Advertisement

ಮಾರ್ಚ್‌ ವೇಳೆಗೆ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಸೇವೆಗೆ ಚಾಲನೆ

06:55 AM Dec 01, 2017 | Team Udayavani |

ಬೆಂಗಳೂರು: ಮುಂದಿನ ಮಾರ್ಚ್‌ ವೇಳೆಗೆ “ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌’ ಸೇವೆಯನ್ನು ದೇಶಾದ್ಯಂತ ಆರಂಭಿಸಲಾಗುವುದು. ಹಾಗೆಯೇ  ವಿದೇಶಾಂಗ ವ್ಯವಹಾರ ಖಾತೆ ಸಹಯೋಗದಲ್ಲಿ ಅಂಚೆ ಇಲಾಖೆಯು ಬೆಳಗಾವಿ, ದಾವಣಗೆರೆ, ಹಾಸನದಲ್ಲಿ ಸದ್ಯದಲ್ಲೇ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಲಾಗುವುದು ಎಂದು ಕೇಂದ್ರ ಸಂವಹನ ಖಾತೆ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಹೇಳಿದರು.

Advertisement

ನಗರದ ಪೀಣ್ಯ ಕೈಗಾರಿಕಾ ಪ್ರದೇಶದ 3ನೇ ಹಂತದಲ್ಲಿ ನೂತನವಾಗಿ ಆರಂಭವಾದ ಅಂಚೆ ಇಲಾಖೆಯ ಪಾರ್ಸೆಲ್‌ ಪ್ರೊಸೆಸ್ಸಿಂಗ್‌ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, “ಈಗಾಗಲೇ ರಾಯಪುರ, ರಾಂಚಿಯಲ್ಲಿ ಪ್ರಾಯೋಗಿಕವಾಗಿ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಸೇವೆ ಆರಂಭವಾಗಿದ್ದು, ಮಾರ್ಚ್‌ ಹೊತ್ತಿಗೆ ದೇಶಾದ್ಯಂತ ಪ್ರಮುಖ ಅಂಚೆ ಕಚೇರಿಗಳಲ್ಲಿ ಈ ಸೇವೆ ಆರಂಭವಾಗಲಿದೆ. ಇದರಿಂದ ಅಂಚೆ ಕಚೇರಿಯ ಸೇವೆಯು ಇನ್ನಷ್ಟು ವ್ಯಾಪಕವಾಗಲಿದ್ದು, ಜನರಿಗೆ ಸುಧಾರಿತ ಸೇವೆಗಳನ್ನು ಒದಗಿಸಲಿದೆ ಎಂದು ಹೇಳಿದರು.

ದೇಶದ ಪ್ರತಿಯೊಬ್ಬ ಪ್ರಜೆಗೂ ತಾವಿರುವ ಸ್ಥಳದ 50 ಕಿ.ಮೀ. ಅಂತರದೊಳಗೆ ಪಾಸ್‌ಪೋರ್ಟ್‌ ಸಿಗುವ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯ. ಅದರಂತೆ ಈಗಾಗಲೇ ಅಂಚೆ ಇಲಾಖೆಯು ವಿದೇಶಾಂಗ ವ್ಯವಹಾರ ಸಚಿವಾಲಯದ ಸಹಯೋಗದಲ್ಲಿ ಮೈಸೂರಿನ ಮೇಟಗಳ್ಳಿಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಿದೆ. ಬೆಳಗಾವಿ, ದಾವಣಗೆರೆ, ಹಾಸನದಲ್ಲೂ ಶೀಘ್ರವೇ ಪಾಸ್‌ಪೋರ್ಟ್‌ ಸೇವಾಕೇಂದ್ರ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಕಾಲ ಬದಲಾದಂತೆ ಅಂಚೆ ಇಲಾಖೆಯು ಸಾಂಪ್ರದಾಯಿಕ ಸೇವೆಗಳ ಜತೆಗೆ ಆಧುನಿಕ ಸೇವೆಗಳಿಗೆ ತೆರೆದುಕೊಳ್ಳುವ ಮೂಲಕ ಪ್ರಸ್ತುತತೆಯನ್ನು ಕಂಡುಕೊಳ್ಳಬೇಕಿದೆ. ಅದರಂತೆ ಉನ್ನತ ಹಾಗೂ ವೈಜ್ಞಾನಿಕ ನಿರ್ವಹಣಾ ಸೇವೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ಈಗಾಗಲೇ ಕಾರ್ಯೋನ್ಮುಖವಾಗಿದೆ. ಪ್ರತಿಷ್ಠಿತ ಇ-ಕಾಮರ್ಸ್‌ ಸಂಸ್ಥೆಗಳ ಪೈಪೋಟಿ ನಡುವೆ ಉತ್ಕೃಷ್ಟ ಸೇವೆ ಒದಗಿಸುವತ್ತ ಹೆಚ್ಚಿನ ಆದ್ಯತೆ ನೀಡಬೇಕಿದೆ. ಅಂಚೆ ಇಲಾಖೆ ಸಹಯೋಗದಲ್ಲೇ ಆಧಾರ್‌ ನೋಂದಣಿ, ತಿದ್ದುಪಡಿ ಸೇವೆಯನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಯಾವುದೇ ಸೇವೆಯ ಯಶಸ್ಸು ಗ್ರಾಹಕರ ತೃಪ್ತಿಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಗ್ರಾಹಕರ ನಿರೀಕ್ಷೆಗಳನ್ನು ಪೂರ್ಣ ಪ್ರಮಾಣದಲ್ಲಿ ತಲುಪಲು ಶ್ರಮಿಸಬೇಕು. ಅಂಚೆ ಇಲಾಖೆ ಬಗೆಗಿನ ಜನರ ವಿಶ್ವಾಸವನ್ನು ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಪೋಸ್ಟ್‌ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೋ, ಅಂಚೆ ನಿರ್ದೇಶನಾಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ (ವ್ಯವಹಾರ ಅಭಿವೃದ್ಧಿ) ವಿ.ಪಿ.ಸಿಂಗ್‌ ಹಾಗೂ ದಕ್ಷಿಣ ಕರ್ನಾಟಕ ಪ್ರಾದೇಶಿಕ ಪೋಸ್ಟ್‌ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ಉಪಸ್ಥಿತರಿದ್ದರು.

