Advertisement
ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಪೊಲೀಸ್ ಠಾಣೆಗಳಲ್ಲಿ ಅಥವಾ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ ಪ್ರಕರಣ ರೌಡಿಗಳ ಸಮ್ಮುಖದಲ್ಲಿ ಇತ್ಯರ್ಥವಾಗುತ್ತದೆ ಎಂದಾದರೆ ಸಂವಿಧಾನದ ಪಾಲನೆ ಎಷ್ಟರ ಮಟ್ಟಿಗೆ ಆಗುತ್ತಿದೆ. ಇದು ವ್ಯವಸ್ಥೆಯ ದುರಂತವಲ್ಲವೇ ಎಂದು ಪ್ರಶ್ನಿಸಿದರು.
Related Articles
Advertisement
ಸಂವಿಧಾನ ಕುರಿತ ಚರ್ಚೆ ಸಂದರ್ಭದಲ್ಲಿ ಕುಟುಂಬ ರಾಜಕಾರಣ ಕುರಿತು ಪ್ರಸ್ತಾಪವಾಗಿದ್ದನ್ನು ಉಲ್ಲೇಖೀಸಿದ ಅವರು, ಪ್ರಾದೇಶಿಕ ಪಕ್ಷಗಳು ಉಳಿದಿರುವುದೇ ಕುಟುಂಬ ರಾಜಕಾರಣದಿಂದ. ವೈದ್ಯನ ಮಗ ವೈದ್ಯನಾಗಬೇಕೆಂದು ಬಯಸಿದಂತೆ ರಾಜಕಾರಣಿಯ ಮಗ ರಾಜಕಾರಣಿ ಆಗಬೇಕೆಂದು ಬಯಸುವುದರಲ್ಲಿ ತಪ್ಪಿಲ್ಲ. ಅಂದ ಮಾತ್ರಕ್ಕೆ ನೇರವಾಗಿ ಇಲ್ಲಿ ಬರಲು ಸಾಧ್ಯವಿಲ್ಲ, ಜನರ ತೀರ್ಪು ಸಿಕ್ಕರೆ ಮಾತ್ರ ಸಾಧ್ಯ.
ನಾನೂ ರಾಜಕೀಯಕ್ಕೆ ಬರಬೇಕು ಎಂದು ಬರಲಿಲ್ಲ, ಅನಿವಾರ್ಯವಾಗಿ ಬರಬೆಕಾಯಿತು ಎಂದು ಹೇಳಿದರು. ದೇವೇಗೌಡರು ಕೋಟಿ ಕೋಟಿ ರೂ. ಮಾಡಿಕೊಂಡಿದ್ದಾರೆಂಬ ಮಾತುಗಳು ಬಂದಿವೆ. 1983ರಿಂದ ನಾನೂ ಚುನಾವಣೆ ವ್ಯವಸ್ಥೆ ನೋಡುತ್ತಿದ್ದೇನೆ.
ಮೊದಲು ಚುನಾವಣಾ ವೆಚ್ಚಕ್ಕೆ ಐದು ಲಕ್ಷ ರೂ. ನೀಡಿದರೆ ಕಣ್ಣಿಗೆ ಒತ್ತಿಕೊಂಡು ಕೃತಜ್ಞತೆ ಹೇಳಿ ಹೋಗುತ್ತಿದ್ದರು. ಆದರೆ, ಈಗ ಏನಾಗಿದೆ? ಇತ್ತೀಚೆಗೆ ಉಪ ಚುನಾವಣೆ ಎದುರಿಸಿದ ನಿಮಗೂ ಗೊತ್ತಿರಬೇಕು ಎಂದು ಆಡಳಿತ ಪಕ್ಷದತ್ತ ಕೈ ಮಾಡಿ ತೋರಿಸಿದರು. ಇಂತವರಿಗೆ ಮತ ಹಾಕಿ ಎಂದು ಸಮುದಾಯಗಳಿಗೆ ಸಂದೇಶ ರವಾನಿಸುವುದು ನೋಡಿಲ್ಲವೇ ಎಂದರು.
2004ರ ಚುನಾವಣೆಯಲ್ಲಿ ಮಾಜಿ ಪ್ರಧಾನಿಯಾಗಿದ್ದ ದೇವೇಗೌಡರು ರಾಜಾಜಿನಗರದ ನಂಜಪ್ಪ ಎಂಬುವರ ಬಳಿ ಚೆಕ್ ಕೊಟ್ಟು ಸಾಲ ತಂದು ಅಭ್ಯರ್ಥಿಗಳಿಗೆ ಕೊಟ್ಟಿದ್ದರು. ಅದು ದೇವೇಗೌಡರು, ನಾನು ಪಡೆದಿದ್ದೇನೆ, ಕೊಟ್ಟಿದ್ದೇನೆ, ಆದರೆ ಆಸ್ತಿ ಮಾಡಿಕೊಂಡಿಲ್ಲ. ಲಕ್ಷಾಂತರ ಜನರ ವಿಶ್ವಾಸ ಪಡೆದುಕೊಂಡಿದ್ದೇನೆಂದು ಹೇಳಿದರು.
ರೇವಣ್ಣ ಜಾತಕ ಬೇರೆ….: ನಾನು ಶಾಸಕನಾದ ಮೊದಲ ಬಾರಿಯೇ ಯಡಿಯೂರಪ್ಪ ಅವರ ಜತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿ ಆಗುವ ಯೋಗ ಒದಗಿ ಬಂದಿತು ಎಂದು ಒಂದು ಸಂದರ್ಭದಲ್ಲಿ ಕುಮಾರಸ್ವಾಮಿ ಹೇಳಿದರು. ಆಗ, ರೇವಣ್ಣ ಎದ್ದು ನಿಂತಾಗ ಬಸವರಾಜ ಬೊಮ್ಮಾಯಿ, “ನೀವು ಕುಳಿತುಕೊಳ್ಳಿ ರೇವಣ್ಣ ನಿಮ್ಮ ಜಾತಕ ಬೇರೆ, ನಿಮ್ಮ ಜಾತಕ ದೊಡ್ಡೋರ ಜತೆ ಕೂಡಿಕೊಳ್ಳುತ್ತದೆ.
ನನಗೆ ಒಮ್ಮೆ ಗೌಡರು ಹೇಳಿದ್ದರು, ರೇವಣ್ಣನ ಜಾತಕ ದೆಸೆಯಿಂದ ನನಗೆ ಇನ್ನೊಂದು ಚಾನ್ಸ್ ದೊರೆಯುತ್ತದೆ ಅಂತ’ ಎಂದು ತಮಾಷೆ ಮಾಡಿದರು. ಆಗ ರೇವಣ್ಣ, “ನಾವು ನೇರವಾಗಿ ಬಂದಿಲ್ಲ ಸ್ವಾಮಿ, ಕಷ್ಟ ಪಟ್ಟು ಬಂದಿದ್ದೀವಿ’ ಎಂದು ಹೇಳಿದರು.
ಬಿಎಸ್‌ವೈಗೆ ಎಚ್ಡಿಕೆ ಕೃತಜ್ಞತೆ: ಅಲ್ಲಿದ್ದ (ಮುಖ್ಯಮಂತ್ರಿ ಸ್ಥಾನ) ನನ್ನನ್ನು ಈ ಕಡೆ (ಪ್ರತಿಪಕ್ಷದ ಕಡೆ) ಕಳುಹಿಸಿ ಯಡಿಯೂರಪ್ಪ ಅವರು ಒಳ್ಳೆಯದು ಮಾಡಿದ್ದಾರೆ. ಇದೀಗ ದೇಶದ ಚರಿತ್ರೆ, ಸಂವಿಧಾನ ರಚನೆಯ ಹಿಂದಿನ ಪರಿಶ್ರಮ, ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ ಜಗತ್ತಿನ ಇತಿಹಾಸ ಎಲ್ಲದರ ಬಗ್ಗೆ ಓದುತ್ತಿದ್ದೇನೆ. ಇದಕ್ಕಾಗಿ ನಾನು ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಬೇಕೆಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.