Advertisement
ಮಂಗಳೂರು ನಗರದಲ್ಲಿ ಸುಮಾರು 15 ವರ್ಷಗಳ ಹಿಂದೆ ರಸ್ತೆ ಕಾಂಕ್ರೀಟಿಕರಣ, ಅಗಲೀಕರಣ ಕಾಮಗಾರಿಗಳು ನಡೆದಿರುವ ರಸ್ತೆಗಳಲ್ಲಿ ಇನ್ನೂ ಕೂಡ ಫುಟ್‌ಪಾತ್, ಚರಂಡಿ ಕಾಮಗಾರಿಗಳು ಪೂರ್ತಿಯಾಗಿಲ್ಲ. ಉರ್ವಸ್ಟೋರ್‌ನಿಂದ ಪಿವಿಎಸ್ ವೃತ್ತದವರೆಗಿನ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟೀಕರಣ ಕಾಮಗಾರಿ ನಡೆದು ದಶಕವಾದರೂ ಇನ್ನೂ ಫುಟ್‌ಪಾತ್, ಚರಂಡಿ ಕಾಮಗಾರಿಗಳು ಮುಗಿದಿಲ್ಲ.ಪ್ರಸ್ತುತ ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಡೆಸಲಾಗುತ್ತಿದೆ. ಇದೇ ರೀತಿಯಾಗಿ ಬಂಟ್ಸ್‌ಹಾಸ್ಟೆಲ್‌ನಿಂದ ಕದ್ರಿ ಮಲ್ಲಿಕಟ್ಟೆ ರಸ್ತೆ, ಲೇಡಿಹಿಲ್‌ನಿಂದ ಬಳ್ಳಾಲ್‌ಭಾಗ್, ಲೇಡಿಹಿಲ್‌ನಿಂದ ಉರ್ವ ಮಾರುಕಟ್ಟೆ, ಕರಂಗಲ್ಪಾಡಿ ರಸ್ತೆ, ಬಂಟ್‌ಹಾಸ್ಟೆಲ್‌ನಿಂದ ಅಂಬೇಡ್ಕರ್ ವೃತ್ತ ರಸ್ತೆ ಸಹಿತ ನಗರದಲ್ಲಿ ವಿವಿಧೆಡೆಗಳಲ್ಲಿ ಫುಟ್‌ಪಾತ್ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳು ಸಾಗುತ್ತಿದೆ. ಆದರೆ ಈ ಕಾಮಗಾರಿ ಆರಂಭಗೊಂಡು ತಿಂಗಳು ಕಳೆದರೂ ಇನ್ನೂ ಪೂರ್ಣಗೊಳ್ಳುವ ಹಂತಕ್ಕೆ ತಲುಪಿಲ್ಲ.
Related Articles
Advertisement
ಕೆಲವು ಕಡೆ ಕೊಳದ ರೂಪವನ್ನು ಪಡೆದುಕೊಳ್ಳುತ್ತದೆ. ಈ ಅವ್ಯವಸ್ಥೆಗೆ ಯೋಜನೆಯಲ್ಲಿ ಲೋಪ ಒಂದೆಡೆಯಾದರೆ. ಚರಂಡಿ ನಿರ್ಮಾಣ ಕಾರ್ಯವನ್ನು ವಹಿಸಿಕೊಂಡಿರುವ ಗುತ್ತಿಗೆ ಸಂಸ್ಥೆ ಅರ್ಧಂಬರ್ಧ ಕಾಮಗಾರಿ ನಿರ್ಮಿಸಿ ಹಾಗೆಯೇ ಬಿಟ್ಟಿರುವುದು. ಕೆಲವು ಕಡೆ ಜಾಗ ವಿವಾದ ರಸ್ತೆ ಅಗಲೀಕರಣ ಮತ್ತು ವ್ಯವಸ್ಥಿತ ಚರಂಡಿ ನಿರ್ಮಾಣಕ್ಕೆ ಅಡಚಣೆಯಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಸಮಸ್ಯೆ ಮುಂದುವರಿಯಲಿದೆ.
