Advertisement

ಯಲ್ಲಾಪುರ ಗದ್ದುಗೆ ಯಾರಿಗೆ?

10:59 AM Dec 13, 2019 | Lakshmi GovindaRaj |

ಹಚ್ಚ ಹಸಿರನ್ನು ಹೊದ್ದು ನಿಂತಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ತುಂಬೆಲ್ಲ ಇದೀಗ ಉಪ ಚುನಾವಣೆಯ ಪ್ರಚಾರದ ಗಾಡಿಗಳ ಧೂಳು ಧುಮ್ಮುಕ್ಕುತ್ತಿದೆ. ಕ್ಷೇತ್ರದ ತುಂಬಾ ರಿಂಗಣಿಸುತ್ತಿರುವ “ಕೈ’ ಮತ್ತು “ಕಮಲ’ ಪಕ್ಷದ ಚುನಾವಣಾ ಭಾಷಣಗಳು ಮೂರು ನದಿ, ಆರು ಹಳ್ಳ, ಎಂಟು ಸುಂದರ ಜಲಪಾತದ ಝರಿಯ ಸದ್ದನ್ನು ಮೀರಿಸುತ್ತಿದೆ.

Advertisement

“ಕೈ’ ಬಿಟ್ಟು ಕಮಲ ಹಿಡಿದ ಶಿವರಾಮ ಹೆಬ್ಬಾರ್‌ ಮತ್ತು ಕಾಂಗ್ರೆಸ್‌ನ ಜಿಲ್ಲಾ ಮುಖಂಡ ಭೀಮಣ್ಣ ನಾಯ್ಕ ಅವರುಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದು, ಜೆಡಿಎಸ್‌ ಇಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶವೇ ಹೆಚ್ಚಾಗಿದ್ದು, ಕಾಡಿನ ಮಧ್ಯೆ ಅಲ್ಲೊಂದು, ಇಲ್ಲೊಂದು ಮನೆಗಳಿರುವುದರಿಂದ ಮತದಾರರನ್ನು ತಲುಪುವುದು ಅಖಾಡದಲ್ಲಿನ ಎಲ್ಲಾ ಅಭ್ಯರ್ಥಿಗಳ ಬೆವರಿಳಿಯುವಂತೆ ಮಾಡಿದೆ.

ಕಳೆದ ಮೂರು ಚುನಾವಣೆಯಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದ ಶಿವರಾಮ ಹೆಬ್ಬಾರ್‌ ಮತ್ತು ವಿ.ಎಸ್‌.ಪಾಟೀಲ್‌ ಇದೀಗ ಒಂದೇ ಪಕ್ಷದಲ್ಲಿರುವುದು ಬಿಜೆಪಿಗೆ ಭೀಮ ಬಲ ಬಂದಂತಾಗಿದೆ. 2013ರ ಚುನಾವಣೆಯಲ್ಲಿ ಚಲಾವಣೆಗೊಂಡಿದ್ದ 1.20 ಲಕ್ಷ ಮತಗಳಲ್ಲಿ ಸಮನಾಗಿ ಅರ್ಧ ಬಿಜೆಪಿ ಮತ್ತು ಅರ್ಧ ಕಾಂಗ್ರೆಸ್‌ ಪಾಲಾಗಿದ್ದವು. ಕೇವಲ 1,400 ಮತಗಳ ಅಂತರದಲ್ಲಿ ಕೈ ಅಭ್ಯರ್ಥಿ ಹೆಬ್ಬಾರ್‌ ಗೆದ್ದಿದ್ದರು.

