ಮಂಗಳೂರು: “ಜನಪರ ಹೋರಾಟ ನಡೆಸಿರುವ ಕಾರಣಕ್ಕೆ ನನ್ನ ಮೇಲೆ ಕೇಸುಗಳನ್ನು ಹಾಕಲಾಗಿದೆಯೇ ವಿನಾ ಪಬ್, ಬಾರ್‌ನಲ್ಲಿ ಗಲಾಟೆ ಮಾಡಿರುವುದಕ್ಕೆ ಅಥವಾ ಗುಂಡು ಹಾರಿಸಿರುವುದಕ್ಕೆ ಅಲ್ಲ. ಹಾಗಾಗಿ ಯಾರು ಹೇಗೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡುವ ಅಗತ್ಯವಿಲ್ಲ’ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರಿನ ಉರ್ವಸ್ಟೋರ್‌ನಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಯಾವುದೇ ಕಳಂಕ ಇಲ್ಲದೆ ಆಡಳಿತ ನಡೆಸಿದೆ. ಅದೇ ರೀತಿಯಲ್ಲಿ ನಾನು ಸಂಸದನಾಗಿ ಕಳೆದ 10 ವರ್ಷಗಳಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಈ ಕ್ಷೇತ್ರದ ಮತದಾರರ ಸೇವೆ ಮಾಡಲು ಪ್ರಯತ್ನಿಸಿದ್ದೇನೆ. ಆದರೆ ಅನ್ಯ ಪಕ್ಷದ ರಾಜಕೀಯ ವಿರೋಧಿಗಳು ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಬೇರೆ ಯಾವುದೇ ವಿಷಯ ಸಿಗುತ್ತಿಲ್ಲ. ಹಾಗಾಗಿ ಸುಳ್ಳು ಹೇಳುವುದೇ ಅವರಿಗೆ ಉಳಿದಿರುವ ದಾರಿ ಎಂದರು.
ಜನಪರ ಹೋರಾಟಕ್ಕೆ ಸಿಕ್ಕ ಕೊಡುಗೆ
“ನಾನು ಇಂದಿನವರೆಗೆ ಯಾವುದೇ ಗೂಂಡಾ ರಾಜಕೀಯ ಮಾಡಿಲ್ಲ. ಈ ಕೇಸುಗಳು ಜಾಸ್ತಿಯಾಗಿರುವುದು ಕೂಡ ಜನಪರ ಹೋರಾಟಕ್ಕೆ ಸಿಕ್ಕ ಕೊಡುಗೆಗಳು. ಜನರಪರ ನಿಂತಾಗ ಇದೆಲ್ಲ ಸಹಜ’ ಎಂದು ಅಭಿಪ್ರಾಯಪಟ್ಟರು.
ನೇತ್ರಾವತಿ-ಎತ್ತಿನಹೊಳೆ ಯೋಜನೆ ತಿರುವು ವಿರುದ್ಧದ ಹೋರಾಟ, ಕಂಬಳ ಉಳಿಸಿ ಹೋರಾಟ, ಜಿಲ್ಲೆಯಲ್ಲಿ ನಡೆದ ಅಮಾಯಕರ ಕೊಲೆಗಳ ವಿರುದ್ಧ ಕುಶಾಲನಗರದಿಂದ ಮಂಗಳೂರಿಗೆ ಪಾದಯಾತ್ರೆ ಮಾಡಿದಾಗ, ಶಬರಿಮಲೆ ಹೋರಾಟದಲ್ಲಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ಅನ್ಯಾಯವಾಗಿ ಬಂಧಿಸಿದಾಗ ಪ್ರಶ್ನಿಸಿದಕ್ಕೆ ನನ್ನ ಮೇಲೆ ಕೇಸುಬಿದ್ದಿವೆ. ಈ ಬಗ್ಗೆ ಎಂದೂ ಪಶ್ಚಾತ್ತಾಪ ಪಟ್ಟಿಲ್ಲ. ಯಾಕೆಂದರೆ ಅವೆಲ್ಲವೂ ಜನರಿಗಾಗಿ ಮಾಡಿದ ಹೋರಾಟಗಳು ಎಂದರು.
ನಮ್ಮದು ಏನಿದ್ದರೂ ಅಭಿವೃದ್ಧಿ ಕುರಿತ ಯೋಚನೆ -ಯೋಜನೆಗಳು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರಗಳಲ್ಲೂ ನಾವು ತೊಡಗಿಕೊಂಡಿಲ್ಲ. ಕಳೆದ 5 ವರ್ಷ ಗಳಲ್ಲಿ 16,505 ಕೋ.ರೂ.ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಕ್ಷೇತ್ರದಲ್ಲಿ ವಿನಿಯೋಗಿಸಲಾಗಿದೆ. ಮುಂದಿನ ಬಾರಿಯೂ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.
ಮೋದಿ ನೇತೃತ್ವದಲ್ಲಿ ನಮ್ಮ ದೇಶವು ವಿದೇಶಗಳ ಮುಂದೆ ಅತ್ಯುನ್ನತ ಸ್ಥಾನ-ಮಾನ ಪಡೆದುಕೊಂಡಿದೆ ಎಂದರು.
ಶಾಸಕ ಡಿ ವೇದವ್ಯಾಸ ಕಾಮತ್, ಮಾಜಿ ಶಾಸಕರಾದ ಎನ್.ಯೋಗೀಶ್ ಭಟ್, ರುಕ್ಮಯ ಪೂಜಾರಿ, ನಾಗರಾಜ್ ಶೆಟ್ಟಿ, ನಿತಿನ್ ಕುಮಾರ್, ಹರಿಕೃಷ್ಣ ಬಂಟ್ವಾಳ, ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ, ರಮೇಶ್ ಕಂಡೇಟು, ಸಂಜಯ್ ಪ್ರಭು, ಜಿತೇಂದ್ರ ಕೊಟ್ಟಾರಿ, ಪ್ರೇಮಾನಂದ ಶೆಟ್ಟಿ, ಭಾಸ್ಕರ್ ಚಂದ್ರ ಶೆಟ್ಟಿ, ರಾಜಗೋಪಾಲ್ ರೈ ಉಪಸ್ಥಿತರಿದ್ದರು.