Advertisement

ವಿಶ್ವಶಕ್ತಿ ಸಂಕಲ್ಪಕ್ಕೆ ಕೈಜೋಡಿಸಲು ಕರ

10:23 AM Feb 15, 2018 | |

ಬೀದರ: ಭಾರತ ವಿಶ್ವ ಶಕ್ತಿಯಾಗಿ ಹೊರ ಹೊಮ್ಮಲು ಎಲ್ಲರು ಕೈ ಜೋಡಿಸುವ ಅವಶ್ಯಕತೆ ಇದೆ ಎಂದು ವಾಗ್ಮಿ ಚಕ್ರವರ್ತಿ
ಸೂಲಿಬೆಲೆ ಕರೆ ನೀಡಿದರು. ನಗರದ ಕರ್ನಾಟಕ ಕಾಲೇಜು ಆವರಣದಲ್ಲಿ ವಿಕಾಸ ಅಕಾಡೆಮಿ ಜಿಲ್ಲಾ ಘಟಕದಿಂದ ನಡೆದ “ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಮೊದಲಿನ 50 ವರ್ಷಗಳ ಕಾಲ ಭಾರತ ಆಮೆಗತಿಯಲ್ಲಿ
ಅಭಿವೃದ್ಧಿ ಕಂಡಿದೆ. ಬ್ರಿಟಿಷರು ಈ ದೇಶವನ್ನು ಆರು ದಶಕಗಳ ವರೆಗೆ ಆಳಿ ಮಾನಸಿಕವಾಗಿ ದುರ್ಬಲವಾಗಿಸಿದ್ದಾರೆ. ಇಲ್ಲಿ ಆಧ್ಯಾತ್ಮಿಕ ಶಕ್ತಿ ಬಲಿಷ್ಠವಾಗಿರುವುದರಿಂದ ಮತ್ತೆ ಜಗತ್ತು ನಿಬ್ಬೆರಗಾಗುವ ರೀತಿ ಬೆಳೆಯುತ್ತಿದೆ. ಪ್ರಗತಿಪರ ಮತ್ತು ಪ್ರಗತಿಶೀಲ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯವಿರಿಸಿ ಶತ್ರು ರಾಷ್ಟ್ರಗಳ ಮನಸ್ಸು ಸಹ ಪರಿವರ್ತಿಸಿದೆ ಎಂದರು.

Advertisement

ಜಾಗತಿಕ ಯುವ ಪೀಳಿಗೆ ಬದಲಾವಣೆಯತ್ತ ಧಾವಿಸಿರುವಾಗ ನಮ್ಮ ಯುವ ಸಂಪತ್ತು ಮುಗ್ಗರಿಸಿದೆ. ಪಾಶ್ಚಾತ್ಯರ ಅನುಕರಣೆ ಹಾಗೂ ತಾಂತ್ರಜ್ಞಾನದ ದುರುಪಯೋಗದಿಂದ ಹೊರಬಂದು ದೇಶಾಭಿಮಾನ ಬೆಳೆಸಿಕೊಂಡು ಇಲ್ಲಿ ಕಲಿತ ಜ್ಞಾನ ಬೇರೆಡೆ ಖರ್ಚು ಮಾಡುವುದರ ಬದಲು ಇಲ್ಲೆ ಉಳಿದು ಹೊಸ ಅವಿಸ್ಕಾರದತ್ತ ಮುನ್ನಡೆಯಬೇಕಿದೆ. ಇದಕ್ಕೆ ಹಿರಿಯರಾದವರು ಮಾರ್ಗದರ್ಶನ ನೀಡಿ ಸಂಸ್ಕಾರ ಹಾಗೂ ಸಂಸ್ಕೃತಿ ಜೊತೆಗೆ ವಿಜ್ಞಾನ ಮತ್ತು ತತ್ವಜ್ಞಾನದ ಆಸರೆಯಲ್ಲಿ ಮಕ್ಕಳನ್ನು ಬೆಳೆಸಬೇಕಿದೆ ಎಂದು ಹೇಳಿದರು.

ಇಂದು ಈ ದೇಶದ ಎಲ್ಲ ಅಂಗಾಂಗಗಳು ಚೆನ್ನಾಗಿದ್ದರೂ ಕಾಶ್ಮಿರವೆಂಬ ಹಲ್ಲು ಅಲುಗಾಡುತ್ತಿದೆ. ಅದನ್ನು ಸರಿಪಡಿಸುವ ಕಾರ್ಯ ಸಹ ನಡೆಯುತ್ತಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಭಾರತ ಶತ ಪ್ರತಿಶತ ಅಭಿವೃದ್ಧಿ ಕಾಣಲು ವಿಫಲವಾಗಿದೆ. ಅಪ್ರಾಮಾಣಿಕ ರಾಜಕಾರಣಿಗಳ ಹಿತಾಸಕ್ತಿಯಿಂದ ದೇಶ ಅನೇಕ ಸಮಸ್ಯೆಗಳಿಗೆ ಬಲಿಯಾಗಿ ತನ್ನ ಅಂತಸತ್ವ ಕಳೆದುಕೊಂಡಿತ್ತು. ಈಗ ಒಳ್ಳೆಯ ಕಾಲ ಕೂಡಿ ಬಂದಿದ್ದು, ಈಗಿರುವ ಕೇಂದ್ರ ಸರ್ಕಾರದ ಧೋರಣೆಗೆ ಜಗ ಮನ್ನಣೆ ಸಿಗುತ್ತಿದೆ. ಇದನ್ನು ಇಲ್ಲಿಯ ವಿಚಾರವಾದಿಗಳು ಅರ್ಥ ಮಾಡಿಕೊಂಡು ಶಕ್ತಿಯುತ ಭಾರತವಾಗಲು ಎಲ್ಲರು ಕೈ ಜೋಡಿಸಬೇಕಾಗಿದೆ ಎಂದರು. 

ವಿಕಾಸ ಅಕಾಡೆಮಿ ವಿಭಾಗೀಯ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಸ್ವಾಗತಿಸಿದರು. ಕೆಆರ್‌ಇ ಸಂಸ್ಥೆ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಜಿಲ್ಲಾಧ್ಯಕ್ಷ ಕರ್ನಲ್‌ ಶರಣಪ್ಪ ಸಿಕೆನಪೂರೆ ವೇದಿಕೆಯಲ್ಲಿದ್ದರು. ಅನೇಕ ಹಿರಿಯರು ಚಕ್ರವರ್ತಿ ಜೊತೆ ಸಂವಾದ ನಡೆಸಿದರು.

ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶಟಕಾರ, ರೈತ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶಟ್ಟಿ, ಸಾಹಿತಿ ಪ್ರೊ| ದೇವೇಂದ್ರ ಕಮಲ, ಜಿಎಸ್‌ಡಿ ಕಾಲೇಜಿನ ಪ್ರಾಚಾರ್ಯ ಡಾ| ಅಶೋಕ ಬಿರಾದಾರ, ಚಿದಂಬರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಚನ್ನಬಸಪ್ಪ ಹಾಲಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ಉದ್ಯಮಿ ಕುಶಾಲ ಪಾಟೀಲ ಖಾಜಾಪುರ, ಸಾಹಿತಿ ಮಾನಶಟ್ಟಿ ಬೆಳಕೇರಿ, ಗುತ್ತಿಗೆದಾರ ವೀರಶಟ್ಟಿ ಮಣಗೆ ಸೇರಿದಂತೆ ಮತ್ತಿತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next