ಇದೀಗ ಈ ಇಷ್ಟು ಮತಗಳು ಒಂದೆಡೆಗೆ ಸೇರಲಿದ್ದು, ಈ ಪೈಕಿ ಶೇ.45ರಷ್ಟು ಮತಗಳು ಎರಡೂ ಪಕ್ಷಗಳಿಂದ ಖೋತಾ ಆದರೂ ತಮ್ಮ ಗೆಲುವು ನಿಶ್ಚಿತ ಎಂದು ಬಿಜೆಪಿ ಲೆಕ್ಕ ಹಾಕುತ್ತಿದೆ. ಇದಕ್ಕೆ, ಕಾಂಗ್ರೆಸ್‌ ಪ್ರತಿತಂತ್ರ ಹೆಣೆಯುತ್ತಿದೆ. ಬಿಜೆಪಿ ಒಳಗಿನ “ಬಿ’ ಟೀಮ್‌ ಮಾತ್ರ ಹೆಬ್ಬಾರ್‌ ಬೆಂಬಲಿಸಲು ಬಿಲ್‌ಕುಲ್‌ ಒಪ್ಪುತ್ತಿಲ್ಲ. ಇದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದರಿಂದಲೇ ಅವರು ವೈಯಕ್ತಿಕ ಸಂಬಂಧಗಳನ್ನೇ ದಾಳವಾಗಿ ಬಳಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಮಸಲತ್ತು, ಗಮ್ಮತ್ತು: ಕ್ಷೇತ್ರದಲ್ಲಿ ಮತದಾರರೇ ಮಾತನಾಡಿಕೊಳ್ಳುತ್ತಿರುವ ಒಂದು ಗಮ್ಮತ್ತಿನ ಸಂಗತಿ ಚುನಾವಣೆ ಫಲಿತಾಂಶವನ್ನು ಮತ್ತು ಊಹೆಗಳನ್ನು ತಲೆಕೆಳಗೆ ಮಾಡಿದರೂ ಅಚ್ಚರಿಯಿಲ್ಲ. ಕ್ಷೇತ್ರದಲ್ಲಿನ ಕಟ್ಟಾ ಬಿಜೆಪಿ ಬೆಂಬಲಿಗರು ಹೆಬ್ಬಾರ್‌ ಬಿಜೆಪಿಗೆ ಬಂದಿರುವುದಕ್ಕೆ ಒಳಗೊಳಗೆ ಅಸಮಾಧಾನಗೊಂಡಿ ದ್ದಾರೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ತಮಗೆ ಪರ್ಯಾಯವಾಗಿ ಇನ್ನೊಬ್ಬ ನಾಯಕನ ಬೆಳವಣಿಗೆಯನ್ನು ಸಹಿಸುವುದು ಕಮಲ ಪಕ್ಷದ ಮಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Advertisement

ಬಿಜೆಪಿ ಮತ್ತು ಸರ್ಕಾರದಲ್ಲಿರುವ ಕೆಲವು ಮುಖಂಡರು ಒಳಗಿಂದೊಳಗೆ ಹೆಬ್ಬಾರ್‌ ಅವರನ್ನು ಸೋಲಿಸಲು ಜಾತಿ ಅಸ್ತ್ರ ಬಳಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ.ಎಸ್‌.ಪಾಟೀಲ್‌ಗೆ ಈಗಲೂ ತಮ್ಮ ಮಗನನ್ನು ಕಾಂಗ್ರೆಸ್‌ನಿಂದ ಹೊರ ತರಲು ಆಗಿಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷಗಿರಿ ಪಡೆದುಕೊಂಡ ಪಾಟೀಲ ಸಾಹೇಬ್ರು, ಹೆಬ್ಬಾರ್‌ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರೂ, ಅವರ ಕಟ್ಟಾ ಬೆಂಬಲಿಗರು ಮಾತ್ರ ಒಳಗೊಳಗೆ ಕುದಿಯುತ್ತಲೇ ಇದ್ದಾರೆ.

ಅಷ್ಟೇ ಅಲ್ಲ, ಪಾಟೀಲರೇ ಪಕ್ಷೇತರವಾಗಿ ನಿಲ್ಲುವಂತೆ ಒತ್ತಡ ಹೇರಿದ್ದರು. ಆದರೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಚಾಣಾಕ್ಷ ನಡೆಯಿಂದ ಸದ್ಯಕ್ಕೆ ಕಮಲಕ್ಕಿದ್ದ ವಿಘ್ನಗಳು ದೂರವಾಗಿವೆ. ಕ್ಷೇತ್ರದಲ್ಲಿ 30 ಸಾವಿರದಷ್ಟಿರುವ ಲಿಂಗಾಯತರು ಯಡಿಯೂರಪ್ಪ ಅವರ ಮುಖ ನೋಡಿ ಮತ ಹಾಕುತ್ತೇವೆ ಎನ್ನುತ್ತಿದ್ದಾರೆ. ಇನ್ನು ಅಭಿವೃದ್ಧಿ ದೃಷ್ಟಿಯಿಂದ ನೋಡುವುದಾದರೆ ನದಿ, ಹಳ್ಳ, ಕೊಳ್ಳಗಳಿದ್ದರೂ ಕ್ಷೇತ್ರದ ಜನರಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲ. ಅಲ್ಲದೇ, ಹಲವು ಸಮಸ್ಯೆಗಳು ಕ್ಷೇತ್ರದಲ್ಲಿ ಕಣ್ಣಿಗೆ ರಾಚುತ್ತವೆ. ಇನ್ನು ಪ್ರವಾಸಿ ತಾಣಗಳಾದ ಮಾಗೋಡು, ಸಾತೊಡ್ಡಿ ಜಲಪಾತ ರಸ್ತೆಗಳು ಕಿತ್ತು ಹೋಗಿದ್ದು, ಸೂಕ್ತ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ ಮತದಾರರು.

