ಕಲಬುರಗಿ: ಕಳೆದ ಮೂರ್‍ನಾಲ್ಕು ವರ್ಷದಿಂದ ಮಳೆಯಿಲ್ಲದೇ ಹೈ. ಕ. ಭಾಗದ ರೈತರು ಕಂಗಾಲಾಗಿದ್ದು, ಈ ಬಾರಿ ಮಳೆ ಸರಿಯಾಗಿ ಆಗಿ ತೊಗರಿ ಫಸಲು ಚನ್ನಾಗಿ ಬಂದಿದೆ ಎನ್ನುವುದರಲ್ಲಿ ಮಾರುಕಟ್ಟೆಯಲ್ಲಿ ಧಾರಣೆ ಕುಸಿದು ರೈತರು ಪರದಾಡುವಂತಾಗಿದೆ.
ಕಾರಣ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ತೊಗರಿ ಖರೀದಿಯಲ್ಲಿನ ಅವ್ಯವಹಾರದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಕೃಷಿ ಸಚಿವ ಕೃಷ್ಣಭೈರೇಗೌಡರಿಗೆ ಮನವಿ ಸಲ್ಲಿಸಿತು. ಈ ಭಾಗರ ರೈತರ ಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಣ್ಣ ರೈತರ ಅಂದರೆ ಐದು ಎಕರೆಗೊಳಗಿನವರ ಸಾಲ ಮನ್ನಾ ಮಾಡಬೇಕು.
5 ಎಕರೆ ಮೇಲ್ಪಟ್ಟವರ ಬಡ್ಡಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಸರ್ಕಾರ ತೊಗರಿ ಖರೀದಿ ಮಾಡುತ್ತಿದೆ. ಆದರೂ ಸಹ ರೈತರ ತೊಗರಿ ಸರಿಯಾಗಿ ಹೋಗದೇ ದಲ್ಲಾಳಿಗಳ ಮೂಲಕ ಸಾಕಷ್ಟು ತೊಗರಿ ಖರೀದಿಯಾಗುತ್ತಿದೆ. ಈ ಅವ್ಯವಹಾರದಲ್ಲಿ ತೊಗರಿ ಮಂಡಳಿ ಅಧಿಕಾರಿಗಳು ಶಾಮೀಲಾಗಿದ್ದು, ರೈತರ ತೊಗರಿ ಸರಿಯಾಗಿದ್ದರೂ ಸಹ ಏನಾದರೂ ನೆಪ ಹೇಳಿ ಹಿಂದಿರುಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಲ್ಲಾಳಿಗಳು ತಂದ ತೊಗರಿ ಸಂಪೂರ್ಣವಾಗಿ ಹದಗೆಟ್ಟಿದ್ದರೂ ಖರೀದಿಸಲಾಗುತ್ತಿದೆ. ಯಾವಾಗಲೂ ಚೀಲದ ಅಭಾವವಿದೆ ಎಂದು ಹೇಳಿ ಅಧಿಕಾರಿಗಳು ರೈತರ ಬೆನ್ನಿಗೆ ಚೂರಿಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು. ಸದ್ಯ ಸರ್ಕಾರ ಪ್ರತಿ ಕ್ವಿಂಟಾಲ್ ತೊಗರಿಗೆ 5500 ರೂ. ನಿಗದಿಮಾಡಿದೆ.
ಮಾರುಕಟ್ಟೆಯಲ್ಲಿ ಬಳಸುವ ಗೊಬ್ಬರಗಳು ಹಾಗೂ ಇತರ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದು, ಈ ದರ ಕಡಿಮೆಯಾಗಿದೆ. ಕಾರಣ ತೊಗರಿ ಬೆಂಬಲ ಬೆಲೆಯನ್ನು 6500 ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿದರು. ಜೈಕರವೇ ರಾಜ್ಯಾಧ್ಯಕ್ಷಮಂಜುನಾಥ ಬಿ ಹಾಗರಗಿ, ಜಗನ್ನಾಥ ಪಟ್ಟಣಶೆಟ್ಟಿ, ಬಾಲರಾಜ ಕೋನಳ್ಳಿ, ಗೋವಿಂದ ಯಾದವ, ದತ್ತು ಭೋಸಲೆ, ಆಲೋಕಕುಮಾರ, ರೇವಣಸಿದ್ದ ಹೂಗಾರ ಹಾಗೂ ಇತರರಿದ್ದರು.