Advertisement
ಸತ್ಯನಾಥ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ನಿರ್ಮಿಸಲಾದ ಬಡಾವಣೆಯಲ್ಲಿ ನಾಗರಿಕ ಸೌಲಭ್ಯ ನಿವೇಶನ (ಸಿಎ ಸೈಟ್) ಪಾರ್ಕ್ ಜಾಗ ಹಾಗೂ ಸಾರ್ವಜನಿಕ ಸ್ಥಳಕ್ಕೆ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಮಾಡಿ ಹಂಚಲಾಗಿದೆ ಎಂದು ಆರೋಪಿಸಿ ರಾಯಚೂರು ನಗರದ ತೀಮಾಪುರ ಪೇಟೆ ನಿವಾಸಿ ಟಿ. ಮರೆಪ್ಪ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾ| ಅಲೋಕ್ ಆರಾಧೆ ಮತ್ತು ನ್ಯಾ| ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.ವಿಚಾರಣೆಗೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಯಪಾಲ ರೆಡ್ಡಿ ಖುದ್ದು ಹಾಜರಾಗಿದ್ದರು. ಈ ವೇಳೆ ಆಯುಕ್ತರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಬಗ್ಗೆ ತಮ್ಮ ಕಕ್ಷಿದಾರ (ಆಯುಕ್ತ)ರಿಗೆ ಮಾಹಿತಿಯೇ ಇಲ್ಲ ಎಂದರು. ಇದಲ್ಲದೆ, ನನ್ನ ವಿರುದ್ಧ ಜಾಮೀನುಸಹಿತ ವಾರಂಟ್ ಹೊರಡಿಸಲಾದ ಬಳಿಕವೇ ಈ ಪ್ರಕರಣದ ಬಗ್ಗೆ ನನಗೆ ಗೊತ್ತಾಗಿದ್ದು ಎಂದು ಸ್ವತಃ ಆಯುಕ್ತರೂ ನ್ಯಾಯಪೀಠದ ಮುಂದೆ ಹೇಳಿಕೆ ನೀಡಿದರು.
ಆದರೆ ಪ್ರಕರಣದ ದಾಖಲೆಗಳು ಮತ್ತು ಹಿಂದಿನ ನಿರ್ದೇಶನಗಳನ್ನು ಪರಿಶೀಲಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಆಯುಕ್ತರಿಗೆ 2019ರ ಜು.8ರಂದು ನೋಟಿಸ್ ಜಾರಿಯಾಗಿದೆ.
ವಕೀಲರು ತಾವೊಬ್ಬ ಕೋರ್ಟ್ ಅಧಿಕಾರಿ ಎನ್ನುವುದನ್ನು ಮರೆತು ದಾಖಲೆಗಳನ್ನು ಪರಿಶೀಲಿಸಿದೆ ತಮ್ಮ ಕಕ್ಷಿದಾರ ಹೇಳಿದ್ದನ್ನೇ ನ್ಯಾಯಾಲಯಕ್ಕೆ ತಿಳಿಸಿರುವುದು ದುರದೃಷ್ಟಕರ ಸಂಗತಿ. ವಕೀಲರ ಇಂತಹ ನಡೆಯನ್ನು ಸಹಿಸಲಾಗದು. ಯಾವುದೇ ಪ್ರಕರಣದಲ್ಲಿ ಅಂತಿಮವಾಗಿ ನ್ಯಾಯಾಲಯ ವಕೀಲರನ್ನು ನಂಬಿರುತ್ತದೆ. ಅವರೇ ಈ ರೀತಿಯ ಬೇಜಾವಾಬ್ದಾರಿ ತೋರಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ಆಯುಕ್ತರು ಮತ್ತು ವಕೀಲರು ಇಬ್ಬರೂ ತಮ್ಮ ನಡತೆ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಿತು.
Related Articles
Advertisement
ಏನಿದು ಪ್ರಕರಣ: ಸತ್ಯನಾಥ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿಗೆ ಬಡವಾಣೆ ನಿರ್ಮಿಸಲು 1980ರಲ್ಲಿ ರಾಯಚೂರು ಜಿಲ್ಲಾಧಿಕಾರಿ 18.38 ಎಕರೆ ಜಮೀನು ಮಂಜೂರು ಮಾಡಿದ್ದರು. ಆ ಜಾಗದಲ್ಲಿ 179 ನಿವೇಶನಗಳನ್ನು ನಿರ್ಮಿಸಲು ಸ್ಥಳೀಯ ಯೋಜನಾ ಪ್ರಾಧಿಕಾರ ಒಪ್ಪಿಗೆ ನೀಡಿತ್ತು. ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಸೊಸೈಟಿಯು ಪಾರ್ಕ್, ಶಾಲೆ, ಬಯಲು ಜಾಗಕ್ಕೆ ಮೀಸಲಿಟ್ಟ ಜಾಗವನ್ನು ಕಡಿತಗೊಳಿಸಿ 36 ಹೆಚ್ಚುವರಿ ನಿವೇಶನ ಸೇರಿಸಿ 215 ನಿವೇಶನಗಳ ನಿರ್ಮಾಣಕ್ಕೆ ಅನುಮತಿ ಕೋರಿತ್ತು. 1991ರ ಸೆ.3ರಂದು ಪ್ರಾಧಿಕಾರ ಅದಕ್ಕೆ ಒಪ್ಪಿಗೆ ನೀಡಿತ್ತು. ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನಿವೇಶನಗಳನ್ನು ಸೇರಿಸಿ ಒಟ್ಟಾರೆ 220 ನಿವೇಶನಗಳಿಗೆ ಸೊಸೈಟಿ ಪ್ರಸ್ತಾವನೆ ಸಲ್ಲಿಸಿತ್ತು. 1999ರಲ್ಲಿ ಅದಕ್ಕೂ ಪ್ರಾಧಿಕಾರ ಅನುಮೋದನೆ ಕೊಟ್ಟಿತ್ತು. ಇದನ್ನು ಆಕ್ಷೇಪಿಸಿ ಅರ್ಜಿದಾರರು 2017ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಅರ್ಜಿದಾರರು ಅಂತಿಮವಾಗಿ 2018ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.