ಕ್ಷೇತ್ರದ ಇತಿಹಾಸ‌: ಯಲ್ಲಾಪುರ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್‌ನ ಭದ್ರಕೋಟೆಯೇ ಆಗಿತ್ತು. ನಡುವೆ ಮತ್ತೆ ಜನತಾ ಪರಿಹಾರ ಇದನ್ನು ವಶಕ್ಕೆ ಪಡೆದುಕೊಂಡಿತ್ತು. 2008ರಲ್ಲಿ ನಡೆದ ಕ್ಷೇತ್ರ ಪುನರ್‌ ವಿಂಗಡನೆ ವೇಳೆ ಈ ಕ್ಷೇತ್ರದ ಸ್ವರೂಪವೇ ಬದಲಾಗಿ ಹೋಯಿತು. ಉತ್ತರ, ದಕ್ಷಿಣವಾಗಿ ಹಬ್ಬಿಕೊಂಡಿದ್ದ ಕ್ಷೇತ್ರ ಪೂರ್ವ, ಪಶ್ಚಿಮವಾಗಿ ವಿಭಾಗಗೊಂಡಿದ್ದರಿಂದ ಲಿಂಗಾಯತ ಪ್ರಾಬಲ್ಯವಿರುವ ಮುಂಡಗೋಡ, ಶಿರಸಿ ಕ್ಷೇತ್ರದಲ್ಲಿದ್ದ ಬನವಾಸಿ ಸೇರಿದಂತೆ ಸುತ್ತಲಿನ ಹಳ್ಳಿಗಳು ಈ ಕ್ಷೇತ್ರ ಸೇರಿಕೊಂಡವು. 2008ರಲ್ಲಿ ಬಿಜೆಪಿ ಗೆದ್ದರೆ, 2013 ಮತ್ತು 2018ರಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಇನ್ನೊಂದೆಡೆ, ಬಿಜೆಪಿಯಲ್ಲಿನ ಗುಂಪುಗಾರಿಕೆ, ಭಿನ್ನಮತದ ಲಾಭ ಪಡೆಯುವಲ್ಲಿ “ಕೈ’ ನಾಯಕರು ಅಷ್ಟಾಗಿ ಪ್ರಯತ್ನ ಮಾಡುತ್ತಿಲ್ಲ.

ಪ್ರಮುಖ ವಿಷಯ: ಅಭಿವೃದ್ಧಿ ಆಧರಿತ ಚುನಾವಣೆ ಎಂಬ ಭಾಷಣಗಳು ಕೇಳಿ ಬರುತ್ತಿದ್ದರೂ, ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ. ಇಲ್ಲಿ ಜನಮಾನಸದೊಂದಿಗೆ ವೈಯಕ್ತಿವಾಗಿ ಅಭ್ಯರ್ಥಿ ಗಳು ಇಟ್ಟುಕೊಂಡಿರುವ ಸಂಬಂಧಗಳು, ಜಾತಿ ಮತ್ತು ಪಕ್ಷದ ನೆಲೆಯಲ್ಲಿಯೇ ಮತಗಳ ಕ್ರೋಡೀಕರಣ ನಡೆಯುತ್ತಿದೆ. ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದಿರುವ ಹೆಬ್ಬಾರ್‌ ಅವರು, ತಾವು ಈ ಮುಂಚೆ ಕಾಂಗ್ರೆಸ್‌ನಲ್ಲಿದ್ದಾಗ ಮುಸ್ಲಿಂ ಸಮುದಾಯ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಇದರ ಭಾಗವಾಗಿ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಮುಸ್ಲಿಂ ಮುಖಂಡರನ್ನು ಕ್ಷೇತ್ರದಲ್ಲಿನ ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ನಿಲ್ಲಿಸಿದ್ದಾರೆ. ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಕೂಡ ಇದಕ್ಕೆ ಹಿಂದೆ ಬಿದ್ದಿಲ್ಲ. ಹೆಬ್ಬಾರ್‌ ವಿರುದ್ಧದ ಬಿಜೆಪಿ ಮತ್ತು ಹವ್ಯಕರ ಕೂಟಗಳನ್ನು ತೆರೆಮರೆಯಲ್ಲೇ ಒಂದುಗೂಡಿಸುತ್ತಿದ್ದಾರೆ.

ಮತದಾರರ ವಿವರ
ಒಟ್ಟು ಮತದಾರರು: 1,72,888
ಪುರುಷ ಮತದಾರರು: 87,780
ಮಹಿಳಾ ಮತದಾರರು: 84,507
ತೃತೀಯ ಲಿಂಗಿ ಮತದಾರರು: 1

ಜಾತಿವಾರು ಲೆಕ್ಕಾಚಾರ
ಹವ್ಯಕ ಬ್ರಾಹ್ಮಣರು: 37,000
ಲಿಂಗಾಯತ: 29,000
ಎಸ್‌ಸಿ, ಎಸ್‌ಟಿ: 28,000
ಮರಾಠಾ: 27,000
ಈಡಿಗ, ಸಿದ್ದಿ, ಕುಣಬಿ: 27,000
ನಾಮದಾರಿ: 20,000
ಮುಸ್ಲಿಮರು: 15,000
ಗೌಳಿ: 11,000
ಇತರರು: 8,000

* ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next