Advertisement

ಬಿಜೆಪಿ ಗೆಲ್ಲಿಸಲು ಕೈ, ತೆನೆ ಹೊಂದಾಣಿಕೆ

11:45 AM May 12, 2019 | Team Udayavani |

ಕೋಲಾರ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತವಾಗಿದ್ದು, ಮತ ಎಣಿಕೆ ನಂತರ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವೃದ್ಧಿಗೆ ಅಗತ್ಯ ಸಲಹೆ, ಸೂಚನೆ ನೀಡುವುದಾಗಿ ಕ್ಷೇತ್ರದ ಪ್ರಭಾರಿ ಪಾವಗಡ ಕೃಷ್ಣಾರೆಡ್ಡಿ ತಿಳಿಸಿದರು.

Advertisement

ನಗರದಲ್ಲಿ ಆಯೋಜಿಸಿದ್ದ ಕೋಲಾರ ಲೋಕಸಭೆ ಕ್ಷೇತ್ರದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂದು ಬಿಜೆಪಿಯ ಜತೆ ಕಾಂಗ್ರೆಸ್‌ ಜೆಡಿಎಸ್‌ ಮುಖಂಡರ ನಡುವೆ ಅಲಿಖೀತ ಹೊಂದಾಣಿಕೆ ಮಾಡಕೊಳ್ಳಲಾಗಿತ್ತು. ಚುನಾವಣೆ ಗೆಲ್ಲುವುದು ಬೇರೆ ವಿಷಯ. ಆದರೆ, ಚುನಾವಣೆ ಹೇಗೆ ನಡೆಸಬೇಕೋ ಆ ರೀತಿ ನಡೆಸಲು ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡರು.

ನ್ಯಾಯ ಸಿಕ್ಕಿಲ್ಲ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ ಎಂಬುದು ನನಗೂ ಗಮನಕ್ಕೆ ಬಂದಿದೆ. ಚುನಾವಣೆಗೆ 15 ದಿನಗಳ ಮುಂಚಿತವಾಗಿ ಪ್ರಭಾರ ವಹಿಸಿಕೊಂಡು ಕೆಲಸ ಮಾಡಿದ್ದೇನೆ. ಕೆಜಿಎಫ್‌ ಮತ್ತು ಬಂಗಾರಪೇಟೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ತಕ್ಕ ನ್ಯಾಯ ಸಿಕ್ಕರೂ ಉಳಿದ 6 ವಿಧಾನಸಭೆ ಕ್ಷೇತ್ರಗಳಲ್ಲಿ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.

ಅಭ್ಯರ್ಥಿ ಗೆಲ್ಲಿಸಲು ತ್ಯಾಗ: ಕಳೆದ 40 ವರ್ಷಗಳಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಕಾರ್ಯಕರ್ತರ ನೋವು ಅರ್ಥವಾಗುತ್ತದೆ. ಮಾಲೂರಿನಲ್ಲಿ ನನಗಾಗಿರುವ ನೋವನ್ನು ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ವೇದಿಕೆಯಲ್ಲಿ ಪ್ರಸ್ತಾಪಿಸಿ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ನಡುವೆ ಸ್ವಾಭಿಮಾನ ಬದಿಗಿಟ್ಟು ಬಿಜೆಪಿಯನ್ನು ಗೆಲ್ಲಿಸಲು ತ್ಯಾಗ ಮಾಡಿದ್ದೀರಿ. ಇಂತಹ ಪರಿಸ್ಥಿತಿ ಮುಂದೆ ಬರಬಾರದು ಎಂದು ಹೇಳಿದರು.

ಸಭೆಯಿಂದ ಅರ್ಧ ಎದ್ದುಹೋದ್ರು: ಅಭ್ಯರ್ಥಿ ಎಸ್‌.ಮುನಿಸ್ವಾಮಿ ಸಭೆ ಮಧ್ಯದಲ್ಲಿ ನಿರ್ಗಮಿಸಿದರೆ ಅವರ ಬೆನ್ನಹಿಂದೆಯೇ ಮಾಜಿ ಶಾಸಕ ಎಸ್‌.ಎನ್‌. ಕೃಷ್ಣಯ್ಯಶೆಟ್ಟಿ ತೆರಳುತ್ತಿದ್ದಂತೆಯೇ ಹಾಜರಿದ್ದ ಬಹುತೇಕ ಕಾರ್ಯಕರ್ತರು ತೆರಳಿದ್ದರಿಂದ ಸಭಾಂಗಣ ಬಹುತೇಕ ಖಾಲಿಯಾಗಿದ್ದರಿಂದ ಅಸಮಾಧಾನಗೊಂಡ ಪಾವಗಡ ಕೃಷ್ಣಾರೆಡ್ಡಿ ಪಕ್ಷದ ಸಭೆಗಳು ಈ ರೀತಿ ನಡೆಯಬಾರದು, ಯಾರು ಎಷ್ಟೇ ದೊಡ್ಡವರಾದರೂ, ಎಷ್ಟೇ ಮುಖ್ಯ ಕೆಲಸ ಇದ್ದರೂ ಸಭೆ ಮುಗಿಯುವವರೆಗೆ ಹೋಗಬಾರದು ಎಂದು ನುಡಿದರು.

