ಬೆಂಗಳೂರು: ಇತ್ತೀಚೆಗಷ್ಟೇ ಉಗ್ರರ ಜತೆ ಸಿಕ್ಕಿಬಿದ್ದ ಜಮ್ಮು-ಕಾಶ್ಮೀರದ ಉಪ ಪೊಲೀಸ್ ಆಯುಕ್ತ ದೇವೀಂದರ್ ಸಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯವು ದೇಶದ ಎಲ್ಲ ಹಂತದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದೆ.
ಕೇಂದ್ರ ಗುಪ್ತಚರ ಇಲಾಖೆಗೆ ಮತ್ತು ಆಯಾ ರಾಜ್ಯ ಗೃಹ ಸಚಿವಾಲಯಗಳಿಗೆ ಅಂತಹದೊಂದು ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಅದರಂತೆ ಕರ್ನಾಟಕದಲ್ಲೂ ಗೌಪ್ಯವಾಗಿ ಅಧಿಕಾರಿಗಳ ಕಾರ್ಯವೈಖರಿ ಮತ್ತು ಅವರ ಪೂರ್ವಾಪರ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದೆ. ಕೇಂದ್ರ ಗುಪ್ತಚರ ಇಲಾಖೆ ಈ ಕುರಿತಂತೆ ಈಗಾಗಲೇ ಕಾರ್ಯ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ತೊಂಬತ್ತರ ದಶಕಗಳಿಂದಲೂ ಕಣಿವೆ ರಾಜ್ಯದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯ ಮುಂದಾಳತ್ವ ವಹಿಸುತ್ತಿದ್ದ ದೇವೀಂದರ್ ಸಿಂಗ್ ಹಣದ ಆಮಿಷಕ್ಕೊಳಗಾಗಿ ಇಬ್ಬರು ಉಗ್ರರನ್ನು ದಿಲ್ಲಿಗೆ ಕರೆದೊಯ್ಯಲು ಮುಂದಾಗಿದ್ದರು ಎಂಬ ವಿಷಯ ಇತ್ತೀಚೆಗೆ ಬಹಿರಂಗವಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರದ ಗೃಹ ಸಚಿ ವಾಲಯ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಗಳ ಸಹಿತ ಎಲ್ಲ ಹಂತದ ಅಧಿಕಾರಿ ಗಳು, ಸಿಬಂದಿಯ ಕರ್ತವ್ಯನಿಷ್ಠೆ , ಅವರ ಆರ್ಥಿಕ ಪರಿ ಸ್ಥಿತಿ, ಯಾರ ಜತೆ ಸಂಪರ್ಕ ಹೊಂದಿದ್ದಾರೆ ಎಂಬೆಲ್ಲ ಮಾಹಿತಿ ಯನ್ನು ಗೌಪ್ಯವಾಗಿ ಸಂಗ್ರಹಿಸಿ ವರದಿ ನೀಡುವಂತೆ ಗುಪ್ತ ಚರ ಇಲಾಖೆಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರ ನಿಗ್ರಹ ಪಡೆಗಳು, ಕರಾವಳಿ ಕಾರ್ಯಪಡೆ, ಆಂತರಿಕ ಭದ್ರತಾ ದಳ, ನಕ್ಸಲ್ ನಿಗ್ರಹ ಪಡೆ, ಗುಪ್ತಚರ ದಳ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳ ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ವರ್ಷ ಗಟ್ಟಲೆ ಒಂದೇ ವಿಭಾಗ ಅಥವಾ ಒಂದೇ ತನಿಖಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಹೆಚ್ಚು ನಿಗಾ ವಹಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ವರ್ಗಾವಣೆಗೆ ಸಿದ್ಧತೆ?
ಕೇಂದ್ರ ಗೃಹ ಸಚಿವಾಲಯದ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಅನೇಕ ವರ್ಷಗಳಿಂದ ಒಂದೆಡೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆಡೆ ಎತ್ತಂಗಡಿ ಮಾಡಲು ರಾಜ್ಯ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ. ಐದು ವರ್ಷ ಮೇಲ್ಪಟ್ಟು ಒಂದೇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ನಡೆದುಕೊಳ್ಳುವ ಆರೋಪಗಳು ಮೊದಲಿನಿಂದಲೂ ಕೇಳಿಬಂದಿವೆ. ಅಂತಹ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಲು ಕೆಳ ಹಂತದ ಅಧಿಕಾರಿಗಳಿಗೆ ರಾಜ್ಯ ಸರಕಾರ ಮತ್ತು ಡಿಜಿಪಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
– ಮೋಹನ್ ಭದ್ರಾವತಿ