Advertisement

ಜನರಿಗೆ ಬಜೆಟ್‌ ತಿಳಿಸಲು ಲಂಚ್‌ ಪೆ ಚರ್ಚಾ ಸೂತ್ರ 

07:35 AM Feb 10, 2018 | Team Udayavani |

ಹೊಸದಿಲ್ಲಿ: ‘ಜನರ ಬಳಿಗೆ ಹೋಗಿ ರೈತರಿಗೆ ಮತ್ತು ಮಧ್ಯಮ ವರ್ಗಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿರುವ ಯೋಜನೆಗಳನ್ನು ವಿವರಿಸಿ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅದಕ್ಕಾಗಿ ಮನೆಯಿಂದಲೇ ತಂದ ಊಟದ ಜತೆಗೆ ಚರ್ಚೆ ಕಾರ್ಯಕ್ರಮ ಆಯೋಜಿಸಿ. ಕಾಂಗ್ರೆಸ್‌ನ ಅಪಪ್ರಚಾರಕ್ಕೆ ಪ್ರಬಲವಾಗಿಯೇ ತಿರುಗೇಟು ನೀಡಿ.’ ಹೀಗೆಂದು ಪಕ್ಷದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಲಹೆ ನೀಡಿದ್ದಾರೆ. 

Advertisement

ಹೊಸದಿಲ್ಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನ ಬಜೆಟ್‌ ಧನಾತ್ಮಕವಾಗಿದೆ. ರೈತರಿಗೆ ಮತ್ತು ಬಡವರಿಗಾಗಿ ಹಲವು ಕಾರ್ಯಕ್ರಮ ಘೋಷಿಸಲಾಗಿದೆ ಎಂದಿದ್ದಾರೆ. ಸಭೆಯಲ್ಲಿನ ಅಂಶಗಳ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್‌ ಬಗ್ಗೆ ಕಾಂಗ್ರೆಸ್‌ ಮಾಡುತ್ತಿರುವ ಟೀಕೆಯನ್ನು ಸಮರ್ಥವಾಗಿ ಎದುರಿಸಬೇಕು. ಅದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮನೆಯಿಂದಲೇ ತಂದ ಊಟ ಮಾಡುವುದರ ಮೂಲಕ ಸಾರ್ವಜನಿಕರ ಸಭೆ ನಡೆಸಬೇಕು. ಈ ಸಂದರ್ಭದಲ್ಲಿ ಸರಕಾರ ಘೋಷಿಸಿರುವ ವಿವಿಧ ರೀತಿಯ ಕಲ್ಯಾಣ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಬೇಕು ಎಂದು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. 

ಬಡವರಿಗಾಗಿಯೇ 5 ಲಕ್ಷ ರೂ.ವಿಮೆ ಯೋಜನೆ ಘೋಷಿಸಲಾಗಿದೆ. ಇದರಿಂದಾಗಿ 10 ಕೋಟಿ ಕುಟುಂಬಗಳಿಗೆ ನೆರವಾಗಲಿದೆ ಎಂಬ ಅಂಶವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಇದರ ಜತೆಗೆ ಅಣಕು ಸಂಸತ್‌ ಮೂಲಕವೂ ಬಜೆಟ್‌ನ ಉತ್ತಮ ಅಂಶಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾಡಿದ ಭಾಷಣವನ್ನೂ ಪ್ರಧಾನಿ ಶ್ಲಾ ಸಿದ್ದಾರೆ. 


ರಾಹುಲ್‌ ವಿರುದ್ಧ ವಾಗ್ಧಾಳಿ:
ಇದೇ ವೇಳೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ ಅಮಿತ್‌ ಶಾ, ‘ಅವರ ಕಾರ್ಯವೈಖರಿ ಪ್ರಜಾಸತ್ತಾತ್ಮಕವಾಗಿಲ್ಲ. ರಫೇಲ್‌ ಯುದ್ಧ ವಿಮಾನಗಳ ಡೀಲ್‌ ಬಗ್ಗೆ ಅವರು ಮಾಡುತ್ತಿರುವ ಟೀಕೆಗಳನ್ನು ಸಮರ್ಥವಾಗಿ ಎದುರಿಸ ಬೇಕು’ ಎಂದಿದ್ದಾರೆ. ಪ್ರಧಾನಿ ಮೋದಿಯವರ ಭಾಷಣದ ವೇಳೆ ಕಾಂಗ್ರೆಸ್‌ ಸದಸ್ಯರು ನಡೆದುಕೊಂಡ ವರ್ತನೆ ಬಗ್ಗೆಯೂ ಶಾ ಆಕ್ಷೇಪಿಸಿದ್ದಾರೆ. ಕೇಂದ್ರ ಹಣಕಾಸು ಸಚಿವರು ಎಲ್ಲಾ ಅಂಶಗಳನ್ನು ಬಹಿರಂಗ ಮಾಡಲಾಗದು ಎಂಬ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ ಎಂದು ಶಾ ಹೇಳಿದ್ದಾರೆ ಎಂದು ಸಚಿವ ಅನಂತಕುಮಾರ್‌ ತಿಳಿಸಿದ್ದಾರೆ. 

