Advertisement

ಫಲವತ್ತಾದ ಭೂಮಿ ರಕ್ಷಿಸಲು ಮೊರೆ

11:38 AM May 19, 2019 | Suhan S |

ಬೆಳಗಾವಿ: ತಾಲೂಕಿನ ಅಲಾರವಾಡದಿಂದ ಮಚ್ಛೆವರೆಗಿನ ಬೈಪಾಸ್‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಡೆದು ಫಲವತ್ತಾದ ಭೂಮಿ ರಕ್ಷಿಸಬೇಕು ಎಂದು ಆಗ್ರಹಿಸಿ ಈ ಭಾಗದ ರೈತರು ಹಾಗೂ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಚಕ್ಕಡಿ ಮೂಲಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಆಗಮಿಸಿದ ರೈತರು, ರೈತ ಮಹಿಳೆಯರು ಹಾಗೂ ಮಕ್ಕಳು, ರಸ್ತೆ ನಿರ್ಮಾಣಕ್ಕೆ ಫಲವತ್ತಾದ ಭೂಮಿ ಕಸಿದುಕೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಸರಿಯಲ್ಲ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

ರೈತರು ಯಾವುದೇ ಅಭಿವೃದ್ಧಿ ಕಾಮಗಾರಿಗಳ ವಿರೋಧಿಗಳಲ್ಲ. ಆದರೆ ನಮ್ಮ ಜೀವನೋಪಾಯಕ್ಕಾಗಿ ಇರುವ ಫಲವತ್ತಾದ ಭೂಮಿ ಕಸಿದುಕೊಂಡು ಅಭಿವೃದ್ಧಿ ಮಾಡುವುದು ಸರಿಯಲ್ಲ. ನಮ್ಮ ಜೀವನಾಡಿ ಭೂಮಿ ಉಳಿಸಬೇಕು. ಕಾಯ್ದೆ ಕಾನೂನುಗಳ ಅರಿವಿಲ್ಲದ ರೈತರ ಭೂಮಿಯನ್ನು ದುರುಪಯೋಗ ಪಡಿಸಿಕೊಂಡು ಅಮಾನವೀಯ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಪೊಲೀಸ್‌ ಇಲಾಖೆಯ ಸರ್ಪಗಾವಲು ಹಾಗೂ ಕೃಷಿ ಮಹಿಳೆಯರ ಮೇಲೆ ಗೂಂಡಾವರ್ತನೆ ತೋರುತ್ತಿರುವ ಅಧಿಕಾರಿಗಳು, ಬಲವಂತವಾಗಿ ಕೃಷಿ ಜಮೀನು ಹಾಳು ಮಾಡಿ ನಮ್ಮ ಹೊಟ್ಟೆಯ ಮೇಲೆ ಹೊಡೆದು ಅಭಿವೃದ್ಧಿ ಮಾಡುವುದರಿಂದ ಸರ್ಕಾರ ಏನು ಸಾಧಿಸಲು ಸಾಧ್ಯ. ಫಲವತ್ತಾದ ಭೂಮಿಯನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸುವಂತಿಲ್ಲ. ರೈತರ ಮನವೊಲಿಸದೇ ಪೂರ್ಣ ಹಾಗೂ ಯೋಗ್ಯ ಪರಿಹಾರ ಲೆಕ್ಕಿಸದೇ ರೈತರ ಕೃಷಿ ಜಮೀನು ಕಸಿದುಕೊಂಡರೆ ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರ ಸ್ವ ಇಚ್ಛೆಯಿಂದ ಮಚ್ಛೆಯಿಂದ ಸಾಂಬ್ರಾವರೆಗಿನ ವಿಶೇಷ ಕೃಷಿ ಕಾಯ್ದಿಟ್ಟ ಭೂಮಿಯನ್ನಾಗಿ ಕಾಯ್ದಿರಿಸಬೇಕಾಗಿತ್ತು. ಭತ್ತದ ಬೆಳೆ ಬೆಳಗಾವಿಯ ತಳಿ ಅಪರೂಪದ್ದಾಗಿದೆ. ಇದನ್ನು ರಕ್ಷಿಸುವ ಬದಲು ಕೃಷಿ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಕಾಮಗಾರಿ ನಿಲ್ಲಿಸುವಂತೆ ಮೇ 10ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ನೀಡಲಾಗಿದೆ ಎಂದು ತಿಳಿಸಿದರು.