ಕಾಮಗಾರಿಗಳು ವ್ಯವಸ್ಥಿತವಾಗಿರಲಿಪ್ರಸ್ತುತ ನಡೆದಿರುವ ಚರಂಡಿ, ಫುಟ್‌ಪಾತ್ ಕಾಮಗಾರಿಗಳಲ್ಲಿ ಕೆಲವು ಕಡೆ ಅವ್ಯವಸ್ಥೆಗಳು ಕಂಡುಬಂದಿದೆ. ನಗರದಲ್ಲಿ ಈ ಹಿಂದೆ ನಡೆದಿದ್ದ ಚರಂಡಿ ಕಾಮಗಾರಿಗಳಲ್ಲಿ ರಸ್ತೆಯ ನೀರು ಚರಂಡಿಯೊಳಗೆ ಹೋಗಲು ಸಮರ್ಪಕ ವ್ಯವಸ್ಥೆಗಳು ಇಲ್ಲದಿರುವುದು, ಇದ್ದರೂ ಅದನ್ನು ವ್ಯವಸ್ಥಿತವಾಗಿ ಮತ್ತು ಯೋಜನಾಬದ್ಧವಾಗಿ ಮಾಡದಿರುವ ಪರಿಣಾಮ ಮಳೆಗಾಲದಲ್ಲಿ ನೀರು ಚರಂಡಿಯೊಳಗೆ ಹೋಗದೆ ನೀರಿನ ಜತೆಯೇ ಪಾದಚಾರಿಗಳು, ವಾಹನಗಳು ಸಾಗಬೇಕಾದ ಅನಿವಾರ್ಯತೆ ಇದೆ. ಹಿಂದಿನ ಕಾಮಗಾರಿಗಳಲ್ಲಿ ಕಂಡುಬಂದಿರುವ ಸಮಸ್ಯೆಗಳನ್ನು ಗಮನಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಸಂದರ್ಭದಲ್ಲಿ ಈ ಲೋಪಗಳನ್ನು ಸರಪಡಿಸುವ ಬಗ್ಗೆಯೂ ಕ್ರಮಗಳನ್ನು ಕೈಗೊಂಡರೆ ಉತ್ತಮ. ಅಡಚಣೆಗಳ ನಿವಾರಣೆ
ಹೊಸದಾಗಿ ಚರಂಡಿ, ಫುಟ್‌ಪಾತ್‌ಗಳ ನಿರ್ಮಾಣದ ಜತೆಗೆ ಈ ಹಿಂದಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಕಂಡುಬಂದಿರುವ ರಸ್ತೆಗಳಲ್ಲಿ ಈ ಬಾರಿ ಇಂತಹ ಸಮಸ್ಯೆ ತಲೆದೋರದಂತೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಜ್ಯೋತಿವೃತ್ತ, ಬಂಟ್‌ಹಾಸ್ಟೆಲ್, ಕದ್ರಿ ಕಂಬಳ, ಬಿಜೈ, ಕೆ.ಎಸ್.ಆರ್. ರಾವ್ ರಸ್ತೆ, ಎಂ.ಜಿ. ರಸ್ತೆ ಮುಂತಾದೆಡೆಗಳಲ್ಲಿ ಮಳೆಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಗೊಳ್ಳುತ್ತಿದೆ. ಸಂಚಾರವೂ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಲ್ಲಿ ಮಳೆ ನೀರು ಚರಂಡಿಗೆ ಸೇರಲು ಇರುವ ಅಡಚಣೆಗಳನ್ನು ನಿವಾರಿಸಬೇಕಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಅಧಿಕಾರಿಗಳು, ಸಿಬಂದಿ ಬ್ಯುಸಿಯಾಗಿದ್ದರು. ಈಗ ಚುನಾವಣೆ ಮುಗಿದಿದೆ. ಅಧಿಕಾರಿಗಳಿಗೆ ಇತರ ಕೆಲಸಗಳಿಗೆ ಗಮನಹರಿಸಲು ಅವಕಾಶ ಸಿಕ್ಕಿದೆ. ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಚರಂಡಿ, ಫುಟ್‌ಪಾತ್ ಕಾಮಗಾರಿಗಳ ಪ್ರಗತಿ ಹಾಗೂ ಗುಣಮಟ್ಟ ಪರಿಶೀಲನೆ ನಡೆಸಿ ಮಳೆಗಾಲ ಆರಂಭಕ್ಕೆ ಮುಂಚಿತವಾಗಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದು ಅವಶ್ಯವಾಗಿದೆ. - ಕೇಶವ ಕುಂದರ್