ಸಂಯುಕ್ತಾ ಹೊರನಾಡು ಬಹಳ ಖುಷಿಯಾಗಿದ್ದಾರೆ. ಅವರ ಕೊನೆಯ ಅಭಿನಯದ ಚಿತ್ರ ಎಂದರೆ ಅದು ಹೇಮಂತ್ ಹೆಗಡೆ ಆ ನಂತರ ಅವರು ಎಲ್ಲಿ ಮಾಯವಾದರು ಎನ್ನುವಷ್ಟರಲ್ಲೇ ಸಂಯುಕ್ತಾ ಮೂರು ಚಿತ್ರಗಳ ಮೂಲಕ ವಾಪಸ್ಸು ಬರುತ್ತಿದ್ದಾರೆ. ವಿಶೇಷವೆಂದರೆ, ಸಂಯುಕ್ತಾ ಅಭಿನಯದ ಮೂರು ಚಿತ್ರಗಳು ಜೂನ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ.
ಹೌದು, ಸಂಯುಕ್ತಾ ಹೊರನಾಡು ನಟಿಸಿರುವ ಮೂರು ಚಿತ್ರಗಳು ಜೂನ್ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಅಶ್ವಿನಿ ರಾಮ್‌ಪ್ರಸಾದ್ ನಿರ್ಮಾಣದ “ಸರ್ಕಾರಿ ಕೆಲಸ ದೇವರ ಕೆಲಸ’, ಟಿ.ಎನ್. ಸೀತಾರಾಂ ಅವರ ಕಾಫಿ ತೋಟ ಹಾಗೂ ರೋಹಿತ್ ಪದಕಿ ನಿರ್ದೇಶನದ ಮೊದಲ ಸಿನೆಮಾ ದಯವಿಟ್ಟು ಗಮನಿಸಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿರುವ ಚಿತ್ರಗಳು. ಸಂಯುಕ್ತಾ ಈ ಮೂರು ಸಿನೆಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಮೂರು ಚಿತ್ರಗಳಲ್ಲೂ ಮೂರು ವಿಭಿನ್ನ ಪಾತ್ರಗಳು ಸಿಕ್ಕಿರುವುದು. ಸರ್ಕಾರಿ ಕೆಲಸ ದೇವರ ಕೆಲಸದಲ್ಲಿ ಪತ್ರಕರ್ತೆಯಾಗಿ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ. ಇದು ಸಂಯುಕ್ತಾಗೆ ಹೊಸ ಬಗೆಯ ಪಾತ್ರವಂತೆ.
ಸರ್ಕಾರಿ ಕೆಲಸದ ಬಗ್ಗೆ ಹೇಳುವುದಾದರೆ, “ಇದೊಂದು ರೆಗ್ಯುಲರ್ ಪ್ಯಾಟರ್ನ್ ಸಿನೆಮಾ ಅಲ್ಲ. ಹೀರೋ- ಹೀರೋಯಿನ್, ಡ್ಯುಯೆಟ್ ಅನ್ನೋದಕ್ಕಿಂತ ಇಡೀ ಸಿನೆಮಾದ ಟ್ರೀಟ್‌ಮೆಂಟ್ ವಿಭಿನ್ನವಾಗಿದೆ. ಇಲ್ಲಿ ನಾನು ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ಅನುಭವ’ ಎನ್ನುತ್ತಾರೆ. ಇನ್ನು, ದಯವಿಟ್ಟು ಗಮನಿಸಿ ಚಿತ್ರದಲ್ಲಿ ಅವರು ಬೋಲ್ಡ್ ಹುಡುಗಿಯ ಪಾತ್ರವಂತೆ. “ತುಂಬಾ ನಟಿಯರು ಆ ತರಹದ ಪಾತ್ರವನ್ನು ಮಾಡಲು ಒಪ್ಪಲ್ಲ. ಆದರೆ, ನಾನು ಮಾಡಿದ್ದೇನೆ. ನನಗೆ ತುಂಬಾ ಚಾಲೆಂಜಿಂಗ್ ಎನಿಸಿತು’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ. ಕಾಫಿ ತೋಟದಲ್ಲಿ ಲಾಯರ್ ಪಾತ್ರದಲ್ಲಿ ಸಂಯುಕ್ತಾ ನಟಿಸಿದ್ದಾರೆ. ಸಂಯುಕ್ತಾ ಅವರದ್ದು ಕಲಾವಿದರ ಕುಟುಂಬ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ತಾಯಿ ಸುಧಾ ಬೆಳವಾಡಿ, ಮಾವ ಪ್ರಕಾಶ್ ಬೆಳವಾಡಿ, ಅಜ್ಜಿ ಭಾರ್ಗವಿ ನಾರಾಯಣ್… ಹೀಗೆ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ಆ ಕುಟುಂಬದಲ್ಲಿದ್ದಾರೆ.
