Advertisement

ಯಡಿಯೂರಪ್ಪ ಮುಖ ನೋಡಿ ಜನ ಬಿಜೆಪಿಗೆ ಮತ ಹಾಕಲ್ಲ:  ಈಶ್ವರಪ್ಪ

03:50 AM Jan 19, 2017 | Team Udayavani |

ತುಮಕೂರು: ಯಾರೇ ಪಕ್ಷದಲ್ಲಿದ್ದರೂ, ಪಕ್ಷದ ನಿಷ್ಠೆ ಮುಖ್ಯ. ರಾಜ್ಯದ ಜನ ಯಡಿಯೂರಪ್ಪ ಅಥವಾ ಈಶ್ವರಪ್ಪ ಅವರನ್ನು ನೋಡಿ ಮತ ಹಾಕುವುದಿಲ್ಲ. ಪಕ್ಷ ನೋಡಿ ಮತ ಹಾಕುತ್ತಾರೆ. ಇದನ್ನು ಯಡಿಯೂರಪ್ಪ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಬುಧವಾರ ನಗರದ ಸೊಗಡು ಶಿವಣ್ಣ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಾಲ್ಕು ಜನರ ಮಾತುಗಳನ್ನು ಕೇಳುವುದನ್ನು ಬಿಟ್ಟರೆ ಮಾತ್ರ ನಾಯಕರಾಗಲು ಸಾಧ್ಯ. ಇಲ್ಲದಿದ್ದರೆ ಇಡೀ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಿ ಬಿಡುತ್ತದೆ. ಇದಕ್ಕೆ ಅವರೇ ಕಾರಣರಾಗುತ್ತಾರೆ ಎಂದು ಹರಿಹಾಯ್ದರು.

ಇನ್ನೂ ಸರಿ ಹೋಗಿಲ್ಲ:
ದೇವ್ರಾಣೆ ಮಾಡಿ ಹೇಳ್ತೀನಿ. ಯಡಿಯೂರಪ್ಪಇನ್ನೂ ಸರಿ ಹೋಗಿಲ್ಲ. ಕೇವಲ ನಾಲ್ಕು ಜನರ ಜತೆ ಮಾತ್ರ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುವ ಪ್ರವೃತ್ತಿ ಬಿಟ್ಟಿಲ್ಲ. ತಮ್ಮ ಸುತ್ತಲಿರುವ ನಾಲ್ಕು ಜನರ ತೀರ್ಮಾನವನ್ನು ಮಾತ್ರ ಅಂತಿಮ ಎಂದು ತಿಳಿದುಕೊಳ್ಳುತ್ತಾರೆ. ಅವರು ಬಿಜೆಪಿ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದರು. ಅಲ್ಲಿ ಏನೂ ನಡೆಯಲಿಲ್ಲ. ಕಡೆಗೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬಿಜೆಪಿಗೆ ವಾಪಸ್‌ ಬಂದರು. ಯಾರೂ ವಿರೋಧ ಮಾಡಲಿಲ್ಲ. ರಾಜಾÂಧ್ಯಕ್ಷರಾಗಿ ನೇಮಕವಾದ ನಂತರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆಯನ್ನೇ ಮಾಡುವುದಿಲ್ಲ ಎಂದು ಬಿಎಸ್‌ವೈ ವಿರುದ್ಧ ಕಿಡಿಕಾರಿದರು.

