ಚಟ, ಪದೇಪದೆ ಎದ್ದು ಹೋಗುವ ರೂಢಿಯನ್ನು ಬಿಡಬೇಕಾಗುತ್ತದೆ. ಟೀ ಹೆಚ್ಚಾದರೆ ಪಿತ್ತ ಏರುತ್ತದೆ. ಅತಿಯಾದ ಕಾಫಿ ಸೇವನೆಯಿಂದ ಉಷ್ಣ ಹೆಚ್ಚಾಗುತ್ತದೆ. ಆಫೀಸಲ್ಲಿ, ಸ್ವಲ್ಪ ಕಿರಿಕಿರಿ ಅನಿಸಿದರೂ, ಸಿಗರೇಟ್ ಲಾಂಜ್‌ಗೆ ಹೋಗಿ ಸೇದಿ ಬಂದುಬಿಡುತ್ತಿದ್ದಿರಿ, ಅಲ್ವೇ? ಮನೆಯಲ್ಲಿದ್ದಾಗ, ಹಾಗೆ ಮಾಡಲು ಆಗಲ್ಲ. ಸಿಗರೇಟು ಸೇದಲು ಹೊರಗೆ ಹೋಗುವ ಹಾಗಿಲ್ಲ. ಪರಿಣಾಮ, ಮನಸ್ಸು ಕೆದರಿ ಕೂರುತ್ತದೆ. ಆಗ ಪರ್ಯಾಯವಾಗಿ ಕಾಫಿ ಬೇಕು ಅನಿಸುತ್ತದೆ. ಮೊದಲ ವಾರ ನೀವು ಹೇಳಿದಂತೆ ಕೇಳುತ್ತಿದ್ದ ಹೆಂಡತಿಗೆ, ಎರಡನೇ ವಾರದಿಂದ ಕಾಫಿ ಮಾಡುವುದೇ ಕಿರಿಕಿರಿ ಅನ್ನಿಸಬಹುದು. ಹೀಗಾಗಿ, ಕುಡಿವ, ತಿನ್ನುವ ವಿಚಾರದಲ್ಲಿ ಮನಸ್ಸು ನಿಗ್ರಹಿಸಿಕೊಳ್ಳಬೇಕು. ಅಡುಗೆ ಮನೆ ಹತ್ತಿರ ಬೇಡ
ಮನೆಯಲ್ಲಿ ಕೆಲಸಕ್ಕೆ ಕೂರುವ ಸ್ಥಳ, ಯಾವುದೇ ಕಾರಣಕ್ಕೂ ಅಡುಗೆ ಮನೆಯ ಹತ್ತಿರ ಇರಬಾರದು. ಆದಷ್ಟು, ರೂಮಿನಲ್ಲೋ, ವರಾಂಡದಲ್ಲೋ ಇರಲಿ. ಏಕೆಂದರೆ, ಅಡುಗೆ ಮನೆಯಲ್ಲಿ ಒಗ್ಗರಣೆ ಹಾಕಲಿ, ಕಾಫಿ ಮಾಡಲಿ, ಅದರ ಪರಿಮಳ ನಿಮ್ಮನ್ನು ಸೆಳೆದು ಕೆಲಸ ತಡವಾಗಲು ಕಾರಣ ಆಗುತ್ತದೆ. ಹೀಗಾಗಿ, ಅಡುಗೆ ಮನೆಯಿಂದ ದೂರ ಇದ್ದರೆ ಬಹಳ ಒಳ್ಳೆಯದು. ಊಟ ತಿಂಡಿ ಮೇಲೆ ಹಿಡಿತ ಊಟ- ತಿಂಡಿಯಾಗಿ ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಅನ್ನೋದನ್ನು ಮೊದಲು ಪ್ಲಾನ್ ಮಾಡಿಕೊಳ್ಳಿ. ಮನೆ ಆಫೀಸಿನಂತಲ್ಲ. ಈ ಮೊದಲೆಲ್ಲಾ, ಮನೆಯಿಂದ ಆಫೀಸಿಗೆ ಹೋಗುವ, ಚೂರು ಬೋರಾದರೆ ಆಫೀಸಲ್ಲೇ ಅಡ್ಡಾಡುವ ಅವಕಾಶ ಇತ್ತು. ಈಗ ಮನೆಯಲ್ಲಿ ಹಾಗೆಲ್ಲಾ ಮಾಡಲು ಆಗಲ್ಲ. ಕೂತಲ್ಲೇ ಕೂತು ಕೆಲಸ ಮಾಡುವುದರಿಂದ, ತಿಂದ ಆಹಾರ ತಕ್ಷಣ ಜೀರ್ಣವಾಗುವುದಿಲ್ಲ. ಬೆಳಗ್ಗೆ ತಿಂಡಿ ತಿಂದು, ಕೆಲಸದ ಒತ್ತಡ ಅನ್ನುತ್ತಾ ಸಂಜೆ ಐದು ಗಂಟೆಗೆ ಊಟ ಮಾಡುವ, ರಾತ್ರಿ 11 ಗಂಟೆಗೆ ಮತ್ತೆ ಭೋಜನ ಮಾಡುವ ಕ್ರಮ ಸರಿಯಲ್ಲ. ಆಫೀಸಿನ ಊಟದ ಅವಧಿ ಹೇಗಿತ್ತೋ, ಇಲ್ಲೂ ಅದನ್ನು ಮುಂದುವರಿಸುವುದೇ ಸೂಕ್ತ. ಅಗತ್ಯಕ್ಕಿಂತ ಕಡಿಮೆ ತಿನ್ನಬೇಕು. ಸಂಜೆ ಸ್ನಾಕ್ಸ್ ತಿನ್ನುವಿರಾದರೆ, ರಾತ್ರಿ ಕಡಿಮೆ ಊಟ ಮಾಡಬೇಕು.