Advertisement

ಪ್ರತ್ಯೇಕ ಸಭೆ ನಡೆಸಿ: ಮಾಲೂರಿನ ಮುಖಂಡ ಪ್ರಭಾಕರ್‌ ಮಾತನಾಡಿ, ಪಕ್ಷದ ಅಭ್ಯರ್ಥಿ ಎದುರು ಹಲವು ವಿಷಯಗಳನ್ನು ಹೇಳಬೇಕಿತ್ತು, ಅವರು ಬೇಗನೇ ನಿರ್ಗಮಿಸಿದ್ದಾರೆ. ಹೀಗಾಗಿ ನಮ್ಮ ನೋವು ಹೇಳಿಕೊಳ್ಳಲು ಮಾಲೂರಿನಲ್ಲಿ ಪ್ರತ್ಯೇಕವಾಗಿ ಸಮಾಲೋಚನಾ ಸಭೆ ನಡೆಸಬೇಕು ಎಂದು ಕ್ಷೇತ್ರದ ಪ್ರಭಾರಿಗಳನ್ನು ಒತ್ತಾಯಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಮಾತನಾಡಿ, ಚುನಾವಣೆಯಲ್ಲಿ ನನ್ನ ಗೆಲುವಿಗೆ ಹಗಲಿರುಳು ಪಕ್ಷಾತೀತವಾಗಿ ದುಡಿದ ಎಲ್ಲ ಕಾರ್ಯಕರ್ತರಿಗೆ ಚಿರಋಣಿ. ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂಬ ಮಾತಿಗೆ ಬದ್ಧನಾಗಿದ್ದೇನೆ ಎಂದರು.

ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಈಗ ಕಾಂಗ್ರೆಸ್‌ ಜೆಡಿಎಸ್‌ನವರು ಬಿಜೆಪಿ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಭ್ರಮೆ ಯಾರಿಗೂ ಬೇಡ. ಅವರವರ ಪಕ್ಷದ ಪರ ಅವರು ಕೆಲಸ ಮಾಡುತ್ತಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಕೂಡ ನಿಷ್ಠೆಯಿಂದ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು ಎಂದರು.

ಕಾರ್ಯಕರ್ತರಿಗೆ ಪಾಠ: ಇದಕ್ಕೂ ಮುನ್ನ ಮಾತನಾಡಿದ ಕಾರ್ಯಕರ್ತರು, ಈ ಚುನಾವಣೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ನೀತಿ ಪಾಠ. ಪಕ್ಷದಲ್ಲಿ ಜವಾಬ್ದಾರಿ ನಿರ್ವಹಿಸಿದವರನ್ನು ವಿಚಾರಿಸುವವರೇ ಇಲ್ಲ, ಬೂತ್‌ ಏಜೆಂಟ್ ಕೂಡ ಮಾಡಲಿಲ್ಲ, ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯೆಂದು ಪದಾಧಿಕಾರಿಗಳನ್ನೇ ನೇಮಿಸಬೇಡಿ, ಚುನಾವಣೆಗೆ ಅಭ್ಯರ್ಥಿ ನೀಡಿ, ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಕ್ಷದ ಕಾರ್ಯಕರ್ತರಿಗೆ ಕನಿಷ್ಠ ಗೌರವ ನೀಡುವ ಕೆಲಸ ನಾಯಕರಿಂದ ಆಗಲಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೇರೆ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಲಾಗಿದೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಕೆಲ ಕಾರ್ಯಕರ್ತರು ನೋವು ತೋಡಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ವೈ.ಸಂಪಂಗಿ, ಎ.ನಾಗರಾಜು, ಲೋಕಸಭಾ ಕ್ಷೇತ್ರದ ಸಂಚಾಲಕ ಕೃಷ್ಣಾರೆಡ್ಡಿ, ಎಸ್‌.ಎನ್‌. ಶ್ರೀರಾಮ್‌, ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ಮಾಜಿ ಅಧ್ಯಕ್ಷ ವೈ.ಸುರೇಂದ್ರಗೌಡ, ಪ್ರಧಾನ ಕಾರ್ಯದರ್ಶಿಗಳಾದ ಸಿ.ಡಿ. ರಾಮಚಂದ್ರ, ವಾಸುದೇವ್‌, ಪದಾಧಿಕಾರಿಗಳಾದ ವಿಜಯಕುಮಾರ್‌, ತಲಗುಂದ ನರಸಿಂಹರಾಜು, ಜಿಪಂ ಮಾಜಿ ಸದಸ್ಯ ಎಸ್‌.ಬಿ.ಮುನಿವೆಂಕಟಪ್ಪ, ಲಕ್ಷ್ಮಣಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಿವಕುಮಾರ್‌ ಇತರರಿದ್ದರು. ಚುನಾವಣಾ ಸಮಿತಿಯನ್ನು ಈ ವೇಳೆ ವಿಸರ್ಜಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next