Advertisement

ಭಾರಿ ಪ್ರಮಾಣದ ಆಸ್ತಿ ಜಿಲ್ಲಾಡಳಿತದ ತೆಕ್ಕೆಗೆ

11:46 AM Mar 19, 2017 | Team Udayavani |

ಬೆಂಗಳೂರು: ನಗರ ಐದು ತಾಲೂಕುಗಳಲ್ಲಿ ಏಕಕಾಲದಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತದ ಅಧಿಕಾರಿಗಳು 835.50 ಕೋಟಿ ಮೌಲ್ಯದ 38.08 ಎಕರೆ ಜಮೀನು ವಶಕ್ಕೆ ಪಡೆದಿದ್ದಾರೆ. 

Advertisement

ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್‌.ಪುರ ಹೋಬಳಿಯ ದೇವಸಂದ್ರದ 1 ಎಕರೆಯನ್ನು ವಶಪಡಿಸಿ ಕೊಳ್ಳಲಾಯಿತು. ಬೆಂಗಳೂರು ದಕ್ಷಿಣ  ತಾಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೆ ಸಂಖ್ಯೆ 1 ರಲ್ಲಿ 4.31 ಎಕರೆ ಸರ್ಕಾರಿ ಜಾಗವನ್ನು  ವೇಣುಗೋಪಾಲ್‌ ಒತ್ತುವರಿ ಮಾಡಿಕೊಂಡು  ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಒತ್ತುವರಿ ಜಾಗದಲ್ಲಿ ದೇವಸ್ಥಾನ, ಮೂರು ವಾಣಿಜ್ಯ ಸಂಕೀರ್ಣಗಳು ಮತ್ತು ಅವುಗಳಲ್ಲಿ 32 ಮಳಿಗೆಳನ್ನು ನಿರ್ಮಿಸಲಾಗಿತ್ತು.  

ಒತ್ತುವರಿ ತೆರವಿಗೆ ಮುಂದಾದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ನಂತರ ಪೊಲೀಸರು ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲು ಅನುವು ಮಾಡಿಕೊಟ್ಟರು. ಆನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿ.ಶಂಕರ್‌ ಜನರನ್ನು ಸಮಾಧಾನ ಪಡೆಸಿ ದೇವಾಲಯಗಳನ್ನು ಮುಜಾರಾಯಿ ಇಲಾಖೆ ವಶಕ್ಕೆ ನೀಡಿ, ಸ್ಥಳೀಯರನ್ನು ಒಳಗೊಂಡ ದೇವಾಲಯ ಆಡಳಿತ ಮಂಡಳಿ ನೇಮಿಸುವ ಭರವಸೆ ನೀಡಿದರು. 

ಉತ್ತರ ತಾಲೂಕಿನ ದಾಸನಪುರ ಹೋಬಳಿಯ ವಡ್ಡರಹಳ್ಳಿ ಗ್ರಾಮದಲ್ಲಿ 2 ಎಕರೆಯನ್ನು ತಿಮ್ಮಯ್ಯ ಎಂಬುವವರು ಹಾಗೂ ಲಕ್ಷಿಪುರದ ಸರ್ವೆ 4.26 ಎಕರೆ ಜಾಗವನ್ನು ರಾಮಣ್ಣ ಎಂಬುವವರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿದಾರರಿಗೆ ನೋಟಿಸ್‌ ನೀಡಿದ ಅಧಿಕಾರಿಗಳು ಜಾಗವನ್ನು ವಶಕ್ಕೆ ಪಡೆದರು.  ಬೆಂಗಳೂರು ಉತ್ತರ (ಅಪರ) ತಾಲೂಕಿನ ಯಲಹಂಕ ತಾಲೂಕಿನ ದೊಡ್ಡ ಬೊಮ್ಮಸಂದ್ರದ 20 ಗುಂಟೆ ಹಾಗೂ ಜಾಲ ಹೋಬಳಿಯ ಹುತ್ತನಹಳ್ಳಿ ಗ್ರಾಮದಲ್ಲಿ  20.15 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್‌ ನೀಡಿ ಜಿಲ್ಲಾಡಳಿತದ ವಶಕ್ಕೆ ಪಡೆಯಲಾಯಿತು. 

ಸರ್ಜಾಪುರ ಹೋಬಳಿಯ ಕಗ್ಗಲೀಪುರ ಗ್ರಾಮದ 2.11 ಎಕರೆ ಮತ್ತು ಜಿಗಣಿಯ  13 ಗುಂಟೆ, ಹುಲ್ಲಹಳ್ಳಿ ಗ್ರಾಮದಲ್ಲಿ 10 ಗುಂಟೆ ಮತ್ತು ಅತ್ತಿಬೆಲೆ ಹೋಬಳಿ, ಅರೇನೂರು ಗ್ರಾಮದಲ್ಲಿ  29 ಗುಂಟೆ, ಸಮಂದೂರಿನಲ್ಲಿ  22 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ನೋಟಿಸ್‌ ನೀಡಿ ತಹಸೀಲ್ದಾರ್‌ ಅವರು ಜಾಗವನ್ನು ವಶಕ್ಕೆ ಪಡೆದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next