ರಾಯಚೂರು: ನಗರದ ಹೃದಯ ಭಾಗದ ಸಭಾಂಗಣದಲ್ಲಿ ಕಾಂಗ್ರೆಸ್‌ನ ವಿಭಾಗ ಮಟ್ಟದ ಸಮಾವೇಶ ನಡೆಸಿದ್ದರಿಂದ ಕಾಂಗ್ರೆಸ್‌ಗೆ ಚಲ್ಲಾಟ ಸಾರ್ವಜನಿರಕಗೆ ಸಂಕಟ ಎನ್ನುವಂತಾಗಿತ್ತು. ಟ್ರಾμಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡಿದರೆ; ಕೋವಿಡ್ ನಿಯಮಗಳನ್ನು ಲೆಕ್ಕಿಸದೆ ಗುಂಪು ಸೇರಿದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು.
ನಗರದ ಗಾಂಧಿ ವೃತ್ತದಲ್ಲಿರುವ ರಾಯಚೂರು ಹಬ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಒಳಗೊಂಡಂತೆ ಕಾಂಗ್ರೆಸ್ ಪ್ರತಿನಿಧಿಗಳ ಸಭೆ ಆಯೋಜಿಸಲಾಗಿತ್ತು. ಸಭೆಗೆ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಮುಖಂಡರು ಆಗಮಿಸಿದ್ದರು. ಮುಖಂಡರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರಿಂದ ರಸ್ತೆ ಸಂಪೂರ್ಣ ಕೆಲಕಾಲ ಸಂಚಾರಕ್ಕೆ ಅಡಚಣೆಯಾಯಿತು.
ನಗರದ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸಂಪರ್ಕ ರಸ್ತೆಯಾದ್ದರಿಂದ ಪ್ರಯಾಣಿಕರಿಗೆ ಪರದಾಡುವಂತಾಯಿತು. ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರಿಗೆ ಕ್ರೇನ್ ಮೂಲಕ ಹಾರ ಹಾಕಲು ಮುಂದಾಗಿದ್ದರಿಂದ ಸಾಕಷ್ಟು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಸಭೆಗೆ ಶಾಸಕರು, ಸಂಸದರು, ವಿವಿಧ ಜಿಲ್ಲೆಗಳ ಅಧ್ಯಕ್ಷರು ಸೇರಿದಂತೆ 200ಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಿದ್ದರು. ಎಲ್ಲರೂ ಕಾರುಗಳನ್ನು ತಂದಿದ್ದರಿಂದ ರಸ್ತೆಯಲ್ಲಿ ಕೆಲಕಾಲ ಓಡಾಡುವುದು ಕಷ್ಟ ಎನ್ನುವಂತಾಗಿತ್ತು. ಕೊನೆಗೆ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು ಲಾಠಿ ಬೀಸಬೇಕಾಯಿತು.
ಸಿದ್ದು-ಡಿಕೆಶಿ ಎದುರೇ ಹೈಡ್ರಾಮಾ
ನಗರದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ವಿಭಾಗೀಯ ಸಭೆಗೆ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎದುರೇ ಕಾರ್ಯಕರ್ತರು ಅತಿರೇಕದ ಅಭಿಮಾನ ತೋರುವ ಮೂಲಕ ಮುಖಂಡರಿಗೆ ಮುಜುಗುರ ಉಂಟು ಮಾಡಿದರು. ನಗರದ ಕಾಂಗ್ರೆಸ್ ಕಚೇರಿಗೆ ಮುಖಂಡರು ಬರುತ್ತಿದ್ದಂತೆ ಕಾರ್ಯಕರ್ತರು ಕೋವಿಡ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ನೂಕು ನುಗ್ಗಲು ಮಾಡಿದರು.
ಜೋರಾಗಿ ಘೋಷಣೆ ಕೂಗಿದ್ದಲ್ಲದೇ ಪಕ್ಷದ ಕಚೇರಿಯೊಳಗೆ ಮುಖಂಡರನ್ನು ಮೇಲೆತ್ತಿ ಕುಣಿದು ಕುಪ್ಪಳಿಸಿದರು. ಕೋವಿಡ್ 3ನೇ ಅಲೆ ನಿಯಂತ್ರಣದ ಬಗ್ಗೆ ಸರ್ಕಾರದ ವಿರುದ್ಧ ಟೀಕೆ ಮಾಡುವ ಕಾಂಗ್ರೆಸ್ ನಾಯಕರು ಮಾತ್ರ ಕೊರೊನಾ ಬಗ್ಗೆ ಕಿಂಚಿತ್ತೂ ಯೋಚಿಸದಿರುವುದು ವಿಪರ್ಯಾಸ. ಬಹುತೇಕ ಕಾರ್ಯಕರ್ತರು ಮಾಸ್ಕ್ ಹಾಕಿರಲಿಲ್ಲ. ಅಲ್ಲದೇ, ಸುಮಾರು 10 ನಿಮಿಷಗಳ ಕಾಲ ಒಂದೇ ಸಮನೆ ಹಾರಾಟ ಚೀರಾಟ ನಡೆಸಿದ್ದು ನೆರೆದವರಲ್ಲಿ ಬೇಸರ ತರಿಸಿತು. ಅಷ್ಟೇ ಅಲ್ಲದೇ ಬೈಕ್‌ಗಳ ಸೈಲೆನ್ಸರ್ ತೆಗೆದು ನಗರದಲ್ಲಿ ವಿವಿಧೆಡೆ ಸಾಕಷ್ಟು ಹೊತ್ತು ಬೈಕ್‌ರ್ಯಾಲಿ ನಡೆಸಿದ್ದು ಸಾರ್ವಜನಿಕರಿಗೆ ಕಿರಿಕಿರಿ ಎನಿಸಿತು.