Related Articles
ಕೆಲಸದ ಒತ್ತಡ ಇದ್ದರೆ ಹಸಿವಾಗುವುದಿಲ್ಲ. ಆಗ ಊಟವನ್ನು ಮುಂದೂಡುವುದು ಸರಿಯಲ್ಲ. ನಿಮ್ಮ ಹೊಟ್ಟೆಯನ್ನು ಗ್ಯಾಸ್ಟ್ರಿಕ್‌ಗೆ ಲೀಸ್‌ಗೆ ಕೊಟ್ಟಂತಾಗುತ್ತದೆ. ಒಂದು ಸಲ ಹೀಗೆ ಮಾಡಿದರೆ, ನಿಮ್ಮ ಹೊಟ್ಟೆ ಹೇಳಿದಂತೆ ನೀವು ಕೇಳಬೇಕಾಗುತ್ತದೆ. ಅನಿಯಮಿತ ಊಟೋಪಚಾರದಿಂದ, ತಲೆ ನೋವು, ವಾಂತಿ, ಹೊಟ್ಟೆ ಉಬ್ಬರಿಸುವ ಸಂದರ್ಭ ಉಂಟು. ಹೀಗಾಗಿ, ಊಟ ತಿಂಡಿಯನ್ನು ಇಡೀ ದಿನ ತಿನ್ನುವಂತೆ ಮಾಡಿಕೊಳ್ಳಿ. ಅಂದರೆ, ಒಂದು ಬಾರಿಯ ಊಟವನ್ನು ಎರಡು, ಮೂರು ಬಾರಿ ಸ್ವಲ್ಪ ಸ್ವಲ್ಪ ತಿನ್ನುವಂತೆ ವಿಸ್ತರಿಸಿಕೊಳ್ಳಿ.
Advertisement
ಡಯಟ್ ಮಾಡಿ…ಡಯಟ್ ಮಾಡೋಕೆ, ಲಾಕ್‌ಡೌನ್ ಒಳ್ಳೆಯ ಸಮಯ. ಕರಿದ ಎಣ್ಣೆ ಪದಾರ್ಥಗಳಾದ, ನಿಪ್ಪಟ್ಟು, ಚಕ್ಕುಲಿ, ಕೋಡುಬಳೆ ಬೇಡ. ಐಸ್ ಕ್ರೀಂ, ಕೇಕ್, ಗೋಬಿ ಮಂಚೂರಿಯಂಥ
ತಿನಿಸು ಮೆಲ್ಲುವ ಸಮಯವೂ ಇದಲ್ಲ. ಕುಳಿತಿದ್ದೇ ಕೆಲಸ ಮಾಡುವ ಸಂದರ್ಭದಲ್ಲಿ, ಇವೆಲ್ಲಾ ಅಜೀರ್ಣವಾಗಿ, ಹೊಟ್ಟೆ ನೋವು, ಕೆರೆತದಂಥ ಸಮಸ್ಯೆಯನ್ನು ತಂದಿಡಬಹುದು. ಹಾಗಾಗಿ, ಆದಷ್ಟು ಹಸಿ ತರಕಾರಿ ಬಳಸಿ. ಪುದೀನಾ, ಸಬ್ಬಸಿಗೆ, ದಂಟು, ಪಾಲಕ್‌ನಂಥ ಸೊಪ್ಪಿನ ತೊವ್ವೆಯನ್ನೋ, ಸಾರನ್ನೋ ತಿನ್ನಿ. ದಿನವೂ ಮುದ್ದೆ ತಿನ್ನಿ. ಹಾಗೆಯೇ, ಅನ್ನವನ್ನು ಕಡಿಮೆ ತಿನ್ನಿ.
ಫೂ›ಟ್ ಸಲಾಡ್ ತಿನ್ನಿ. ಗಂಟೆಗೆ ಒಮ್ಮೆಯಾದರೂ ನೀರು ಕುಡಿವ ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದರೆ ಬಿಸಿನೀರು ಬಳಸಿ. ವಾರಕ್ಕೆ ಒಂದು ಅಥವಾ ಅರ್ಧ ದಿನ ಉಪವಾಸ ಮಾಡೋಕೆ ಆಗೋತ್ತಾ, ನೋಡಿ. ತಟ್ಟೆ ಸೈಜ್ ಕಡಿಮೆ ಮಾಡಿ
ಊಟ ಮಾಡುವಾಗ, ತಟ್ಟೆಯ ಗಾತ್ರವನ್ನು ಕಡಿಮೆ ಮಾಡಿಕೊಳ್ಳಿ. 9 ಇಂಚಿನ ತಟ್ಟೆಯಲ್ಲಿ ಹಣ್ಣುಗಳು, ಬಾದಾಮಿ, ಕಲ್ಲುಸಕ್ಕರೆ, ದ್ರಾಕ್ಷಿ, ಪಿಷ್ಟ, ಫೈಬರ್ ಇರುವ ತರಕಾರಿಗಳನ್ನು ಇಟ್ಟುಕೊಂಡು ತಿನ್ನಿ. ನೆನಪಿರಲಿ: ಲಾಕ್ ಡೌನ್‌ನ ಈ ಸಮಯದಲ್ಲಿ, ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ.