ಬೆಂಗಳೂರು: ಕೋವಿಡ್-19 ಕಲಿಸಿರುವ ಪಾಠದಿಂದ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿಯ ವತಿಯಿಂದ ಆಯೋಜಿಸಿದ್ದ, ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಹಾಗೂ ಜೀವ ವೈವಿಧ್ಯ ಸಂರಕ್ಷಣೆ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಬದುಕನ್ನು ಅಸಂಖ್ಯ ಬಗೆಯ ಸಸ್ಯ, ಪ್ರಾಣಿ ಹಾಗೂ ಸೂಕ್‌ಷ್ಮಾಣು ಜೀವಿಗಳು ಪೋಷಿಸುತ್ತವೆ. ಪರಿಹಾರ ಪ್ರಕೃತಿಯಲ್ಲಿಯೇ ಕಂಡುಕೊಳ್ಳಬೇಕು’ ಎನ್ನುವುದು ಈ ವರ್ಷದ ಘೋಷವಾಕ್ಯ ಎಂದರು.
ಕರ್ನಾಟಕ ಅಪರೂಪದ ಜೀವ ಸಂಕುಲ ಹೊಂದಿದ ರಾಜ್ಯ ಪಶ್ಚಿಮ ಘಟ್ಟಗಳಲ್ಲಿ ವಿಶ್ವದಲ್ಲಿಯೇ ಅತ್ಯಂತ ವಿಶಿಷ್ಟ ಜೀವ ವೈವಿಧ್ಯವನ್ನು ಕಾಣಬಹುದು. ಜೀವ ವೈವಿಧ್ಯವನ್ನು ಕಾಪಾಡುವ ಸಂಕಲ್ಪದೊಂದಿಗೆ ಪ್ರಾರಂಭವಾದ ಅಂತರರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ, ಈ ಕುರಿತು ಜನಜಾಗೃತಿಯನ್ನು ಮೂಡಿಸುವತ್ತ ಕಾರ್ಯೋನ್ಮುಖವಾಗಿದೆ. ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ಕಾಪಾಡುವುದು, ಅರಣ್ಯ ಹಾಗೂ ಸಮುದ್ರ ಸಂಪತ್ತನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಮುಂದಿನ ಪೀಳಿಗೆಗೆ ಈ ಬಗ್ಗೆ ಅರಿವು ಮೂಡಿಸಿ ಪರಿಸರ ಸಮತೋಲನವನ್ನು ಕಾಪಾಡಬೇಕಿದೆ ಎಂದು ಹೇಳಿದರು.
ಹದಿನೈದು ದಿನಗಳ ಅಭಿಯಾನದಲ್ಲಿ ಬೀಜದುಂಡೆ ತಯಾರಿ, ಕೆರೆ, ನದಿ ಮೂಲ ಸಮೀಕ್ಷೆ, ಔಷಧ ಸಸ್ಯ ವನ ನಿರ್ಮಾಣ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೀವ ವೈವಿಧ್ಯ ಸಂರಕ್ಷಣೆ ಬಗ್ಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ವಾರ್ಸಿಕ ಜೀವ ವೈವಿಧ್ಯ ಪ್ರಶಸ್ತಿಗೆ ಭಾಜನರಾಗಿರುವ ಮೂವರು ಸಾಧಕರಿಗೆ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.