Advertisement

ಎಸ್‌ಎಂಎಸ್‌ ಸೇವೆಗೆ ಚಾಲನೆ
ಅಂಚೆ ವಿತರಣೆ ಬಗ್ಗೆ ಕೆಲ ಗಂಟೆ ಮೊದಲೇ ಸ್ವೀಕೃತಿದಾರರಿಗೆ ಎಸ್‌ಎಂಎಸ್‌ ಸಂದೇಶ ರವಾನೆಯಾಗುವ ಸುಧಾರಿತ ಸೇವೆಗೆ ಕೇಂದ್ರ ಸಚಿವ ಮನೋಜ್‌ ಸಿನ್ಹಾ ಗುರುವಾರ ಚಾಲನೆ ನೀಡಿದರು. ಅಂಚೆ ಕಳುಹಿಸುವವರು ಹಾಗೂ ಸ್ವೀಕೃತಿದಾರರ ಮೊಬೈಲ್‌ ಸಂಖ್ಯೆಗಳನ್ನು ಆರಂಭದಲ್ಲೇ ನಮೂದಿಸಿದರೆ ಸಾಕು. ಪೋಸ್ಟ್‌ಮನ್‌ಗೆ ಆಯಾದಿನ ಬೆಳಗ್ಗೆ ಅಂಚೆ- ಪತ್ರ ಹಂಚಿಕೆಯಾಗುತ್ತಿದ್ದಂತೆ ಸ್ವೀಕೃತಿದಾರರಿಗೆ ಪೋಸ್ಟ್‌ಮನ್‌ ಮೊಬೈಲ್‌ ಸಂಖ್ಯೆ ಸಹಿತ ಎಸ್‌ಎಂಎಸ್‌ ಸಂದೇಶ ರವಾನೆಯಾಗಲಿದೆ. ಇದರಿಂದ ಸ್ವೀಕೃತಿದಾರರು ಪಡೆದುಕೊಳ್ಳಲು ಸಮಯ ಹೊಂದಿಸಿಕೊಳ್ಳಲು ಅನುಕೂಲವಾಗಲಿದೆ. ಜತೆಗೆ “ಕ್ಯಾಶ್‌ ಆನ್‌ ಡಿಲಿವರಿ’ ಸೇವೆಯಿದ್ದಾಗಲೂ ಬೆಳಗ್ಗೆಯೇ ಎಸ್‌ಎಂಎಸ್‌ ಸಂದೇಶ ಸ್ವೀಕೃತಿದಾರರಿಗೆ ರವಾನೆಯಾಗುತ್ತದೆ. ಇದರಿಂದ ಸ್ವೀಕೃತಿದಾರರು ಹಣ ಹೊಂದಿಸಿಕೊಂಡು ಪಡೆದುಕೊಳ್ಳಲು ನೆರವಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಸೇವೆ ಆರಂಭವಾಗಿದ್ದು, 635 ಪೋಸ್ಟ್‌ಮನ್‌ಗಳಿಗೆ ತರಬೇತಿ ಜತೆಗೆ ಮೊಬೈಲ್‌ ವಿತರಿಸಲಾಗಿದೆ. ಹಂತ ಹಂತವಾಗಿ ಮೈಸೂರು, ಹುಬ್ಬಳ್ಳಿ ಇತರೆ ನಗರಗಳಿಗೆ ವಿಸ್ತರಿಸಲು ಚಿಂತಿಸಿದೆ.

ನಾನಾ ಸೇವೆಗೆ ಚಾಲನೆ
ಪೀಣ್ಯ 3ನೇ ಹಂತದಲ್ಲಿ 7000 ಚದರ ಅಡಿ ವಿಸ್ತೀರ್ಣದಲ್ಲಿ ಪಾರ್ಸೆಲ್‌ ಪ್ರೊಸೆಸ್ಸಿಂಗ್‌ ಸೆಂಟರ್‌ ನಿರ್ಮಾಣಗೊಂಡಿದೆ. ಕನ್ವೆಯರ್‌ ಬೆಲ್ಟ್, ವೊಲೊಮೆಟ್ರಿಕ್‌ ವೇಯಿಂಗ್‌ ಯಂತ್ರ ಸಹಿತ ಸುಧಾರಿತ ಸೌಲಭ್ಯವಿರುವ ಕೇಂದ್ರದಲ್ಲಿ ನಿತ್ಯ 40,000ಕ್ಕೂ ಹೆಚ್ಚು ಪಾರ್ಸೆಲ್‌ಗ‌ಳ ನಿರ್ವಹಣೆ ಸಾಮರ್ಥಯ ಹೊಂದಿದೆ. ಇದೇ ವೇಳೆ ಮೈಸೂರಿನ ಅಂಚೆ ತರಬೇತಿ ಕೇಂದ್ರದಲ್ಲಿ “ಹಂಸ’ ಮಹಿಳಾ ವಸತಿ ನಿಲಯ ನಿರ್ಮಾಣಕ್ಕೆ ಕೇಂದ್ರ ಸಚಿವ ಮನೋಜ್‌ ಸಿನ್ಹಾ ಸಾಂಕೇತಿಕವಾಗಿ ಶಂಕುಸ್ಥಾಪನೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next