Advertisement

ಇಂದು ಸಿಎಂ ದಿಲ್ಲಿಗೆ; ಗರಿಗೆದರಿದ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ

02:21 AM Apr 05, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರದಿಂದ ಎರಡು ದಿನಗಳ ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಅಧಿಕೃತ ಭೇಟಿ ರಾಜ್ಯದ ಯೋಜನೆಗಳ ಕುರಿತು ಚರ್ಚಿಸಲು ಎಂದಿದ್ದರೂ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಕುರಿತು ವರಿಷ್ಠ ನಾಯಕ ರನ್ನು ಭೇಟಿ ಮಾಡುವ ಉದ್ದೇಶ ಇದ್ದು, ಬಿಜೆಪಿಯ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಆಸೆ ಗರಿಗೆದರುವಂತೆ ಮಾಡಿದೆ.

Advertisement

ವಿಧಾನ ಮಂಡಲದ ಅಧಿವೇಶನ ಮತ್ತು ಪಂಚ ರಾಜ್ಯಗಳ ಚುನಾವಣೆ ಮುಗಿದಿರುವುದರಿಂದ ಸಚಿವ ಸ್ಥಾನಾ ಕಾಂಕ್ಷಿಗಳ ಬಹುದಿನಗಳ ಬೇಡಿಕೆಗೆ ಈ ಬಾರಿಯಾದರೂ ವರಿಷ್ಠರಿಂದ ಹಸುರು ನಿಶಾನೆ ಲಭಿಸು ತ್ತದೆ ಎಂಬ ನಿರೀಕ್ಷೆಯಿದೆ. ಆಕಾಂಕ್ಷಿಗಳು ಅಂದು ಕೊಂಡಂತೆ ಸಿಎಂ ಅವರು ವರಿಷ್ಠರನ್ನು ಭೇಟಿಯಾದರೆ ಈ ವಾರಾಂತ್ಯದಲ್ಲೇ ಸಂಪುಟಕ್ಕೆ ಹೊಸಬರ ಸೇರ್ಪಡೆ ಆಗಲಿದೆ ಎನ್ನಲಾಗಿದೆ.

ಬಿಜೆಪಿ 2023ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ಕಾರ್ಯತಂತ್ರ ರೂಪಿಸುತ್ತಿದ್ದು, ಸಂಪುಟ ಪುನಾರಚನೆ ಅದರ ಒಂದು ಭಾಗ ಎನ್ನಲಾಗಿದೆ.

ಈಗ ಖಾಲಿ ಇರುವ 4 ಸ್ಥಾನಗಳ ಜತೆಗೆ ಐದರಿಂದ ಆರು ಹಿರಿಯ ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಚಿಂತಿಸಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತ್ತು ರಾಜ್ಯದೆಲ್ಲೆಡೆ ಕುರುಬ ಸಮುದಾಯದ ಮತಗಳನ್ನು ಸೆಳೆಯಲು ಪಕ್ಷ ಕಾರ್ಯ ತಂತ್ರ ರೂಪಿಸುತ್ತಿದೆ ಎನ್ನಲಾಗಿದ್ದು, ಅದಕ್ಕೆ ಪೂರಕವಾಗಿ ಸಂಪುಟ ಪುನಾ ರಚನೆಯಾಗಲಿದೆ ಎನ್ನಲಾಗಿದೆ.

Advertisement

ಸಂಪ್ರದಾಯ ಪಾಲನೆ
ಸಂಪ್ರದಾಯದಂತೆ ಬಜೆಟ್‌ ಅನಂತರ ಸಿಎಂ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಹಣ ಕಾಸು ಸಚಿವೆ ನಿರ್ಮಲಾ ಸೀತಾ ರಾಮನ್‌ ಅವರನ್ನು ಭೇಟಿ ಮಾಡಿ, ಅಭಿನಂದನೆ ಸಲ್ಲಿಸುವುದರ ಜತೆಗೆ ರಾಜ್ಯದ ಯೋಜನೆಗಳ ಕುರಿತು ಚರ್ಚಿ ಸುವ ಸಾಧ್ಯತೆ ಇದೆ. ಇದಲ್ಲದೆ ಮುಖ್ಯವಾಗಿ ರಾಜ್ಯ ಸರಕಾರ ಕೈಗೆತ್ತಿ ಕೊಳ್ಳಲಿರುವ ಮೇಕೆದಾಟು ಯೋಜನೆಗೆ ತ.ನಾಡು ಸರಕಾರ ತಕರಾರು ತೆಗೆಯುತ್ತಿರುವ ಬಗ್ಗೆಯೂ ಪ್ರಸ್ತಾವಿಸುವ ಸಾಧ್ಯತೆಯಿದೆ.

ಇತ್ತೀಚೆಗೆ ತಮಿಳುನಾಡು ವಿಧಾನ ಸಭೆಯಲ್ಲಿ ಮೇಕೆದಾಟು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ತ.ನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ, ಈ ಯೋಜನೆಗೆ ಅನುಮತಿ ನೀಡದಂತೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ರಾಜ್ಯದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ದಂತೆ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ ಅವರನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಭೇಟಿ ಮಾಡಿ, ಯೋಜನೆಯ ಅಗತ್ಯ ಮತ್ತು ತ.ನಾಡಿನ ವಿರೋಧದಲ್ಲಿ ಹುರುಳಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎನ್ನಲಾಗಿದೆ.

ಚರ್ಚೆ ಸಾಧ್ಯತೆಗಳು
1.ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ವರಿಷ್ಠರ ಜತೆ ಸಮಾಲೋಚನೆ
2.2023ರ ವಿಧಾನಸಭೆ ಚುನಾವಣೆ ಕಾರ್ಯತಂತ್ರ ಬಗ್ಗೆ ಮಾತುಕತೆ
3.ಮೇಕೆದಾಟು ಯೋಜನೆಗೆ ತ. ನಾಡಿನ ತಕರಾರು ಕುರಿತು ಪ್ರಸ್ತಾವ
4.ರಾಜ್ಯದ ನೀರಾವರಿ ಯೋಜನೆ ಗಳಿಗೆ ಕೇಂದ್ರದ ಅನುಮತಿ ಬಗ್ಗೆ ಚರ್ಚೆ

 

Advertisement

Udayavani is now on Telegram. Click here to join our channel and stay updated with the latest news.

Next