ಹುಬ್ಬಳ್ಳಿ: ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೊಂದಿದ್ದ ಡೈರಿ ಬಹಿರಂಗಗೊಂಡಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಂಪುಟದ ಸಚಿವರು ತಕ್ಷಣ ರಾಜೀನಾಮೆ ನೀಡಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಧಿ ಯವರನ್ನು ಬೆತ್ತಲೆ ಮಾಡುತ್ತೇವೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದರು. ಆದರೀಗ ಅವರೇ ಬೆತ್ತಲಾಗಿದ್ದಾರೆ. ಬಿ.ಎಸ್.ವೈ ಮಾಡಿದ ಆರೋಪಗಳೆಲ್ಲ ಡೈರಿಯಲ್ಲಿ ಬಹಿರಂಗಗೊಂಡಿವೆ. ರಾಜ್ಯ ಸರಕಾರದ ಪ್ರಮುಖ ಖಾತೆಗಳ ಸಚಿವರ ಹೆಸರುಗಳೂ ಬಯಲಾಗಿವೆ.
ಆದ್ದರಿಂದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರಿಗೆ ನೈತಿಕತೆಯಿದ್ದರೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದರು. ಗೋವಿಂದರಾಜು ಬಳಿ ದೊರೆತ ಡೈರಿಯಲ್ಲಿ ಸಿದ್ಧರಾಮಯ್ಯ ಸರಕಾರದ ಅನೇಕ ಸಚಿವರಿಗೆ ಕಪ್ಪ ಕೊಟ್ಟ ಬಗ್ಗೆಯೂ ಉಲ್ಲೇಖಗಳಿವೆ. ಹೈಕಮಾಂಡ್‌ಗೆ ಕಪ್ಪ ಕೊಟ್ಟಿದ್ದಾರೆ ಎನ್ನುವುದನ್ನು ಗೋವಿಂದರಾಜು ಇನ್ನಾದರೂ ಒಪ್ಪಿಕೊಳ್ಳಲಿ.
ನನ್ನನ್ನು ಭೇಟಿ ಮಾಡಲು ನಮ್ಮ ಮನೆಗೂ ನೂರಾರು ಜನರು ಬರುತ್ತಾರೆ. ಹಾಗಾದರೆ ನಮ್ಮ ಮನೆಯಲ್ಲಿ ಏಕೆ ಡೈರಿ ಸಿಗಲಿಲ್ಲ? ಈ ವಿಚಾರವಾಗಿ ಗೋವಿಂದರಾಜು ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು, ಆಗ ಸತ್ಯಾಸತ್ಯತೆ ಏನೆಂಬುದು ಹೊರ ಬರುತ್ತದೆ ಎಂದರು. ನಿಮ್ಹಾನ್ಸ್‌ಗೆ ದಾಖಲಿಸಬೇಕು…
ಯಡಿಯೂರಪ್ಪ ಮಾನಸಿಕ ಅಸ್ವಸ್ಥರಾಗಿದ್ದಾರೆ ಎನ್ನುತ್ತಿದ್ದ ಕಾಂಗ್ರೆಸಿಗರೇ ಈಗ ಆ ಸ್ಥಿತಿಗೆ ತಲುಪಿದ್ದು, ಅವರನ್ನು ನಿಮ್ಹಾನ್ಸ್‌ಆಸ್ಪತ್ರೆಗೆ ದಾಖಲಿಸಬೇಕು. ರಾಜ್ಯ ಸರಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶೆಟ್ಟರ ಹೇಳಿದರು.