ಜ.19ರಂದು ಯಡಿಯೂರಪ್ಪಕರೆದಿರುವ ಸಭೆಯ ಬಗ್ಗೆ ಮಾಹಿತಿ ಇಲ್ಲ. ನಮ್ಮ ಪಕ್ಷದ 24 ಮುಖಂಡರು ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಸಭೆಯ ಕುರಿತೂ ಮಾಹಿತಿಯಿಲ್ಲ. ಹೀಗಾಗಿ ಆ ಸಭೆಗೆ ಭಾಗವಹಿಸುವ ಅಗತ್ಯವೂ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಾನು ಪಕ್ಷದ ವಿರೋಧಿ ಚಟುವಟಿಕೆಯಲ್ಲಿ ತೊಡಗಿಲ್ಲ. ಆರಂಭದಿಂದಲೂ ನಾನು ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಏಳ್ಗೆಗಾಗಿ ಶ್ರಮಿಸಿದ್ದೇನೆ. ಪಕ್ಷದಲ್ಲಿ ಎಂದೂ ತಲೆತಗ್ಗಿಸುವ ಕೆಲಸವನ್ನು ಮಾಡಿಲ್ಲ, ಮುಂದೂ ಮಾಡುವುದಿಲ್ಲ. ನಾನು ಪಕ್ಷದ ಏಳ್ಗೆಗಾಗಿ ಶ್ರಮ ವಹಿಸಿ ದುಡಿಯುತ್ತಿದ್ದೇನೆ. ಪಕ್ಷವೂ ನನ್ನನ್ನು ಬೆಳೆಸಿದೆ. ಹಲವು ಹಂತಗಳಲ್ಲಿ ಅಧಿಕಾರವನ್ನೂ ನೀಡಿದೆ. ಅಧಿಕಾರವನ್ನೂ ಅನುಭವಿಸಿದ್ದೇನೆ. ಹೀಗಾಗಿ ನಾನು ಪಕ್ಷಕ್ಕೆ ಎಂದೂ ದ್ರೋಹ ಬಗೆಯುವುದಿಲ್ಲ ಎಂದು ಪುನರುಚ್ಚರಿಸಿದರು.

Advertisement

ನಾವು ರಾಜಾÂಧ್ಯಕ್ಷರಾದ ಯಡಿಯೂರಪ್ಪ ಅವರ ವಿರುದ್ಧ ಎಂದೂ ಇಲ್ಲ. ಪಕ್ಷದ ಹೈಕಮಾಂಡ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಅದನ್ನು ನಾವು ಒಪ್ಪಿದ್ದೇವೆ. ಅವರು ರಾಜಾÂಧ್ಯಕ್ಷರಾಗಿದ್ದಾರೆ. ಅದನ್ನು ಒಪ್ಪಿದ್ದೇವೆ. ಆದರೆ ಅವರು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದನ್ನು ನಾವು ಸಹಿಸಲು ಸಾಧ್ಯವಿಲ್ಲ. ಪಕ್ಷಕ್ಕಾಗಿ ಶ್ರಮಿಸಿರುವರು ನಾವು. ಆದರೆ ಪಕ್ಷಕ್ಕಾಗಿ ದುಡಿದವರನ್ನೇ ಕಡೆಗಣಿಸಿದ್ದಾರೆ ಎಂದು ಗುಡಗಿದರು.

ಬಿಜೆಪಿ ನಿರ್ನಾಮ:
ಮಾಜಿ ಸಚಿವ ಸೊಗಡು ಎಸ್‌. ಶಿವಣ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಕಾಂಗ್ರೆಸ್‌ನವರನ್ನು ಪಕ್ಷಕ್ಕೆ ಕರೆತಂದು ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಈ ಮೂಲಕ ಬಿಜೆಪಿಯನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಂಸದ ಜಿ.ಎಸ್‌.ಬಸವರಾಜು ಅವರನ್ನು ಕರೆತರಲಾಗಿದೆ. ಅವರ ಪುತ್ರ ಜಿ.ಬಿ.ಜ್ಯೋತಿಗಣೇಶ್‌ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಬೇರೆ ಪಕ್ಷಗಳಿಂದ ಕರೆ ತಂದವರಿಗೆ ಮಣೆ ಹಾಕುವ ಬದಲು ನಮ್ಮಲ್ಲೇ ಪ್ರಾಮಾಣಿಕ ಮುಖಂಡರು ಇದ್ದಾರೆ ಅವರಿಗೆ ಸ್ಥಾನಮಾನ ನೀಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next