ಹೊಸದಿಲ್ಲಿ : ರೈಲ್ವೇ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ತನಗೆ ಬರುತ್ತಿರುವ ವ್ಯಾಪಕ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭ್ರಷ್ಟರೆಂದು ಕಂಡು ಬರುವ ರೈಲ್ವೇ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಖಡಕ್ ಆದೇಶ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಜನರಿಂದ ಬರುತ್ತಿರುವ ಎಲ್ಲ ಬಗೆಯ ದೂರು ದುಮ್ಮಾನಗಳಿಗೆ ಒಂದೇ ಟೆಲಿಫೋನ್ ನಂಬರ್‌ನ ಏಕೀಕೃತ ವ್ಯವಸ್ಥೆಯ ಮೂಲಕ ಉತ್ತರಿಸಿ ಅವುಗಳನ್ನು ಪರಿಹರಿಸುವಂತೆ, ಅಪಘಾತಗಳ ಸಂದರ್ಭದಲ್ಲಿ ಸಹಾಯವಾಣಿ ನಂಬರ್ ಮೂಲಕ ಸಕಾಲಿಕ ನೆರವಿಗೆ ಶ್ರಮಿಸುವಂತೆ ರೈಲ್ವೇ ಇಲಾಖೆಗೆ ಸೂಚಿಸಿದ್ದಾರೆ.
ರೈಲು, ರಸ್ತೆ, ವಿದ್ಯುತ್ ರಂಗಕ್ಕೆ ಸೇರಿದಂತೆ ಹಲವಾರು ರಾಜ್ಯಗಳ ಪ್ರಮುಖ ಮೂಲ ಸೌಕರ್ಯ ಯೋಜನೆಗಳ ಪ್ರಗತಿ ಅವಲೋಕನ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಈ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಪಿಟಿಐ ವರದಿಗಳು ತಿಳಿಸಿವೆ.
ಪ್ರೋ ಆ್ಯಕ್ಟೀವ್ ಗವರ್ನನೆನ್ಸ್ ಆ್ಯಂಡ್ ಟೈಮ್‌ಲೀ ಇಂಪ್ಲೆಮೆಂಟೇಶನ್ (ಪ್ರಗತಿ) ಮತ್ತು ಐಸಿಟಿ ಆಧಾರಿತ ಮಲ್ಟಿ ಮೋಡಾಲ್ ಪ್ಲಾಟ್‌ಫಾರ್ಮ್ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಧಾನಿ ಮೋದಿ ಅವರು ರೈಲೇ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವ ವ್ಯವಸ್ಥೆಯನ್ನು ಅಲೋಕಿಸಿದರು.
ರೈಲ್ವೇ ಅಧಿಕಾರಿಗಳು ನಡೆಸುವ ಭ್ರಷ್ಟಾಚಾರಗಳ ಬಗ್ಗೆ ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರೆಂದು ಕಂಡು ಬರುವ ರೈಲ್ವೇ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಖಡಕ್ ಸೂಚನೆ ನೀಡಿದರು.
ಸರಕಾರವು ಎಲ್ಲ ಮಟ್ಟದಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕುವುದಕ್ಕೆ ಬದ್ಧವಿದೆ ಎಂದು ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ, ಒಡಿಶಾ, ಉತ್ತರ ಪ್ರದೇಶ, ಉತ್ತರಾಖಾಂಡ, ಜಮ್ಮು ಕಾಶ್ಮೀರ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಹರಡಿಕೊಂಡಂತೆ ಮೈದಳೆಯುತ್ತಿರುವ ಹಲವು ಇಲಾಖೆಗಳ ಪ್ರಮುಖ ಮೂಲ ಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ಮೋದಿ ಈ ಸಭೆಯಲ್ಲಿ ಅವಲೋಕಿಸಿದರು.