ಬರೀ ಸಿನೆಮಾ ಅಷ್ಟೇ ಅಲ್ಲ, ರಂಗಭೂಮಿಯಲ್ಲೂ ಎಲ್ಲರೂ ಹೆಸರು ಮಾಡಿದ್ದಾರೆ. ಈ ಕುಟುಂಬದ ಮೂರನೆಯ ತಲೆಮಾರಿನ ಹುಡುಗಿಯಾಗಿ ಸಂಯುಕ್ತಾ ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರೆಸುತ್ತ ಸಾಗಿದ್ದಾರೆ. ಹೀಗಿರುವಾಗ ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಅದೇನೆಂದರೆ ಸಂಯುಕ್ತಾ ತಮಗೆ ಬರುವ ಪಾತ್ರಗಳನ್ನು ಮನೆಯವರ ಜೊತೆ ಕುರಿತು ಚರ್ಚಿಸುತ್ತಾರಾ ಅಥವಾ ಸ್ವತಂತ್ರವಾಗಿ ತಮ್ಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಎಂದು. ಅದಕ್ಕೆ ಸಂಯುಕ್ತಾ, ತಮ್ಮ ಪಾತ್ರಗಳೆಲ್ಲವೂ ತಮ್ಮದೇ ಆಯ್ಕೆ ಎಂದು ಸ್ಪಷ್ಟಪಡಿಸುತ್ತಾರೆ.
“ನನಗೆ ಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನನಗೆ ಇಷ್ಟವಾದ ಸಿನೆಮಾಗಳನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಯಾವ ಪಾತ್ರ ನನ್ನ ಕೆರಿಯರ್‌ಗೆ ಪ್ಲಸ್ ಆಗಬಲ್ಲದು, ಯಾವ ಪಾತ್ರ ನನಗೆ ಖುಷಿ ಕೊಡಬಲ್ಲದು ಎಂದು ಜಡ್ಜ್ ಮಾಡುವಷ್ಟು ಸಾಮರ್ಥ್ಯ ನನಗಿದೆ. ಹಾಗಾಗಿ, ನಾನು ಯಾವುದೇ ಚಿತ್ರ ಒಪ್ಪಿಕೊಂಡರೂ, ಅದು ನನ್ನದೇ ತೀರ್ಮಾನ’ ಎನ್ನುತ್ತಾರೆ ಅವರು. “ನಾನು ಒಂದಷ್ಟು ಹೊಸ ಬಗೆಯ ಸಿನೆಮಾಗಳನ್ನು ಮಾಡಿಕೊಂಡು ಬಂದಿದ್ದೇನೆ. ಅದನ್ನು ಬಿಟ್ಟು ಮತ್ತೆ ರೆಗ್ಯುಲರ್ ಪ್ಯಾಟರ್ನ್ ಇರುವ ಪಾತ್ರ ಮಾಡಲು ಇಷ್ಟವಿಲ್ಲ. ಏನಾದರೂ ಹೊಸತನವಿರಬೇಕು. ಉದಾಹರಣೆಗೆ ಮಾರಿಕೊಂಡವರು. ಆ ಚಿತ್ರದ ಪಾತ್ರ ಛಾಲೆಂಜಿಂಗ್ ಆಗಿತ್ತು. ಒಂದು ಪಾತ್ರ ಮಾಡಿದರೆ ಅದು ಜನರ ಮನಸಿಗೆ ಹತ್ತಿರವಾಗಬೇಕು. ಆ ತರಹದ ಪಾತ್ರ ನನಗೆ ಇಷ್ಟ’ ಎನ್ನುತ್ತಾರೆ ಸಂಯುಕ್ತಾ.