Advertisement

ಬೆಳಗಾವಿ ಬಾಸುಮತಿ ತಳಿಯನ್ನು ರಕ್ಷಿಸಬೇಕು. 30 ಅಡಿಗಿಂತ ಹೆಚ್ಚು ಆಳವಿರುವ ಕಪ್ಪು ಮಣ್ಣಿನ ಭೂಮಿಯನ್ನು ಯಾವುದೇ ಕಟ್ಟಡ ಅಥವಾ ರಸ್ತೆಗೆ ಬಳಸಬಾರದು. ಈ ಫಲವತ್ತಾದ ಭೂಮಿ ಕೃಷಿಯಿಂದ ವಿಮುಖವಾದರೆ ಮುಂದಿನ ದಿನಗಳಲ್ಲಿ ಹಾನಿಯೇ ಜಾಸ್ತಿ. ಈ ಭೂಮಿಯಲ್ಲಿ ಯಾವುದೇ ಕೃತಕ ನೀರಾವರಿ ಯೋಜನೆಯ ಅನುಕೂಲವಿಲ್ಲದಿದ್ದರೂ ವರ್ಷದಲ್ಲಿ ಮೂರು ವಿಧದ ಬೆಳೆ ಬೆಳೆಯುವ ಅವಕಾಶವಿದೆ ಎಂದು ಮನವಿಯಲ್ಲಿ ಉಲ್ಲೇಖೀಸಿದ್ದಾರೆ.

ಇಲ್ಲಿ ರಸ್ತೆ ನಿರ್ಮಾಣ ಮಾಡದರೆ ಸಾವಿರಾರು ಮರಗಳ ಮಾರಣಹೋಮ ಆಗುತ್ತದೆ. ಕಾನೂನುಬಾಹಿರವಾಗಿ ರೈತರ ಮೆಲೆ ಒತ್ತಡ ಹಾಕಿ ಭೂಮಿ ಮುಟ್ಟುಗೋಲು ಹಾಕಲಾಗುತ್ತಿದೆ. ರಾಜಕೀಯ ಮುಖಂಡರ ಹಿತಾಸಕ್ತಿಗೆ ಅನುಗುಣವಾಗಿ ರಸ್ತೆಯ ಮೋಜಣಿ ಹಾಗೂ ಅಳತೆ ಜಮೀನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ. ರೈತರು ಖಾಯಂ ನಿರಾಶ್ರಿತರಾಗುವುದನ್ನು ತಡೆಯುವಂತೆ ಆಗ್ರಹಿಸಿದರು.

ಇದೇ ಜೋಡು ರಸ್ತೆಯನ್ನು ಹಲಗಾ, ಬಸ್ತವಾಡ, ಕೊಂಡಸಕೊಪ್ಪ, ಧಾಮಣೆ, ಹಟ್ಟಿ, ಯರಮಾಳ, ಯಳ್ಳುರ, ಸುಳಗಾ, ಜಾಡಶಹಾಪುರ ಅಥವಾ ದೇಸೂರ ಮಾರ್ಗವಾಗಿ ಮಾಡಿದರೆ ಬರಡು ಭೂಮಿ ಉಪಯೋಗದ ಜತೆಗೆ ಈ ಹಳ್ಳಿಗಳು ಸುಧಾರಣೆ ಕಾಣುತ್ತವೆ ಎಂದು ರೈತರು ಪರ್ಯಾಯ ಮಾರ್ಗದ ಸಲಹೆ ನೀಡಿದ್ದಾರೆ.

ರೈತರಾದ ರಾಜು ಮರವೆ, ಉಮೇಶ ಬಿರ್ಜೆ, ನೀಲಮ್‌ ಬಿರ್ಜೆ, ಬೆಳಗುಂದಕರ, ತಾನಾಜಿ ಹಲೊಗೇಕರ, ಪಿಂಟು ಕಂಗ್ರಾಳಕರನ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next