Advertisement

ಅವರಿಗೆ ಮನೆ ಜವಾಬ್ದಾರಿಯೇ ಕಡಿಮೆ!

01:49 PM Apr 13, 2018 | |

ಮಂಗಳೂರು: ‘ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾಗ ಅವರು ಹೊರಗಡೆಯೇ ಜಾಸ್ತಿ ಇರುತ್ತಿದ್ದರು. ಮನೆಯ ಜವಾಬ್ದಾರಿಯೇ ಕಡಿಮೆ…’ ಹೀಗೆ ಹೇಳಿ ನಕ್ಕರು ಸುಶೀಲಾ ಸುಂದರ ರಾವ್‌.

Advertisement

ಯಕ್ಷಗಾನ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕಲಾವಿದ ಕುಂಬ್ಳೆ ಸುಂದರ ರಾವ್‌. ಮೇಳದಲ್ಲಿ ಬಣ್ಣ ಹಚ್ಚುತ್ತಿದ್ದವರಿಗೆ ರಾಜಕೀಯವೆಂಬುದು ಅಚಾನಕ್‌ ಆಗಿ ಒಲಿದು ಬಂದದ್ದು. ಬಿಜೆಪಿಯಿಂದ ಸುರತ್ಕಲ್‌ ಕ್ಷೇತ್ರದಲ್ಲಿ ಇಬ್ಬರು ಟಿಕೆಟ್‌ ಆಕಾಂಕ್ಷಿಗಳಿದ್ದಾಗ ಯಾರಿಗೆ ಕೊಡುವುದೆಂದು ಹೊಳೆಯದೆ ಕೊನೆಗೆ ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆದಾಗ ಸಿಕ್ಕಿದವರು ಕುಂಬ್ಳೆ ಸುಂದರ ರಾವ್‌.

ಒಂದರ್ಥದಲ್ಲಿ ರಾವ್‌ ಅವರಿಗೆ ರಾಜಕೀಯ ಕ್ಷೇತ್ರ ಒಲಿದದ್ದೇ ಅಚಾನಕ್‌ ಆಗಿ. ಆ ಕಾಲದಲ್ಲಿ ಕಾಂಗ್ರೆಸ್‌ನ ವಿಜಯ ಕುಮಾರ್‌ ಶೆಟ್ಟಿ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿ 5,000 ಮತಗಳ ಅಂತರದಿಂದ ಜಯಶಾಲಿಯಾದರು.

ರಾವ್‌ ಶಾಸಕರಾದದ್ದು ಸುಮಾರು 15-20 ವರ್ಷಗಳ ಹಿಂದೆ. ಆ ದಿನಗಳ ಅವರ ರಾಜಕೀಯ ಚಟುವಟಿಕೆಗಳ ಬಗ್ಗೆ ಸರಿಯಾಗಿ ನೆನಪಿಲ್ಲ. ಆದರೂ ಹೇಳುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾ ಮಾತು ಆರಂಭಿಸಿದರು ಪತ್ನಿ ಸುಶೀಲಾ.

ನನ್ನನ್ನು ಮದುವೆಯಾಗುವುದಕ್ಕೂ ಮುಂಚೆಯೇ ಅವರು ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು. ಪತಿ ಯಕ್ಷಗಾನದಲ್ಲಿ ಹೆಸರು ಮಾಡುತ್ತಿರುವ ಬಗ್ಗೆ ತುಂಬಾ ಹೆಮ್ಮೆ ಮತ್ತು ಗೌರವವಿತ್ತು. ಜತೆಗೆ ಭಾಷಣ ಕಲೆಯನ್ನೂ ಕರಗತ ಮಾಡಿಕೊಂಡಿದ್ದರು. ಒಂದು ದಿನ ಆಕಸ್ಮಿಕವಾಗಿ ಅವರನ್ನು ಎಂಎಲ್‌ಎ ಟಿಕೆಟ್‌ ಕೂಡ ಹುಡುಕಿಕೊಂಡು ಬಂತು. ನಿಜ ಹೇಳಬೇಕೆಂದರೆ ನನಗೆ ಅವರು ರಾಜಕೀಯಕ್ಕೆ ಹೋಗುವುದು ಇಷ್ಟವಿರಲಿಲ್ಲ. ಆದರೆ ರಾಜಕೀಯಕ್ಕೆ ಅವರನ್ನು ಸೆಳೆಯುವ ಪ್ರಯತ್ನ ಫಲಿಸಿದ್ದಲ್ಲದೆ, ಚುನಾವಣೆಗೆ ನಿಂತು ಮೊದಲ ಬಾರಿಯೇ ಗೆದ್ದುಬಿಟ್ಟರು. ಆ ಕ್ಷಣದಲ್ಲಿ ಪತ್ನಿಯಾಗಿ ನಾನೂ ಖುಷಿ ಪಟ್ಟಿದ್ದೆ.

