ಹಿಂದೊಮ್ಮೆಯೂ ಕೆಲಸವಿಲ್ಲದ ಸಂದರ್ಭ ಸೃಷ್ಟಿಯಾಗಿತ್ತು. ಮನೆಯಲ್ಲೇ ಇದ್ದ ವ್ಯಕ್ತಿಯೊಬ್ಬ, ಒಂದಷ್ಟು ಹಣ ಮಾಡಲು ಯೋಚಿಸಿದ. ತಿಂಗಳ ಕೊನೆಯಲ್ಲಿ ಕೋಟಿ ರೂಪಾಯಿ ಮೊತ್ತದ ಲಾಟರಿ ಡ್ರಾ ಇದೆ ಎಂಬ ಸಂಗತಿಯೂ ಅವನಿಗೆ ಗೊತ್ತಾಯಿತು. ಆತ ತಡ ಮಾಡಲಿಲ್ಲ. ದೇವರ ಎದುರು ನಿಂತು – ದೇವರೇ, ನನಗೆ ಕೋಟಿ ರೂಪಾಯಿ ಲಾಟರಿ ಹೊಡೆಯುವಂತೆ ಮಾಡಿದರೆ, ನಿನಗೆ 10 ಲಕ್ಷವನ್ನು ಕಾಣಿಕೆಯಾಗಿ ಅರ್ಪಿಸುವೆ ಎಂದು ಹರಕೆ ಕಟ್ಟಿಕೊಂಡ. ಈ ವಿಷಯ ತಿಳಿದ ಅವನ ಹೆಂಡತಿ- ‘ಒಂದು ಕೋಟಿ ರೂಪಾಯಿ ಲಾಟರಿಯ ಮೊತ್ತದಲ್ಲಿ, ದೇವರಿಗೆ ಕೇವಲ 10 ಲಕ್ಷ ಕೊಡುವುದು ಸರಿಯಲ್ಲ, ಹೀಗೆ ಮಾಡಿದರೆ, ದೇವರ ಕೃಪೆಯೇ ಸಿಗದೇ ಹೋಗಬಹುದು. ಹಾಗಾಗಿ, ದೇವರಿಗೆ ಅರ್ಧ ಭಾಗ ಕಾಣಿಕೆಯಾಗಿ ಕೊಡೋಣ’ ಅಂದಳು. ಆನಂತರದಲ್ಲಿ, ಇಬ್ಬರೂ ಲೆಕ್ಕಾಚಾರ ಮಾಡಿ, ಈ ಕಷ್ಟದ ಸಮಯದಲ್ಲಿ,ಲಾಟರಿ 10 ಲಕ್ಷ ಸಿಕ್ಕರೆ ಸಾಕು, ಉಳಿದ ಹಣವನ್ನೆಲ್ಲ ದೇವರಿಗೇ ಕಾಣಿಕೆಯಾಗಿ ನೀಡೋಣವೆಂದು ನಿರ್ಧರಿಸಿದರು.
ಲಾಟರಿ ಹೊಡೆಯಲು ಇನ್ನೊಂದು ದಿನ ಬಾಕಿಯಿದೆ ಅನ್ನುವಾಗಲೇ ಪ್ರತ್ಯಕ್ಷವಾದ ದೇವರು- ಲಾಟರಿ ಟಿಕೆಟ್ ತಗೊಂಡು ಆಗಿದೆಯಾ? ಎಂದು ಕೇಳಿದ. ಈ ಭಕ್ತ, ಇನ್ನೂ ಇಲ್ಲ, ತಗೋಬೇಕು ಅನ್ನುತ್ತಾನೆ. ಆಗ ದೇವರು- ‘ಮೂರ್ಖ, ಲಾಟರಿ ಹೊಡೆಯಬೇಕು ಅಂದ್ರೆ ಮೊದಲೇ ಟಿಕೆಟ್ ತಗೋಬೇಕು ‘ ಎಂದು ಹೇಳಿ ಮಾಯವಾದನಂತೆ.
ಈ ಕಥೆಯನ್ನು ಈಗಿನ ಸಂದರ್ಭಕ್ಕೆ ಹೋಲಿಸಿಕೊಂಡು ನೋಡಿ: ಲಾಕ್ ಡೌನ್‌ನ ಅವಧಿ ಮುಗಿಯುವ ಮುನ್ನ ಒಂದಷ್ಟು ಕಾಸು ಮಾಡಬೇಕು ಅಂತ ಹಲವರು ಯೋಚಿಸುತ್ತಾ ಇದ್ದಾರೆ. ಆದರೆ, ಯಾರೊಬ್ಬರೂ ಹೊಸ ಕೆಲಸ ಮಾಡುವ, ಮನೆಯಲ್ಲಿದ್ದೇ ಸಂಪಾದಿಸುವ ಸಾಧ್ಯತೆಯ ಬಗ್ಗೆ ಯೋಚಿಸುತ್ತಲೇ ಇಲ್ಲ. ಇನ್ನು ಲಾಟರಿ ಹೊಡೆಯುವ ಸಾಧ್ಯತೆ ಎಲ್ಲಿದೆ?