Advertisement

ರೈತರ ಸಮಸ್ಯೆ ನಿರ್ಲಕ್ಷಿಸಿದ್ದರಿಂದ ರಾಜಸ್ಥಾನ ಉಪಚುನಾವಣೆಯಲ್ಲಿ ಪಕ್ಷಕ್ಕೆ ಸೋಲು ಉಂಟಾಯಿತು ಎಂದು ಪಕ್ಷದ ಸಂಸದರು ಪ್ರಧಾನಿ ಮತ್ತು ಅಮಿತ್‌ ಶಾ ಗಮನಕ್ಕೆ ತಂದಾಗ, ‘ರಾಜಸ್ಥಾನದ ಚುನಾವಣೆಯ ಸೋಲಿನ ಬಗ್ಗೆ ನೋಡಬೇಡಿ. 2019ರ ಚುನಾವಣೆಯಲ್ಲಿ ಗೆಲುವಿನ ಬಗ್ಗೆ ಶ್ರಮಿಸಿ’ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 


ಬುಕ್‌ಲೆಟ್‌ ಬಿಡುಗಡೆ:
ದಾವೋಸ್‌ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ಶೃಂಗದಲ್ಲಿ ಪಿಎಂ ಮೋದಿ ಮಾಡಿದ ಭಾಷಣ ಮತ್ತು ವಿಶ್ವದ 25 ಪ್ರಮುಖ ಪತ್ರಿಕೆಗಳಲ್ಲಿ ಅದರ ಬಗೆಗಿನ ವರದಿಗಳು ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿವಿಧ ಸ್ಥಳಗಳಲ್ಲಿ ಮಾಡಿದ ಭಾಷಣಗಳ ಅಂಶಗಳುಳ್ಳ ಕೈಪಿಡಿಗಳನ್ನು ಬಿಡುಗಡೆ ಮಾಡಲಾಗಿದೆ. ದಾವೋಸ್‌ ಭಾಷಣ ಇರುವ ಕೈಪಿಡಿಗೆ ‘ಅನ್‌ಬೀಟಬಲ್‌ ಗ್ಲೋಬಲ್‌ ಲೆಜೆಂಡ್‌’ (ಸೋಲಿಸಲಾಗದ ಜಗತ್ತಿನ ದಂತ ಕತೆ) ಎಂಬ ಹೆಸರು ನೀಡಲಾಗಿದೆ.

ಏನಿದು ‘ಲಂಚ್‌ ಪೆ ಚರ್ಚಾ’?
2014ರ ಲೋಕಸಭೆ ಚುನಾವಣೆ ವೇಳೆ ಕೇಂದ್ರದ ಮಾಜಿ ಸಚಿವ ಮಣಿಶಂಕರ ಅಯ್ಯರ್‌ ಅವರು ನರೇಂದ್ರ ಮೋದಿ ಚಹಾ ಮಾರಲು ಕೂಡ ಯೋಗ್ಯರಲ್ಲ ಎಂದು ಟೀಕಿಸಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿದ್ದ ಬಿಜೆಪಿ ದೇಶಾದ್ಯಂತ ‘ಚಾಯ್‌ ಪೆ ಚರ್ಚಾ’ ಕಾರ್ಯಕ್ರಮ ಆಯೋಜಿಸಿತ್ತು. 2017ರಲ್ಲಿ ಪ್ರಧಾನಿ ಮೋದಿ ವಾರಾಣಸಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಕ್ಷದ ನಾಯಕರ ಜತೆಗೆ ಚರ್ಚೆ ಮಾಡುವ ಸಂದರ್ಭದಲ್ಲಿ ತಮ್ಮ ಮನೆಯಿಂದಲೇ ತೆಗೆದುಕೊಂಡು ಹೋಗಿದ್ದ ಊಟವನ್ನು ಸೇವಿಸುತ್ತಾ ವಿಚಾರ ವಿನಿಮಯ ಮಾಡಿದ್ದರು. ಅದೇ ಮಾದರಿಯನ್ನು ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಅನುಸರಿಸುವಂತೆ ಪ್ರಧಾನಿ ಮೋದಿ ಸಲಹೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next