Advertisement

ರಸ್ತೆ ಗುಂಡಿ ಮುಚ್ಚಲು ಊರವರಿಂದಲೇ ಶ್ರಮದಾನ

11:12 PM Oct 05, 2019 | Sriram |

ಕುಂದಾಪುರ: ಮೂಡಬಗೆ – ಕೆಂಜಿಮನೆ ರಸ್ತೆಯ ಮಾರ್ಡಿ ಸಮೀಪದ ಕದ್ರಿಹಕ್ಲುವಿನಿಂದ ಆಜ್ರಿವರೆಗಿನ ರಸ್ತೆ ಸಂಪೂರ್ಣ ಹೊಂಡ – ಗುಂಡಿಗಳಿಂದ ಕೂಡಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇರೆ ದಾರಿ ಕಾಣದ ಊರವರು ಈಗ ಶ್ರಮದಾನದ ಮೂಲಕ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ.

Advertisement

ಮೂಡುಬಗೆಯಿಂದ ಕೆಂಜಿಮನೆಗೆ ತೆರಳುವ ರಸ್ತೆಯುದ್ದಕ್ಕೂ ಸುಮಾರು 7 ಕಿ.ಮೀ. ದೂರದವರೆಗೂ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟಕರವೆನಿಸಿದೆ. ಇದರಿಂದ ಈಗ ದಿನ ನಿತ್ಯ ಸಂಕಷ್ಟ ಅನುಭವಿಸುತ್ತಿರುವ ವಾಹನ ಸವಾರರು, ಯುವಕರು ಸೇರಿಕೊಂಡು ಮಳೆ ಸ್ವಲ್ಪ ಕಡಿಮೆಯಾಗಿರುವುದರಿಂದ ರಸ್ತೆಗೆ ಮಣ್ಣು ಹಾಕಿ, ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಶ್ರಮದಾನದಲ್ಲಿ ಮಾರ್ಡಿಯ ಹತ್ತಾರು ಯುವಕರು ಭಾಗವಹಿಸಿದ್ದರು.

6 ವರ್ಷಗಳ ಹಿಂದೆ ಡಾಮರೀಕರಣ
ಮೂಡುಬಗೆಯಿಂದ ಕೊಡ್ಲಾಡಿ, ಮಾರ್ಡಿ, ಆಜ್ರಿ, ಕೂಡ್ಗಿಯಾಗಿ ಕೆಂಜಿಮನೆ ಕಡೆಗೆ ಸಂಪರ್ಕ ಕಲ್ಪಿಸುವ ಸುಮಾರು 7 ಕಿ.ಮೀ. ದೂರದ ರಸ್ತೆಗೆ 6 ವರ್ಷಗಳ ಹಿಂದೆ ಡಾಮರೀಕರಣವಾಯಿತು. ಆ ಬಳಿಕ ಒಮ್ಮೆ ಅಂದರೆ 2 ವರ್ಷಗಳ ಹಿಂದೆ ಹೊಂಡ- ಗುಂಡಿ ಬಿದ್ದ ಕಡೆಗಳಲ್ಲಿ ತೇಪೆ ಹಾಕಲಾಗಿತ್ತು. ಆ ಬಳಿಕ ಇತ್ತ ಯಾರೂ ಸುಳಿಯಲೂ ಇಲ್ಲ. ಈಗ ಸಂಪೂರ್ಣ ಹದಗೆಟ್ಟು ಹೋಗಿದೆ.

ಬಸ್‌ ಸಂಚಾರಕ್ಕೆ ಸಂಚಕಾರ
ಈ ಮಾರ್ಗವಾಗಿ 1 ಸರಕಾರಿ ಬಸ್‌ ದಿನಾ 4 ಟ್ರಿಪ್‌ ಸಂಚರಿಸುತ್ತಿದ್ದರೆ, 2 ಖಾಸಗಿ ಬಸ್‌ಗಳು ದಿನಕ್ಕೆ 3 ಟ್ರಿಪ್‌ ಸಂಚರಿಸುತ್ತವೆ. ಈಗ ಹದಗೆಟ್ಟ ರಸ್ತೆಯಿಂದಾಗಿ ಈ ಮಾರ್ಗವಾಗಿ ಬಸ್‌ಗಳು ಸಂಚರಿಸಲು ಹಿಂದೇಟು ಹಾಕುತ್ತಿವೆ. ಇನ್ನಾದರೂ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ, ಈ ಮಾರ್ಗವಾಗಿ ಬಸ್‌ ಸಂಚಾರಕ್ಕೆ ಸಂಚಕಾರ ಉಂಟಾಗುವ ಸಂಭವವೂ ಇದೆ. ಅನೇಕ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಇದೇ ಬಸ್‌ಗಳನ್ನು ಅವಲಂಬಿಸಿರುವುದರಿಂದ ಅವರಿಗೆ ತೊಂದರೆಯಾಗಲಿದೆ.

ದುರಸ್ತಿಗೆ ಆಗ್ರಹ
ಚುನಾವಣೆ ಸಮಯದಲ್ಲಿ ರಸ್ತೆಯ ದುರಸ್ತಿ ಮಾಡಿಕೊಡುತ್ತೇವೆ ಎನ್ನುತ್ತಾರೆ. ಮತದಾನದ ಮುಗಿದ ಬಳಿಕ ಜನಪ್ರತಿನಿಧಿಳು ಇತ್ತ ಗಮನ ಹರಿಸುವುದಿಲ್ಲ. ನಿತ್ಯ ಈ ಹೊಂಡ – ಗುಂಡಿಗಳಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದು, ಇನ್ನಾದರೂ ಈ ರಸ್ತೆಯ ದುರಸ್ತಿ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next