Advertisement

ಮನೇಲಿರುವುದೇ ಕಡಿಮೆ
ಪತಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದಾಗಲೂ ಮನೆಯಲ್ಲಿದ್ದದ್ದು ತುಂಬಾ ಕಡಿಮೆ. ಆಟ, ಭಾಷಣ ಅಂತೆಲ್ಲ ಹೊರಗಡೆಯೇ ಹೆಚ್ಚು ಚಟುವಟಿಕೆಯಿಂದಿದ್ದರು. ರಾಜಕೀಯಕ್ಕೆ ಇಳಿದ ಮೇಲಂತೂ ಕೇಳುವುದೇ ಬೇಡ. ಮನೆಯ ಜವಾಬ್ದಾರಿ ಎಂಬುದು ಅವರಿಗೆ ತೀರಾ ಕಡಿಮೆಯೇ ಎನ್ನುತ್ತಾ ಎಲ್ಲ ರಾಜಕೀಯ ನಾಯಕರ ಪತ್ನಿಯರಂತೆ ಸುಶೀಲಾ ಅವರೂ ಪತಿಯ ಮೇಲೆ ಒಂದಷ್ಟು ಮುನಿಸು ತೋರ್ಪಡಿಸಿದರು.

ಯಾವಾಗಲೂ ಪ್ರಚಾರ
ಚುನಾವಣೆಗೆ ಎಂಎಲ್‌ಎ ಅಭ್ಯರ್ಥಿಯಾಗಿ ಘೋಷಣೆಯಾದಂದಿನಿಂದ ಮನೆಗೆ ರಾತ್ರಿ 11, 12 ಗಂಟೆಗೆಲ್ಲ ಬರುತ್ತಿದ್ದರು. ಊಟ, ನಿದ್ದೆಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಯಾವಾಗಲೂ ಚುನಾವಣೆ ಪ್ರಚಾರ, ಪ್ರಚಾರ ಅಂತ ಹೋಗುತ್ತಿದ್ದರು. ನಾನಂತೂ ಪ್ರಚಾರಕ್ಕೆ ಹೋಗಿಲ್ಲ. ಅವರು ರಾಜಕೀಯಕ್ಕೆ ಹೋದ ಬಳಿಕ ಮಾಡಿದ ಜನಪರ ಕೆಲಸಗಳ ಬಗ್ಗೆ ತೃಪ್ತಿ ಇದೆ ಎನ್ನುವ ಸುಶೀಲಾ ಅವರಿಗೆ ಇಚ್ಛೆ ಇದ್ದದ್ದು ಮಾತ್ರ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವ ಪತಿಯನ್ನು ಕಾಣಲು.

ಮಕ್ಕಳಿಗೆ ರಾಜಕೀಯ ಬೇಡ
ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದರೆ ನನ್ನ ಮಕ್ಕಳು
ರಾಜಕೀಯಕ್ಕೆ ಹೋಗುವುದು ನನಗೆ ಇಷ್ಟವಿಲ್ಲ. ಮಕ್ಕಳಿಗೂ ಇಷ್ಟವಿಲ್ಲದ ಮಾತದು. ಮಕ್ಕಳಾದ ಶಬಿತಾ, ಮಮತಾ, ಪ್ರಸನ್ನ ಕುಮಾರ್‌, ಪ್ರವೀಣ್‌ ಕುಮಾರ್‌ ವಿವಿಧ ಉದ್ಯೋಗಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ರಾಜಕೀಯದಿಂದ ದೂರ ಇರುವುದು ನನಗೂ ಖುಷಿ ತಂದಿದೆ ಎನ್ನುತ್ತಾರೆ ಸುಶೀಲಾ.

ನನ್ನ ಪತ್ನಿ ರಾಜಕೀಯ ಅಥವಾ ನನ್ನ ಬಗ್ಗೆ ಮಾತನಾಡುವುದು ತೀರಾ ಕಡಿಮೆ. ಮಾತನಾಡುವುದೇ ಇಲ್ಲ ಅಂತಲೂ ಹೇಳಬಹುದು. ಆದರೂ ಈವತ್ತು ಇಷ್ಟೆಲ್ಲ ಮಾತನಾಡಿಸಿದ ಕ್ರೆಡಿಟ್‌ ಉದಯವಾಣಿಗೆ ಸಿಗುತ್ತದೆ.
-ಕುಂಬ್ಳೆ ಸುಂದರ್‌ ರಾವ್‌

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next