ಕೊಪ್ಪಳ: ಎಲ್ಲರೂ ಕೈ ಜೋಡಿಸಿದರೆ ಮಾತ್ರ ಸಮೃದ್ಧ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿಯೇ ವಿಶ್ವಾದ್ಯಂತ ಆರೋಗ್ಯ ದಿನ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.
ಯಲಬುರ್ಗಾದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಸರಕಾರಿ ಪಪೂ ಕಾಲೇಜು ಸಹಯೋಗದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯು 1945ರಲ್ಲಿ ಸ್ಥಾಪನೆಯಾಯಿತು. 1948ರಲ್ಲಿ ಜಗತ್ತಿನ 166 ರಾಷ್ಟ್ರಗಳು ಸದಸ್ಯತ್ವ ಪಡೆದು ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಮುಂದೆ ಬಂದವು. ಅದೇ ವರ್ಷ ಏ. 7ರಂದು ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಪ್ರತಿವರ್ಷ ಒಂದು ಘೋಷ ವಾಕ್ಯದೊಂದಿಗೆ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಂದಿನಿಂದ ಇವತ್ತಿನವರೆಗೂ ಪ್ರತಿವರ್ಷ ಏ. 7ರಂದು ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತಿದೆ ಎಂದರು. ಪ್ರಸಕ್ತ ವರ್ಷದ ಘೋಷಣೆ ಸುಂದರವಾದ ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು ಎಂಬುದಾಗಿದೆ. ಅಂದರೆ ಕೋವಿಡ್-19 ಕಾಯಿಲೆಯಿಂದ ಎಲ್ಲ ರಾಷ್ಟ್ರಗಳು ಆರೋಗ್ಯ ದೃಷ್ಟಿಯಿಂದ ಹಾಗೂ ಆರ್ಥಿಕವಾಗಿ ಬಲಹೀನವಾಗಿವೆ.
ಕೋವಿಡ್-19 ನಿಯಂತ್ರಣ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳಿಂದ ಜನರ ಆರೋಗ್ಯ ರಕ್ಷಿಸುವುದು ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಇಲಾಖೆ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಶ್ರೀಕಾಂತ ಎಚ್. ಎಚ್. ಮಾತನಾಡಿ, ಕೋವಿಡ್ ಕಾಯಿಲೆ ಹರಡುವಿಕೆ, ಅದರ ಲಕ್ಷಣಗಳು, ಚಿಕಿತ್ಸೆ, ಮುಂಜಾಗ್ರತಾ ಕ್ರಮ, ಕೋವಿಡ್ ಲಸಿಕೆ ಕುರಿತು ವಿವರಿಸಿದರು. ಹಿರಿಯ ಆರೋಗ್ಯ ಸಹಾಯಕ ಚನ್ನಬಸಯ್ಯ ಅವರು ಸಾಂಕ್ರಾಮಿಕ ರೋಗದ ಕುರಿತು, ಪ್ರಭಾರಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಶೋಕ ಆಲೂರ ಅವರು ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ನಿವಾರಣಾ ಕಾರ್ಯಕ್ರಮ ಕುರಿತು, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಇಮ್ತಿಯಾಜ್ ನೆವಾರ್ ಅವರು ಸೊಳ್ಳೆಯಿಂದ ಹರಡುವ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಶರಣಪ್ಪ ಬೇಲೇರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಹ-ಉಪನ್ಯಾಸಕರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.