ಬೆಂಗಳೂರು: ನಗರದ ಮೋದಿ ಆಸ್ಪತ್ರೆ ರಸ್ತೆಯಲ್ಲಿ 10.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಯನ್ನು ಫೆಬ್ರುವರಿ ಅಂತ್ಯದ ವೇಳೆಗೆ ಪೂರ್ಣಗೊಳಿಸುವಂತೆ ಮೇಯರ್ ಜಿ. ಪದ್ಮಾವತಿ ಸೂಚನೆ ನೀಡಿದ್ದಾರೆ.
ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿದೆ ಎಂಬ ಕುರಿತು ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಟೆಂಡರ್‌ಶ್ಯೂರ್ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದ ಅವರು ಟೆಂಡರ್‌ಶ್ಯೂರ್ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕುರುಬರಹಳ್ಳಿಯಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆವರೆಗೆ ನಡೆಯುತ್ತಿರುವ ಕಾಮಗಾರಿ ವೇಳೆ ಪಾದಚಾರಿ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಂಡರ್ ಶ್ಯೂರ್ ಕಾಮಗಾರಿ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಜಲಮಂಡಳಿ ಕೊಳವೆ ಮಾರ್ಗ ಹಾಗೂ ಓಎಫ್ಸಿ ಕೇಬಲ್ ಅಳವಡಿಸಿದ ಬಳಿಕ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಲಿದೆ ಎಂದರು. ಕೆಎಚ್‌ಬಿ ಕಾಲೋನಿ ಬಳಿ ನಿರ್ಮಾಣವಾಗುತ್ತಿರುವ ಕೆಳಸೇತುವೆ ಕಾಮಗಾರಿಯನ್ನು ಪರಿಶೀಲಿಸಿ ಮಂದಗತಿಯಲ್ಲಿ ನಡೆದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕೆಳಸೇತುವೆ ಕಾಮಗಾರಿಯಲ್ಲಿ ಸಿಮೆಂಟ್ ಕ್ಯೂರಿಂಗಿಗಾಗಿ ಸಾಕಸ್ಟು ಸಮಯ ಹಿಡಿಯಲಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಮತ್ತಷ್ಟು ಸಿಟ್ಟಾದ ಮೇಯರ್, ಈಗಾಗಲೇ ಕಾಮಗಾರಿ ವಿಳಂಬವಾಗಿದ್ದು ಮಾರ್ಚ್ ಒಳಗಾಗಿ ಕಾಮಗಾರಿ ಸಾರ್ವಜನಿಕರ ಸೇವೆಗೆ ಮುಕ್ತವಾಗಬೇಕು ಎಂದರು ಹೇಳಿದರು. ಆಡಳಿತ ಪಕ್ಷದ ನಾಯಕ ಮಹಮ್ಮದ್ ರಿಜ್ವಾನ್ ನವಾಬ್, ಪಾಲಿಕೆ ಮುಖ್ಯ ಇಂಜಿನಿಯರ್ ಕೆ.ಟಿ. ನಾಗರಾಜ್ ಮತ್ತಿತರರು ಹಾಜರಿದ್ದರು.
ಅಧಿಕಾರಯುತ ಸಮಿತಿ ರದ್ದತಿಗೆ ಆಗ್ರಹ: ಬಿಬಿಎಂಪಿಯ ಅಧಿಕಾರವನ್ನು ಕಿತ್ತುಕೊಂಡು ಕಾಮಗಾರಿಗಳ ಅನುಮೋದನೆಗೆ ನಗರಾಭಿವೃದ್ಧಿ ಇಲಾಖೆ ಅಡಿ ಅಧಿಕಾರಯುತ ಸಮಿತಿ ರಚನೆ ವಿರುದ್ಧ ಜೆಡಿಎಸ್ ಮತ್ತೂಮ್ಮೆ ಆಕ್ರೋಶ ವ್ಯಕ್ತಪಡಿಸಿದೆ. ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಭದ್ರೇಗೌಡ ಸಮಿತಿ ರದ್ದುಪಡಿಸುವಂತೆ ಕಾಮಗಾರಿ ಪರಿಶೀಲನೆ ವೇಳೆ ಮೇಯರ್‌ಗೆ ಒತ್ತಾಯಿಸಿದರು.